ಚಿಕ್ಕಮಗಳೂರು, ಜನವರಿ 11: ಶರಣಾದ ಆರು ಮಂದಿ ನಕ್ಸಲರು (Naxal) ಬಳಸುತ್ತಿದ್ದ ಶಸ್ತ್ರಾಸ್ತ್ರಗಳು (Weapons) ಪತ್ತೆಯಾಗಿವೆ. ಕೊಪ್ಪ (Koppa) ತಾಲೂಕಿನ ಮೇಗೂರು ಅರಣ್ಯದಲ್ಲಿ ಹೂತು ಇಡಲಾಗಿದ್ದ AK 56 ಗನ್, ರಿವಾಲ್ವಾರ್, ಬಂದೂಕು ಸೇರಿದಂತೆ 6 ಶಸ್ತ್ರಾಸ್ತ್ರಗಳನ್ನು ಚಿಕ್ಕಮಗಳೂರು ಪೊಲೀಸರು ಜಪ್ತಿ ಮಾಡಿದ್ದಾರೆ. ನಕ್ಸಲರು ಶರಣಾಗತಿಗೂ ಮುನ್ನ ಮೇಗೂರು ಅರಣ್ಯದಲ್ಲಿ ಅಡಗಿದ್ದರು. ಶರಣಾಗುವ ದಿನ ಮೇಗೂರು ಅರಣ್ಯದಲ್ಲೇ ಕೊನೆಯಬಾರಿಗೆ ಸಭೆ ನಡೆಸಿದ್ದರು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಶರಣಾಗಿದ್ದರು.
ಶರಣಾಗತಿ ವೇಳೆ ಶಸ್ತ್ರಾಸ್ತ್ರ ಹಸ್ತಾಂತರವಾಗ ಬಗ್ಗೆ ಚರ್ಚೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೊಪ್ಪ ಠಾಣೆ ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಕಳೆದ ಎರಡು ದಿನಗಳಿಂದ ಹುಡುಕಾಟ ನಡೆಸಿ ಶಸ್ತ್ರಾಸ್ತ್ರಗಳನ್ನು ಪತ್ತೆಹಚ್ಚಿದೆ. ನಕ್ಸಲರು ಕೊನೆಯಬಾರಿಗೆ ಸಭೆ ನಡೆಸಿದ್ದ ಸ್ಥಳದಲ್ಲೇ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳಿಂದ ಮಾಹಿತಿ ದೊರೆತಿದೆ.
ಒಂದು AK 56, ಮೂರು 303 ರೈಫಲ್, ಒಂದು 12 bore SBBL, ಒಂದು ಕಂಟ್ರಿ ಮೇಡ್ ಪಿಸ್ತೂಲ್ ಸೇರಿಂದತೆ ಒಟ್ಟು 6 ಬಂದೂಕು ಪತ್ತೆಯಾಗಿವೆ. ಜೊತೆಗೆ ಹನ್ನೊಂದು 7.62ಎಂಎಂ AK ammunitions, 303 ಬಂದೂಕಿನ 133 ಗುಂಡುಗಳು ಸೇರಿದಂತೆ 176 ಜೀವಂತ ಗುಂಡುಗಳು ಪತ್ತೆಯಾಗಿವೆ. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ 25(1ಬಿ), 7 ಮತ್ತು 25(1ಎ) ಶಸ್ತ್ರಾಸ್ತ್ರ ಕಾಯ್ದೆ 1959 ಅಡಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: 6 ನಕ್ಸಲರ ಶರಣಾಗತಿ ಬೆನ್ನಲ್ಲೇ ನಕ್ಸಲರ ಪಟ್ಟಿಯಲ್ಲಿ ಉಳಿದ ಏಕೈಕ ನಕ್ಸಲ್
ಇನ್ನು, ಕಾಂಗ್ರೆಸ್ ಸರ್ಕಾರ 2024ರಲ್ಲಿ ಹೊಸ ನಕ್ಸಲ್ ಶರಣಾಗತಿ ಪ್ಯಾಕೇಜ್ ಘೋಷಣೆ ಮಾಡಿತ್ತು. ಇದರಲ್ಲಿ ಶರಣಾಗತಿಯಾಗುವ ನಕ್ಸಲರು ತಮ್ಮ ಬಳಿ ಇರುವ ಶಸ್ತ್ರಾಸ್ತ್ರಗಳನ್ನ ಸರ್ಕಾರಕ್ಕೆ ಒಪ್ಪಿಸಿದರೇ ಪ್ರತಿ ಶಸ್ತ್ರಕ್ಕೂ ಹಣ ನೀಡುವುದಾಗಿ ಹೇಳಿತ್ತು.
ಶಸ್ತ್ರಾಸ್ತ್ರ ಪತ್ತೆಯಾದ ವಿಚಾರವಾಗಿ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಶರಣಾಗತಿಯಾದವರು ಶಸ್ತ್ರಾಸ್ತ್ರಗಳ ಬಗ್ಗೆ ಸಮಗ್ರ ಮಾಹಿತಿ ಪೊಲೀಸರಿಗೆ ನೀಡಬೇಕು. ನಕ್ಸಲರು ಮಾಹಿತಿ ನೀಡದಿದ್ದರೇ ಸರ್ಕಾರ ಯಾಕೆ ಪ್ಯಾಕೇಜ್ ಕೊಡುತ್ತಿದೆ? ಶರಣಾಗತಿಯಾದ ನಕ್ಸಲರಿಗೆ ಬಂದೂಕು, ಗುಂಡು ನೀಡಿದ್ದು ಯಾರು? ಎಲ್ಲಾ ಮಾಹಿತಿ ನೀಡಿದರೆ ಮಾತ್ರ ಶರಣಾಗತಿ ಪ್ಯಾಕೇಜ್ಗೆ ಅರ್ಥವಿರುತ್ತೆ. ತನಿಖೆಗೆ ಪೂರ್ಣ ಸಹಕಾರ ನೀಡಿದರೆ ಮಾತ್ರ ಪ್ಯಾಕೇಜ್ ನೀಡಬೇಕು ಎಂದು ಹೇಳಿದರು.
ಶರಣಾಗತಿಯಾದ ನಕ್ಸಲರು ಪೊಲೀಸ್ ತನಿಖೆಗೆ ಸಹಕಾರ ನೀಡಬೇಕು. ಪೊಲೀಸರು, ಯೋಧರು, ಸಾರ್ವಜನಿಕರನ್ನು ನಕ್ಸಲರು ಕೊಂದಿದ್ದಾರೆ. ನಕ್ಸಲರಿಗೆ ಸಹಕಾರ ನೀಡಿದ್ದು ಯಾರು ಅಂತಾ ಮಾಹಿತಿ ನೀಡಬೇಕು. ನಕ್ಸಲರದ್ದು ಅಪಾಯಕಾರಿ ಸಿದ್ಧಾಂತವಾಗಿದೆ. ಒಂದು ತಂತ್ರಗಾರಿಕೆ ಭಾಗವಾಗಿ ನಕ್ಸಲರು ಶರಣಾಗಿದ್ದಾರೆ ಅನಿಸುತ್ತೆ. ಆರೂ ಮಂದಿ ನಕ್ಸಲ್ ಸಿದ್ಧಾಂತದಿಂದ ಹೊರಬಂದ ಬಗ್ಗೆ ಖಚಿತವಾಗಬೇಕು. ಕೇವಲ ಐಸೋಲೇಟೆಡ್ ಆಗಿ ನಲ್ಕು ಜನರಿಗೆ ಸೀಮಿತವಾಗಬಾರದು. ಇದರ ಹಿಂದೆ ಯಾರಿದ್ದಾರೆ ಎಂದು ಎನ್ಐಎ ತನಿಖೆ ಮಾಡಬೇಕು ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:45 am, Sat, 11 January 25