CT Ravi: ಲಿಂಗಾಯತ ಕುರಿತ ಹೇಳಿಕೆ ಕಾಂಗ್ರೆಸ್ ಸುಳ್ಳಿನ ಫ್ಯಾಕ್ಟರಿಯ ಸೃಷ್ಟಿ; ಸಿಟಿ ರವಿ ಸ್ಪಷ್ಟನೆ

|

Updated on: Mar 16, 2023 | 9:35 PM

ಲಿಂಗಾಯತರ ಮತ ಬೇಕಾಗಿಲ್ಲ ಎಂಬರ್ಥದಲ್ಲಿ ಮಾತನಾಡಲಾಗಿದೆ ಎಂಬ ಹೇಳಿಕೆ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಗುರುವಾರ ಸ್ಪಷ್ಟನೆ ನೀಡಿದ್ದು, ಅದು ಕಾಂಗ್ರೆಸ್​ನ ಸುಳ್ಳಿನ ಕಾರ್ಖಾನೆಯ ಸೃಷ್ಟಿ ಎಂದು ಆರೋಪಿಸಿದ್ದಾರೆ.

ಚಿಕ್ಕಮಗಳೂರು: ಲಿಂಗಾಯತರ ಮತ ಬೇಕಾಗಿಲ್ಲ ಎಂಬರ್ಥದಲ್ಲಿ ಮಾತನಾಡಲಾಗಿದೆ ಎಂಬ ಹೇಳಿಕೆ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT Ravi) ಗುರುವಾರ ಸ್ಪಷ್ಟನೆ ನೀಡಿದ್ದು, ಅದು ಕಾಂಗ್ರೆಸ್​ನ ಸುಳ್ಳಿನ ಕಾರ್ಖಾನೆಯ ಸೃಷ್ಟಿ ಎಂದು ಆರೋಪಿಸಿದ್ದಾರೆ. ಇವುಗಳೆಲ್ಲ ಸುಳ್ಳು ಸುದ್ದಿಗಳು. ನಾನು ಕನಸಿನಲ್ಲೂ ಜಾತಿ ರಾಜಕಾರಣ ಮಾಡಿದವನಲ್ಲ. ಜಾತಿಯ ಬಗ್ಗೆ ಯೋಚನೆಯನ್ನೂ ಮಾಡುವುದಿಲ್ಲ. ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ಲಿಂಗಾಯತ ವಿರೋಧಿ ಭಾವನೆ ಹುಟ್ಟು ಹಾಕುವ ಕೆಲಸವನ್ನು ಕಾಂಗ್ರೆಸ್​ನವರು ಮಾಡುತ್ತಿದ್ದಾರೆ. ಇದು ಸಂಪೂರ್ಣ ಕಾಂಗ್ರೆಸ್​ ಕೈವಾಡ. ಆದರೆ, ನಾನು ಏನು ಅನ್ನುವುದು ಜನರಿಗೆ ಗೊತ್ತಿದೆ. ಇಂತಹ ಸುಳ್ಳು ಸುದ್ದಿಯಿಂದ ಹೊರಗಿನವರಿಗೆ ಗೊಂದಲ ಸೃಷ್ಟಿ ಮಾಡಬಹುದಷ್ಟೇ ವಿನಃ ಒಳಗಿನವರನ್ನು ಏನೂ ಮಾಡಲಾಗದು. ನಮ್ಮವರಿಗೆ ಎಲ್ಲವೂ ಸ್ಪಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.

ಈ ಹಿಂದೆಯೂ ನನ್ನ ವಿರುದ್ಧ ಇಂತಹ ಪ್ರಯತ್ನವನ್ನು ಮಾಡಿ ವಿಫಲರಾಗಿದ್ದರು. ಅದೇ ರೀತಿ ಈಗಲೂ ಒಂದು ಗೊಂದಲ, ಸುಳ್ಳು ಸುದ್ದಿಯನ್ನು ಸೃಷ್ಟಿ ಮಾಡಿ ಹಬ್ಬಿಸಿದ್ದಾರೆ. ನಾನು ಆ ರೀತಿ ಹೇಳಿಕೆ ನೀಡಿದ್ದರೆ ಕ್ಷಮೆಯಾಚನೆ ಮಾಡುತ್ತಿದ್ದೆ. ಜನರು ಜಾತಿಮೀರಿ ಮತನೀಡಿ ನನ್ನನ್ನು ಗೆಲ್ಲಿಸಿದ್ದಾರೆ ಎಂದು ಸಿಟಿ ರವಿ ಹೇಳಿದ್ದಾರೆ.

ಅಭಿವೃದ್ಧಿ ಕೆಲಸದ ವಿಚಾರಕ್ಕೆ ಸಂಬಂಧಿಸಿ ಚರ್ಚೆ ಮಾಡಲಾಗುವುದಿಲ್ಲ ಎಂದು ಜಾತಿ ಹೆಸರಿನಲ್ಲಿ ಒಡಕು ಮೂಡಿಸಲು ಸುಳ್ಳಿನ ಫ್ಯಾಕ್ಟರಿ ಮೂಲಕ ದಾಳ ಉರುಳಿಸಿದ್ದಾರೆ. ಸುಳ್ಳು ಸುದ್ದಿಯನ್ನು ಯಾರು ಹಬ್ಬಿಸಿದ್ದಾರೋ ಅವರ ವಿರುದ್ಧ ದೂರು ನೀಡಲಾಗಿದೆ. ಷಡ್ಯಂತರದ ಭಾಗವಾಗಿ ಇದನ್ನು ಮಾಡಿದ್ದಾರೆ ಎಂದು ರವಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಸಿಟಿ ರವಿ ವಿರುದ್ಧ ಸಿಡಿದೆದ್ದ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ, ಕಂಡಲ್ಲಿ ಮುತ್ತಿಗೆ ಹಾಕಲು ಕರೆ

ನಮಗೆ ಲಿಂಗಾಯತ ಮತಗಳು ಬೇಕಾಗಿಲ್ಲ ಎಂದು ಸಿಟಿ ರವಿ ಹೇಳಿದ್ದಾರೆ ಎನ್ನಲಾಗಿದ್ದು, ಆ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗಿತ್ತು. ಇದು ಬಿಜೆಪಿ ಆಂತರಿಕ ವಲಯದಲ್ಲಿ ರಾಜಕೀಯ ಕೋಲಾಹಲಕ್ಕೂ ಕಾರಣವಾಗಿತ್ತು.

ಪರಿಣಾಮವಾಗಿ ಚಿಕ್ಕಮಗಳೂರಿನಲ್ಲಿ ವೀರಶೈವ ಲಿಂಗಾಯತರು ಸಿಟಿ ರವಿ ವಿರುದ್ಧ ಸಿಡಿದೆದ್ದಿದ್ದು, ಸಿಟಿ ರವಿ ಚುನಾವಣೆ ಪ್ರಚಾರದಲ್ಲಿ ಕಂಡು ಬಂದರೆ ಮುತ್ತಿಗೆ ಹಾಕಬೇಕು. ‘ಕಿತ್ತೋದ ಸಿಟಿ ರವಿ’ ಎಂದು ಘೋಷಣೆ ಕೂಗಬೇಕು ಪತ್ರಿಕಾ ಪ್ರಕಟಣೆ ಮೂಲಕ ಕರೆ ಕೊಟ್ಟಿದ್ದರು. ರವಿ ಅವರು ಲಿಂಗಾಯತ ಸಮಾಜದ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಒಂದು ವಾರದಲ್ಲಿ ಅವರ ಮನೆಗೆ ಮುತ್ತಿಗೆ ಹಾಕಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಪ್ರತಿಕ್ರಿಯೆ ನೀಡಿದ್ದ ಬಿಎಸ್ ಯಡಿಯೂರಪ್ಪ, ಅವರು ಹಾಗೆಲ್ಲ ಹೇಳಿಕೆ ನೀಡಬಾರದು. ಅವರನ್ನು ಕರೆಸಿ ಮಾತನಾಡುತ್ತೇನೆ ಎಂದು ತಿಳಿಸಿದ್ದರು. ಆ ರಿತಿಯ ಯಾರೂ ಮಾತನಾಡಬಾರದು. ಪಕ್ಷವನ್ನು ಅಧಿಕಾರಕ್ಕೆ ತರಬೇಕಾದರೆ ಎಲ್ಲರ ಸಹಕಾರವೂ ಮುಖ್ಯ. ಸಿಟಿ ರವಿ ಆ ರೀತಿಯ ಹೇಳಿಕೆ ನೀಡಿದ್ದಾರೆ ಎಂದಾದರೆ ಅದು ತಪ್ಪು. ಅವರನ್ನು ಕರೆಸಿಕೊಂಡು ಮಾತನಾಡುವೆ ಎಂದು ಹೇಳಿದ್ದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 9:30 pm, Thu, 16 March 23