ಮತದಾರರನ್ನು ಸೆಳೆಯಲು ಹಂಚಲಾಗಿದ್ದ ಕುಕ್ಕರ್ ಸ್ಫೋಟ; ಚಿಕ್ಕಮಗಳೂರು ಕೈ ಶಾಸಕ ಟಿಡಿ ರಾಜೇಗೌಡ ವಿರುದ್ಧ ಗ್ರಾಮಸ್ಥರ ಆಕ್ರೋಶ

|

Updated on: Apr 04, 2023 | 11:58 AM

ಮತದಾರರನ್ನು ಸೆಳೆಯಲು ಹಂಚಲಾಗಿದ್ದ ಕುಕ್ಕರ್ ಸ್ಫೋಟಗೊಂಡಿದ್ದು ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ತಾಯಿ, ಮಗು ಹೊರಗಡೆ ಇದ್ದಿದ್ದರಿಂದ ಭಾರಿ ಅನಾಹುತ ತಪ್ಪಿದೆ.

ಚಿಕ್ಕಮಗಳೂರು: ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ(Karnataka Assembly Elections 2023) ರಾಜಕೀಯ ನಾಯಕರು ಮತದಾರರನ್ನು ಸೆಳೆಯಲು ನಾನಾ ಕಸರತ್ತು ಮಾಡುತ್ತಿದ್ದಾರೆ. ನೀತಿ ಸಂಹಿತೆ ಜಾರಿಯಲ್ಲಿದ್ದರೂ ರಾಜ್ಯದಲ್ಲಿ ಗಿಫ್ಟ್ ಪಾಲಿಟಿಕ್ಸ್(Gift Politics) ಜೋರಾಗಿ ನಡೆಯುತ್ತಿದೆ. ಹಣ, ಹೆಂಡ, ಒಡವೆ, ಗಾಂಜಾದ ಹೊಳೆಯೇ ಹರಿಯುತ್ತಿದೆ. ಆದ್ರೆ ಚಿಕ್ಕಮಗಳೂರಿನಲ್ಲಿ ಕಳೆದ ತಿಂಗಳು ಮತದಾರರಿಗೆ ಕುಕ್ಕರ್ ಹಂಚಿ ಪೇಜೆಗೆ ಸಿಲುಕಿದ್ದ ಶಾಸಕ ಟಿ.ಡಿ.ರಾಜೇಗೌಡರೇ ನೀಡಿದ್ದಾರೆ ಎನ್ನಲಾದ ಕುಕ್ಕರ್ ಮನೆಯಲ್ಲಿ ಸ್ಫೋಟಗೊಂಡಿದೆ. ಇದರಿಂದ ಕುಕ್ಕರ್ ತೆಗೆದುಕೊಂಡ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಶಾನುವಳ್ಳಿ ಗ್ರಾಮದಲ್ಲಿ ದೇವರಾಜ್ ಎಂಬುವರ ಮನೆಯಲ್ಲಿ ತರಕಾರಿ ಬೇಯಿಸಲು ಇಟ್ಟಿದ್ದಾಗ ಕುಕ್ಕರ್ ಸ್ಫೋಟಗೊಂಡಿದೆ. ಮತದಾರರನ್ನು ಸೆಳೆಯಲು ಹಂಚಲಾಗಿದ್ದ ಕುಕ್ಕರ್ ಸ್ಫೋಟಗೊಂಡಿದ್ದು ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ತಾಯಿ, ಮಗು ಹೊರಗಡೆ ಇದ್ದಿದ್ದರಿಂದ ಭಾರಿ ಅನಾಹುತ ತಪ್ಪಿದೆ. ಹೀಗಾಗಿ ಕಳಪೆ ಕುಕ್ಕರ್ ನೀಡಿ ಜನರ ಜೀವದ ಜೊತೆ ಚಲ್ಲಾಟ ಆಡ್ತಿದ್ದಾರೆಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್‌ ಗೆದ್ದರೂ ಹೈಕಮಾಂಡ್‌ ಡಿಕೆ ಶಿವಕುಮಾರ್​ನನ್ನು ಸಿಎಂ ಮಾಡಲ್ಲ: ಈ ಹೇಳಿಕೆಗೆ ಸ್ಪಷ್ಟನೆ ಕೊಟ್ಟ ಸಿದ್ದರಾಮಯ್ಯ

450 ರೂ ಕುಕ್ಕರ್​ಗೆ 1,399 ಲೇಬಲ್ ಅಂಟಿಸಿ ಕುಕ್ಕರ್ ಹಂಚಿದ್ದ ಶಾಸಕ

ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್‍ಗಾಗಿ ಲಾಬಿ ಇಲ್ಲ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳು ಫಿಕ್ಸ್ ಆಗಿದ್ದಾರೆ. 3 ತಾಲೂಕು ಸೇರಿ ಶೃಂಗೇರಿ ವಿಧಾನಸಭಾ ಕ್ಷೇತ್ರವಾಗಿರೋ ಈ ಕ್ಷೇತ್ರ ರಾಜ್ಯದಲ್ಲೇ ಸಣ್ಣದ್ದು. ಮತದಾರರ ಸಂಖ್ಯೆ ಕೇವಲ 1 ಲಕ್ಷದ 65 ಸಾವಿರ. ಹಾಗಾಗಿ, ತ್ರಿಕೋನ ಸ್ಪರ್ಧೆಯಲ್ಲಿ ಮೂರು ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ಕಳೆದ ಮಾರ್ಚ್ ತಿಂಗಳಲ್ಲಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಕ್ಷೇತ್ರದಾದ್ಯಂತ ಸುಮಾರು ಒಂದು ಲಕ್ಷ ಕುಕ್ಕರ್ ಹಂಚಿದ್ದರು. ಆದ್ರೆ, ಶಾರದಾಂಬೆ ಕ್ಷೇತ್ರದ ಮತದಾರರು ಕುಕ್ಕರ್ ನೀಡಿ ಮತ ಕೇಳುವುದಾದರೆ 5 ವರ್ಷದಲ್ಲಿ ಮಾಡಿದ್ದೇನು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ಸಿಗರು ಮನೆ-ಮನೆಗೆ ಕುಕ್ಕರ್ ಕೊಡ್ತಿದ್ದಾರೆ.

3 ತಾಲೂಕಲ್ಲೂ 3 ವರ್ಷಗಳಿಂದ ಭಾರೀ ಮಳೆಗೆ ಜನ ಮನೆ-ಮಠ ಕಳೆದುಕೊಂಡಿದ್ದಾರೆ. ಹಲವರಿಗೆ ಇನ್ನೂ ಸೂಕ್ತ ರೀತಿಯಲ್ಲಿ ಪರಿಹಾರ ಸಿಕ್ಕಿಲ್ಲ. ಮಳೆಯಿಂದ ಹಾನಿಯಾದ ಮೂಲಭೂತ ಸೌಲಭ್ಯಗಳು ಇಂದಿಗೂ ದುರಸ್ಥಿಯಾಗಿಲ್ಲ. ಈಗ ಚುನಾವಣೆ ಬಂತೆಂದು ಕುಕ್ಕರ್ ಆಮೀಷದ ಮೂಲಕ ಮತ ಕೇಳುತ್ತಿದ್ದಾರೆಂದು ಜನ ಶಾಸಕರ ವಿರುದ್ಧ ಕಿಡಿಕಾರಿದ್ದರು. ಬಾಕ್ಸ್ ಮೇಲೆ ಕುಕ್ಕರಿನ ಮೂಲ ಬೆಲೆ 450 ಎಂದಿತ್ತು. ಕಾಂಗ್ರೆಸ್ ಕಾರ್ಯಕರ್ತರು ಅದರ ಮೇಲೆ 1399 ರೂಪಾಯಿಯ ಲೇಬಲ್ ಅಂಟಿಸಿದ್ದರು. ಇದನ್ನ ಕಂಡ ಮತದಾರರು ಶಾಸಕರೇ ನಮ್ಮನ್ನ ಯಾಮಾರಿಸಬೇಡಿ ಅಂತ ಮತದಾರರೇ ಲೇವಡಿ ಮಾಡ್ತಿದ್ದರು. ಆನ್‍ಲೈನ್‍ನಲ್ಲೂ ಕೂಡ ಕುಕ್ಕರಿನ ಬೆಲೆ 450 ರೂಪಾಯಿ ಎಂದು ಇದೆ. ಅದೇ ಕುಕ್ಕರಿನ ಬಾಕ್ಸ್ ಮೇಲೆ 1399 ಅಂತ ಇರೋದು ಮತದಾರರು ಶಾಸಕರ ವಿರುದ್ಧ ನಗೆಪಾಟಲಿಗೀಡಾಗಿದ್ದರು. ಮತದಾರರು ಕುಕ್ಕರಿನ ಮೂಲ ಬೆಲೆ ಹಾಗೂ ನಕಲಿ ಬೆಲೆ ಎರಡನ್ನೂ ಹೋಲಿಕೆ ಮಾಡಿ ಶಾಸಕರ ಅಸಲಿ-ನಕಲಿ ಆಟಕ್ಕೆ ಲೇವಡಿ ಮಾಡುತ್ತಿದ್ದರು. ನಾವ್ಯಾರು ಶಾಸಕರಿಗೆ ಕುಕ್ಕರ್ ಕೇಳಿರಲಿಲ್ಲ. ಮತದ ಆಮಿಷಕ್ಕಾಗಿ ಕೊಟ್ಟ ಕುಕ್ಕರಿನ ಮೇಲೆ ಈ ರೀತಿ ಏಕೆ ಹೆಚ್ಚಿನ ಹಣದ ಲೇಬಲ್ ಹಾಕಿ ಕೊಟ್ರು. ಒಳ್ಳೆಯದು ಎಂದು ತೋರಿಸೋದಕ್ಕಾ ಎಂದಿದ್ದರು. ಆದ್ರೆ ಈಗ ಅದೇ ಕುಕ್ಕರ್ ಬ್ಲಾಸ್ಟ್ ಆಗಿದ್ದು ಮತದಾರರಿಗೆ ಮತ್ತಷ್ಟು ಕೋಪ ತಂದಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:30 am, Tue, 4 April 23