ಇದು ಒಂದು ಬಾವಿಯ ಕಥೆ; ನೀರು ಕೊಡಲು ತಾತ್ಸಾರ, ಅವಮಾನ.. ಕೂಲಿ ಕೆಲಸ ಮಾಡಿಕೊಂಡು ಬಂದು ಬಾವಿ ತೋಡಿದ ದಂಪತಿ

| Updated By: ಆಯೇಷಾ ಬಾನು

Updated on: Mar 11, 2022 | 8:04 PM

ದಿನವಿಡೀ ದಣಿದ ಜೀವಗಳಿಗೆ ಸರಿಯಾಗಿ ಕುಡಿಯೋಕೂ ಕೂಡ ನೀರು ಸಿಗ್ತಾ ಇರ್ಲಿಲ್ಲ. ಸಮೀಪದಲ್ಲೇ ನಲ್ಲಿಯ ನೀರನ್ನ ಹಿಡಿಯೋಕೇ ಹೋದಾಗ ಗಲಾಟೆನೂ ಆಗ್ತಿತ್ತು. ನೀರನ್ನ ಕೊಡಿ ಅಂತಾ ಇದ್ದಬದ್ದವರನ್ನ ಕೇಳಿಯಾಯ್ತು, ಆದ್ರೂ ಪ್ರಯೋಜನವಾಗಲಿಲ್ಲ. ಆಗಲೇ ಈ ದಂಪತಿ 30*40 ಜಾಗದಲ್ಲೇ ಒಂದು ಬಾವಿಯನ್ನ ತೆಗೆಯುವ ನಿರ್ಧಾರ ಮಾಡಿದ್ರು.

ಇದು ಒಂದು ಬಾವಿಯ ಕಥೆ; ನೀರು ಕೊಡಲು ತಾತ್ಸಾರ, ಅವಮಾನ.. ಕೂಲಿ ಕೆಲಸ ಮಾಡಿಕೊಂಡು ಬಂದು ಬಾವಿ ತೋಡಿದ ದಂಪತಿ
ಇದು ಒಂದು ಬಾವಿಯ ಕಥೆ; ನೀರು ಕೊಡಲು ತಾತ್ಸಾರ, ಅವಮಾನ.. ಕೂಲಿ ಕೆಲಸ ಮಾಡಿಕೊಂಡು ಬಂದು ಬಾವಿ ತೋಡಿದ ದಂಪತಿ
Follow us on

ಚಿಕ್ಕಮಗಳೂರು: ಮನುಷ್ಯನಿಗೆ ಕಷ್ಟಗಳು ಎದುರಾದಗಲೇ, ಅವಮಾನ ಎದುರಿಸಿದಾಗಲೇ ಏನನಾದ್ರೂ ಸಾಧಿಸಬೇಕು ಅನ್ನೋ ಛಲ ಹುಟ್ಟೋದು. ಆಗಲೇ ತನ್ನೊಳಗೆ ಯಾರಿಗೂ ತಿಳಿಯದಂತೆ ಹುದುಗಿರುವ ಸ್ವಾಭಿಮಾನ ಒಮ್ಮೆಲ್ಲೇ ಪುಟಿದೇಳುವುದು. ಆ ಬಡಪಾಯಿಗೂ ಆಗಿದ್ದೂ ಅದೆ, ನೀರು ಬೇಡಿದ್ರೆ ಗಲಾಟೆ ಮಾಡಿದ್ರು. ಪರಿಪರಿಯಾಗಿ ಕೇಳಿದ್ರೂ ತಾತ್ಸಾರ ಮಾಡಿದ್ರು. ಆಗಲೇ ಆ ಸ್ವಾಭಿಮಾನಿ ಬಾವಿ ತೊಡುವ ಸಂಕಲ್ಪವನ್ನ ಮಾಡಿದ್ದು.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಣಜೂರು ಗ್ರಾಮದ ರಾಜು ಮತ್ತು ಶಾರದಾ ದಂಪತಿ ತಮ್ಮ ಗ್ರಾಮದಲ್ಲಿ ತಮಗೆ ನೀರಿನ ಸಮಸ್ಯೆ ಎದುರಾದ ಕಾರಣ ತಾವೇ ಮನೆ ಮುಂದೆ ಬಾವಿ ತೋಡಿದ್ದಾರೆ. ದಂಪತಿ ಇರೋದು 30*40 ಅಡಿ ಜಾಗದಲ್ಲಿ, ಅದು ಕೂಡ ಒಂದು ಗುಡಿಸಲು ಹಾಕ್ಕೊಂಡು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸ್ತಿದ್ದಾರೆ. ಬೆಳಗ್ಗೆಯಿಂದ ರಾತ್ರಿವರೆಗೂ ದುಡಿಯೋದೇ ಕಾಯಕ. ಹೀಗೆ ದಿನವಿಡೀ ದಣಿದ ಜೀವಗಳಿಗೆ ಸರಿಯಾಗಿ ಕುಡಿಯೋಕೂ ಕೂಡ ನೀರು ಸಿಗ್ತಾ ಇರ್ಲಿಲ್ಲ. ಸಮೀಪದಲ್ಲೇ ನಲ್ಲಿಯ ನೀರನ್ನ ಹಿಡಿಯೋಕೇ ಹೋದಾಗ ಗಲಾಟೆನೂ ಆಗ್ತಿತ್ತು. ನೀರನ್ನ ಕೊಡಿ ಅಂತಾ ಇದ್ದಬದ್ದವರನ್ನ ಕೇಳಿಯಾಯ್ತು, ಆದ್ರೂ ಪ್ರಯೋಜನವಾಗಲಿಲ್ಲ. ಆಗಲೇ ಈ ದಂಪತಿ 30*40 ಜಾಗದಲ್ಲೇ ಒಂದು ಬಾವಿಯನ್ನ ತೆಗೆಯುವ ನಿರ್ಧಾರ ಮಾಡಿದ್ರು. ತಲೆಗೆ ಯೋಚ್ನೆ ಬಂದಿದ್ದೆ ತಡ, ಕಳೆದ ಎರಡು ತಿಂಗಳಿನಿಂದ ಬಾವಿ ತೊಡೋಕೆ ಶುರು ಮಾಡಿದ್ದಾರೆ. ಇಡೀ ದಿನ ಕೂಲಿ ಕೆಲಸ ಮಾಡಿಕೊಂಡು ಮಿಕ್ಕ ಸಮಯದಲ್ಲಿ ಬಾವಿ ಕೆಲಸಕ್ಕೆ ಸತಿಪತಿಗಳಿಬ್ಬರು ಧುಮುಕಿದ್ರು.

ಬಾವಿ ತೆಗೆಯುವ ಈ ದಂಪತಿಗಳ ಸಾಹಸವನ್ನ ನೋಡಿ ಅವಮಾನ ಮಾಡಿದವರು, ನಸುನಕ್ಕಿದವರಿಗೆ ಲೆಕ್ಕವೇ ಇಲ್ಲ. ಆದ್ರೂ ಛಲ ಬಿಡದೇ ಕೇವಲ ಹಾರೆ, ಪಿಕಾಸಿಯಲ್ಲೇ ಬಾವಿ ಕೆಲಸವನ್ನ ಇಬ್ಬರು ಜೊತೆಗೂಡಿ ಮುಗಿಸೋ ಶಪಥ ಮಾಡಿದ್ರು. ಬೆಳಗ್ಗೆ 6 ಗಂಟೆಗೆ ಏಳೋದು 2 ಗಂಟೆ ಬಾವಿ ತೊಡೋದು ಕೂಲಿ ಕೆಲಸಕ್ಕೆ ಹೋಗೋದು. ಸಂಜೆ 5 ಗಂಟೆಗೆ ಬರೋದು ರಾತ್ರಿ 9ಗಂಟೆವರೆಗೂ ಬಾವಿ ತೊಡೋದು. ಹೀಗೆ ಬರೋಬ್ಬರಿ ಎರಡು ತಿಂಗಳ ನಿರಂತರ ಶ್ರಮದಿಂದ ಇದೀಗ ಬಾವಿಯಲ್ಲಿ ಜಲ ಕಾಣಿಸಿಕೊಂಡಿದ್ದು ಕೊನೆಗೂ ನಮ್ಮ ಪ್ರಯತ್ನ ಯಶಸ್ಸು ಕಾಣುವ ಸೂಚನೆ ಸಿಕ್ಕಿದಂತಾಗಿರೋದಕ್ಕೆ ದಂಪತಿಯ ಕಣ್ಣಲ್ಲಿ ಆನಂದಭಾಷ್ಪ ಚಿಮ್ಮಿದೆ.

ಈ ದಂಪತಿಗೆ ಮೂರು ಜನ ಮಕ್ಕಳಿದ್ದು ದೊಡ್ಡ ಮಗಳನ್ನ ಮದ್ವೆ ಮಾಡಿಕೊಟ್ಟಿದ್ದಾರೆ. ಎರಡನೇ ಮಗಳು ಮಂಗಳೂರಿನಲ್ಲಿ 2 ಮನೆಯ ಕೆಲಸ ಮಾಡಿಕೊಂಡು ಡಿಗ್ರಿ ವ್ಯಾಸಂಗ ಮಾಡುತ್ತಿದ್ದಾರೆ. ಮತ್ತೊಬ್ಬ ಮಗ ಹೋಟೆಲ್ನಲ್ಲಿ ಕೆಲಸ ಮಾಡಿಕೊಂಡು ಐಟಿಐ ಶಿಕ್ಷಣ ಪಡೆಯುತ್ತಿದ್ದಾನೆ. ಇಡೀ ಕುಟುಂಬವೇ ಒಂದು ರೀತಿಯಾಗಿ ಕಣ್ಣೀರಲ್ಲೇ ಕೈ ತೊಳೆಯುತ್ತಿದ್ದಾರೆ. ಹೀಗಿದ್ರೂ ಕೂಡ ಈ ಬಡಕುಟುಂಬಕ್ಕೆ ನೀರು ಕೊಡುವ ಮನಸ್ಸನ್ನ ಯಾರೂ ಮಾಡದೇ ಇದ್ದದ್ದು ನಿಜಕ್ಕೂ ದುರಂತ. ಕೊನೆಪಕ್ಷ ಈಗಲಾದ್ರೂ ಬಾವಿಗೆ ರಿಂಗನ್ನ ಕೂರಿಸೋ ಸಹಕಾರವನ್ನ ಸಂಬಂಧಪಟ್ಟವರು ಕೊಟ್ರೆ ನಿಜಕ್ಕೂ ಈ ಬಡಪಾಯಿಗಳ ಶ್ರಮಕ್ಕೆ ಬೆಲೆ ಕೊಟ್ಟಂತೆ ಆಗುತ್ತೆ. ಅದೇನೆ ಆಗಲಿ, ಕಡು ಕಷ್ಟದಲ್ಲೂ ಕುಗ್ಗದೇ, ಅವಮಾನ ಮಾಡಿದ್ರೂ ಛಲಬಿಡದೇ ಬಾವಿ ತೋಡಿದ ಈ ದಂಪತಿಯ ಸ್ವಾಭಿಮಾನವನ್ನ ಮೆಚ್ಚಲೇ ಬೇಕು.

ವರದಿ: ಪ್ರಶಾಂತ್, ಟಿವಿ9 ಚಿಕ್ಕಮಗಳೂರು

ಬಾವಿಗೆ ಇಳಿಯುತ್ತಿರುವ ರಾಜು

ಇದನ್ನೂ ಓದಿ: ರಾಜ್ಯದಲ್ಲಿ ಇಂದು ಘೋರ ಅಪಘಾತಗಳ ಸರಮಾಲೆ: ಕಾರು-ಬೈಕ್ ನಡುವೆ ಡಿಕ್ಕಿಯಾಗಿ ಅಪ್ಪ, ಮಗಳು ಬಲಿ

ಗೋವಾನಲ್ಲಿ ಫಲಿತಾಂಶ ಪ್ರಕಟಗೊಳ್ಳುವ ಮೊದಲೇ ಕೆಪಿಸಿಸಿ ಸದಸ್ಯರು ಸರ್ಕಾರ ರಚಿಸುವ ದಾವೆ ಹೂಡಲು ಹೋಗಿದ್ದರು! ಸಿಟಿ ರವಿ