ಚಿಕ್ಕಮಗಳೂರು: ಹೊರನಾಡು ಅನ್ನಪೂರ್ಣೇಶ್ವರಿ ಅಂದ್ರೆ ಬೇಡಿದ್ದನ್ನ ಕರುಣಿಸೋ ಮಹಾತಾಯಿ. ಹೀಗಾಗೇ ವರ್ಷಪೂರ್ತಿ ಭಕ್ತರ ದಂಡೇ ದೇಗುಲಕ್ಕೆ ಹರಿದುಬರುತ್ತೆ. ಅದ್ರಲ್ಲೂ ವರ್ಷಕ್ಕೊಮ್ಮೆ ನಡೆಯೋ ಬ್ರಹ್ಮರಥೋತ್ಸವವಂತೂ ನೋಡೋದೇ ಚೆಂದ.
ಮನದ ತುಂಬೆಲ್ಲಾ ಜಗನ್ಮಾತೆಯ ಧ್ಯಾನ. ಹೆಜ್ಜೆ ಹೆಜ್ಜೆಗೂ ಭಕ್ತಿಯ ಪುಳಕ. ಗಂಟೆನಾದದ ಜೊತೆ ಸ್ವರಗಳ ನಾದ. ಸರ್ವಾಲಂಕಾರಗಳಿಂದ ಅಮ್ಮನ ತೇರು ಮುಂದೆ ಬರ್ತಿದ್ರೆ ಮೈಮನ ರೋಮಾಂಚನಗೊಂಡಿತ್ತು. ಎಲ್ಲರ ಮನದಲ್ಲೂ ಆಧ್ಯಾತ್ಮದ ಭಾವ ಮೂಡಿತ್ತು. ಅನ್ನಪೂರ್ಣೆಗೆ ನಮೋ ನಮಃ ಅಂದಿದ್ರು.
ಪ್ರತಿ ವರ್ಷ ಪಾಲ್ಗುಣ ಶುಕ್ಲ ಮಾಸದ ಅಭಿಜಿನ್ ಮಹೂರ್ತದಲ್ಲಿ ನಿನ್ನೆ ಬ್ರಹ್ಮರಥೋತ್ಸವ ನಡೆಸಲಾಯ್ತು. ಐದು ದಿನಗಳ ಕಾಲ ನಡೆಯೋ ಈ ವಾರ್ಷಿಕ ಆಚರಣೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ರು. ರಥೋತ್ಸವದ ಪ್ರಯುಕ್ತ ಅನ್ನಪೂರ್ಣೆಶ್ವರಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ವಿಶೇಷ ಪೂಜೆಯನ್ನ ಸಲ್ಲಿಸಲಾಯಿತು. ಸಾವಿರಾರು ಭಕ್ತರು ಪ್ರಾರ್ಥನೆ ಮಾಡಿ ರಥವನ್ನ ಎಳೆದು ಭಕ್ತಿ ಸಮರ್ಪಿಸಿದರು.
ಅಂತೂ ಅನ್ನಪೂರ್ಣೇಶ್ವರಿ ಸನ್ನಿಧಾನದಲ್ಲಿ ನಡೆದ ಬ್ರಹ್ಮರಥೋತ್ಸವ ಭಕ್ತಸಾಗರವನ್ನ ಸೆಳೆದಿತ್ತು. ದೂರದೂರುಗಳಿಂದ ಬಂದಿದ್ದ ಜನ ಸರ್ವಾಲಂಕಾರಗೊಂಡಿದ್ದ ತಾಯಿಯನ್ನ ಕಣ್ತುಂಬಿಕೊಂಡು ರಥ ಎಳೆದ್ರು.
Published On - 2:06 pm, Thu, 27 February 20