ಚಿಕ್ಕಮಗಳೂರು: OTP ಬರದೇ ವೋಟಿಲ್ಲ; ಮೊಬೈಲ್​ ಟವರ್​ಗಾಗಿ ಕಳಸ ತಾಲೂಕಿನ ಗ್ರಾಮಸ್ಥರ ಮತ ಬಹಿಷ್ಕಾರ ಎಚ್ಚರಿಕೆ

|

Updated on: Feb 25, 2023 | 9:10 AM

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಬಲಿಗೆ, ಮೆಣಸಿನ ಹ್ಯಾಡದಲ್ಲಿ ಮೊಬೈಲ್ ಟವರ್​​ ಇಲ್ಲದೆ ಪರದಾಡುತ್ತಿದ್ದು, ಟವರ್​​ಗೆ ಆಗ್ರಹಿಸಿ ಗ್ರಾಮಸ್ಥರು ಒಟಿಪಿ ಬರದೇ ವೋಟಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ.

ಚಿಕ್ಕಮಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ (Assembly Election) ಹತ್ತಿರವಾಗುತ್ತಿದ್ದು, ರಾಜಕೀಯ ಪಕ್ಷಗಳು ಮತ ಕ್ರೋಢೀಕರಣಕ್ಕೆ, ಮತದಾರರನ್ನು ಸೆಳೆಯಲು ನಾನಾ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಆದರೆ ಮತದಾರ ಜಾಗೃತನಾಗಿದ್ದು, ನಿಮ್ಮ ಆಸೆ-ಆಮೀಷಗಳಿಗೆಲ್ಲ ಬಗ್ಗುವುದಿಲ್ಲ ಎಂದಿದ್ದಾನೆ. ರಾಜ್ಯದ ನಾನಾ ಭಾಗದಲ್ಲಿ ಮತದಾರರು ಮತದಾನವನ್ನು ಬಹಿಷ್ಕರಿಸುತ್ತಿದ್ದಾರೆ. ಇದಕ್ಕೆ ಕಾರಣ ಅಭಿವೃದ್ಧಿ ಕಾಣದ ಊರು, ರಸ್ತೆ ಇತ್ಯಾದಿ. ಈ ಹಿನ್ನೆಲೆ ಈ ಬಾರಿ ನಾವು ಮತದಾನವನ್ನು ಬಹಿಷ್ಕರಿಸಿದ್ದೇವೆ ಎಂದು ಘೋಷಣೆ ಮಾಡಿದ್ದಾರೆ. ಇದರಂತೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಳಸ (Kalas) ತಾಲೂಕಿನ ಬಲಿಗೆ, ಮೆಣಸಿನ ಹ್ಯಾಡದಲ್ಲಿ ಮೊಬೈಲ್ ಟವರ್ (Moble Tower)​​ ಇಲ್ಲದೆ ಪರದಾಡುತ್ತಿದ್ದು, ಟವರ್​​ಗೆ ಆಗ್ರಹಿಸಿ ಗ್ರಾಮಸ್ಥರು ಒಟಿಪಿ ಬರದೇ ವೋಟಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ (Social Media) ಅಭಿಯಾನ ಆರಂಭಿಸಿದ್ದಾರೆ.

ಈ ಗ್ರಾಮದಲ್ಲಿ 70 ಕುಟುಂಬಗಳಿದ್ದು, ಬಿಎಸ್​​ಎನ್​ಎಲ್ ಸೇರಿದಂತೆ ಯಾವುದೇ ಮೊಬೈಲ್​ ನೆಟ್ ವರ್ಕ್ ಇಲ್ಲದೆ ಜನರು ಪರದಾಡುತ್ತಿದ್ದಾರೆ, ಭರವಸೆ ಬೇಕಿಲ್ಲ, ಮೊಬೈಲ್ ಟವರ್ ನಿರ್ಮಿಸಬೇಕು. ಇಲ್ಲದಿದ್ದರೇ ನಾವು ಮತದಾನವನ್ನು ಬಹಿಷ್ಕಾರಿಸುತ್ತೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ರಾಜ್ಯದ ನಾನಾ ಭಾಗದಲ್ಲೂ ಮತದಾನ ಬಹಿಷ್ಕಾರ

ಈ ರೀತಿ ರಾಜ್ಯದ ನಾನಾ ಭಾಗದಲ್ಲೂ ಜನರು ಮತದಾನವನ್ನು ಬಹಿಷ್ಕರಿಸಿದ್ದಾರೆ. ನಿನ್ನೆ (ಫೆ.24) ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಾನಸೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿನ ಹಳ್ಳಕ್ಕೆ ತೂಗು ಸೇತುವೆ ಇಲ್ಲದೆ ಜನರು ಪರದಾಡುತ್ತಿದ್ದಾರೆ. ತೂಗು ಸೇತುವೆ ನಿರ್ಮಾಣ ಮಾಡಿಕೊಡಿ ಎಂದು ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರೂ ಉಪಯೋಗವಾಗಿಲ್ಲ. ಈ ಹಿನ್ನೆಲೆ ಈಗ ಗ್ರಾಮಸ್ಥರು ‘ರಾಜಕಾರಣಿಗಳಿಗೆ ನಮ್ಮ ಊರಿಗೆ ಪ್ರವೇಶವಿಲ್ಲ’ ಎಂಬ ಫಲಕಗಳನ್ನು ಹಾಕಿದ್ದರು. ಅಲ್ಲದೇ ತೂಗು ಸೇತುವೆ ನಿರ್ಮಿಸಿಕೊಡುವವರೆಗೆ ಮತ ಹಾಕುವುದಿಲ್ಲ ಎಂದು ಬ್ಯಾನರ್​ ಹಾಕಿದ್ದರು.

ಕೆಲ ದಿನಗಳ ಹಿಂದೆ ಇದೇ ಜಿಲ್ಲೆಯ ಜೋಯಿಡಾ ತಾಲೂಕಿನ ಗ್ರಾಮ ಪಂಚಾಯ್ತಿ ಹೆಬ್ಬಾಳ ಮತ್ತು ನೇತಾರ್ಗು ಗ್ರಾಮಗಳಿಗೆ ಹೆಬ್ಬಾಳ ಶಾಲೆಯಲ್ಲಿ ಮತಗಟ್ಟೆ ಸ್ಥಾಪನೆ, ಕಾಯಂ ಶಿಕ್ಷಕರ ನೇಮಕ, ರಸ್ತೆ, ವಿದ್ಯುತ್​ ಸಂಪರ್ಕಕ್ಕೆ ಆಗ್ರಹಿಸಿ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದ್ದರು.

ಹಾಗೇ ಮೈಸೂರಿನ ನಂಜನಗೂಡು ತಾಲೂಕಿನ ಉಪ್ಪನಹಳ್ಳಿ ಗ್ರಾಮದಲ್ಲಿ ಚರಂಡಿ ಸಮಸ್ಯೆ ಉದ್ಭವಿಸಿದ್ದು, ಚರಂಡಿ ಸಮಸ್ಯೆ ಬಗೆಹರಿಯುವವರೆಗು ಮತದಾನ ಮಾಡುವುದಿಲ್ಲ ಎಂದಿದ್ದರು. ಈ ಮೂಲಕ ಮತದಾನವನ್ನೇ ಬಹಿಷ್ಕಾರ ಮಾಡುವ ಎಚ್ಚರಿಕೆ ನೀಡಿದ್ದರು. ಇದೇ ರೀತಿಯಾಗಿ ಶಿವಮೊಗ್ಗ ಜಿಲ್ಲೆಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಸ್ವಕ್ಷೇತ್ರವಾದ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಮೇಗರವಳ್ಳಿ ಸಮೀಪದ ಅಣ್ಣುವಳ್ಳಿಗೆ ಸಂಪರ್ಕ ಕಲ್ಪಿಸುವ ದಾರಿ ಮತ್ತು ಹಳ್ಳದ ಕಾಲುಸೇತುವೆ ಹಾಳಾಗಾಗಿದ್ದು, ಇದನ್ನು ಸರಿಪಡಿಸುವವರೆಗು ಮತದಾನ ಮಾಡುವುದಿಲ್ಲವೆಂದು ಬಹಿಷ್ಕರಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:15 am, Sat, 25 February 23