ಚಿಕ್ಕಮಗಳೂರು: ಬಿರುಗಾಳಿ ಸಹಿತ ಮಳೆಗೆ ಕೇವಲ 10 ದಿನಗಳ ಅಂತರದಲ್ಲೇ ಎರಡು ಬಲಿ; ಇಬ್ಬರಿಗೆ ಗಂಭೀರ ಗಾಯ

| Updated By: ಕಿರಣ್ ಹನುಮಂತ್​ ಮಾದಾರ್

Updated on: Apr 23, 2024 | 9:06 PM

ಮಳೆಗಾಗಿ ಕಾದಿದ್ದ ಮಲೆನಾಡಿಗರಿಗೆ ವರುಣದೇವ ಕೃಪೆ ತೋರಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದೆ. ಆದ್ರೆ, ಮಳೆಗೂ ಮುನ್ನ ಆರಂಭವಾಗುವ ಭಾರೀ ಪ್ರಮಾಣದ ಗುಡುಗು, ಸಿಡಿಲು, ಬಿರುಗಾಳಿ ಜನರಲ್ಲಿ ಭಯ ಹುಟ್ಟಿಸಿದ್ದು. ಕೇವಲ 10 ದಿನಗಳ ಅಂತರದಲ್ಲಿ ಎರಡು ಬಲಿ ಪಡೆದಿದ್ರೆ, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿದ್ದಾರೆ. ಇದರಿಂದಾಗಿ ಮಲೆನಾಡಿಗರು ಆತಂಕಕ್ಕೊಳಗಾಗಿದ್ದಾರೆ. 

ಚಿಕ್ಕಮಗಳೂರು: ಬಿರುಗಾಳಿ ಸಹಿತ ಮಳೆಗೆ ಕೇವಲ 10 ದಿನಗಳ ಅಂತರದಲ್ಲೇ ಎರಡು ಬಲಿ; ಇಬ್ಬರಿಗೆ ಗಂಭೀರ ಗಾಯ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ
Follow us on

ಚಿಕ್ಕಮಗಳೂರು, ಏ.23: ಕಾಫಿನಾಡು ಚಿಕ್ಕಮಗಳೂರಿನ(Chikkamagaluru) ಮಲೆನಾಡಿಗರು ಇತಿಹಾಸದಲ್ಲೇ ಮೊದಲ ಬಾರಿಗೆ ಕಂಡೂ ಕೇಳರಿಯದಷ್ಟು ಪ್ರಮಾಣದಲ್ಲಿ ಏರಿಕೆಯಾಗಿದ್ದ ಬಿಸಿಲ ತಾಪದಿಂದ ಬೆಂದು ಬಸವಳಿದು ಹೋಗಿದ್ದರು. ಈ ಹಿನ್ನಲೆ ಮಲೆನಾಡಿಗರು ಕೆಲ ದಿನಗಳಿಂದ ದೇವರ ಪೂಜೆ, ಹೋಮ – ಹವನ ನಡೆಸುವ ಮೂಲಕ ವರುಣದೇವನ ಮೊರೆ ಹೋಗಿದ್ದು, ಮಲೆನಾಡಿಗರ ಪೂಜೆಯ ಫಲವೋ ಅಥವಾ ಪ್ರಕೃತಿ ಸೌಂದರ್ಯದ ಮೇಲಿನ ವ್ಯಾಮೋಹವೋ ಎಂಬಂತೆ ಕಳೆದೊಂದು ವಾರದಿಂದ ಸಂಜೆಯಾಗುತ್ತಿದ್ದಂತೆ ನಿರಂತರವಾಗಿ ಮಳೆಯಾಗುತ್ತಿದೆ. ಇದರಿಂದಾಗಿ ಮಲೆನಾಡಲ್ಲಿ ಬಿಸಿಲ ತಾಪ ಸ್ವಲ್ಪಮಟ್ಟಿಗೆ ಇಳಿಕೆಯಾಗಿದ್ದು, ಮಲೆನಾಡಿಗರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಆದ್ರೆ, ಮಳೆಗಾಲ ಆರಂಭಕ್ಕೂ ಮುನ್ನ ಈ ಬಾರಿ ಬಿರುಗಾಳಿ ಸಹಿತ ಮಳೆಗೆ ಇಬ್ಬರು ಬಲಿಯಾಗಿದ್ದು, ಮಲೆನಾಡು ಭಾಗ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಜನರು ಬಿರುಗಾಳಿ, ಗುಡುಗು ಮಿಂಚಿಗೆ ಕಂಗಾಲಾಗಿದ್ದಾರೆ.

ಮಲೆನಾಡಿಗರು ಮಳೆಗಾಗಿ ಕಾದು ಆಕಾಶವನ್ನು ಎದುರು ನೋಡುತ್ತಿದ್ದರು. ಇವರ ನಿರೀಕ್ಷೆಗೆ ತಕ್ಕಂತೆ ಮಳೆರಾಯ ಎಂಟ್ರಿ ಕೊಟ್ಟಿದ್ದು, ಮಲೆನಾಡಿನ ತಾಪವನ್ನ ಸ್ವಲ್ಪ ಮಟ್ಟಿಗೆ ತಣಿಸಿದೆ. ಆದ್ರೆ, ಮಳೆಗೂ ಮುನ್ನ ಆರಂಭವಾಗುವ ಭಾರೀ ಪ್ರಮಾಣದ ಗುಡುಗು ಸಿಡಿಲು ಬಿರುಗಾಳಿ ಈಗಾಗಲೇ ಎರಡು ಜೀವಗಳನ್ನ ಬಲಿ ಪಡೆದುಕೊಂಡಿದ್ದು, ಮತ್ತಿಬ್ಬರ ಸ್ಥಿತಿ ಗಂಭೀರವಾಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೌದು, ಕಳೆದ ಹತ್ತು ದಿನಗಳ ಹಿಂದೆ ನರಸಿಂಹರಾಜಪುರ ತಾಲೂಕಿನ ಅರಳಿಕೊಪ್ಪದ ನಿವಾಸಿ 48 ವರ್ಷದ ಶಂಕರ್ ತೋಟಕ್ಕೆಂದು ಹೋಗಿದ್ದ ವೇಳೆ ಸಿಡಿಲು ಬಡಿದು ಮೃತಪಟ್ಟಿದ್ದರು.

ಇದನ್ನೂ ಓದಿ:ಅದೇ ಕಾಂಟ್ರಾಕ್ಟರ್…! ಅಂದು ಒಂದು ಸೇತುವೆ ಮಳೆಗೆ ಬಲಿ, ಇಂದು ಮತ್ತೊಂದು ಸೇತುವೆ ಗಾಳಿಗೆ ಬಲಿ

ಅಷ್ಟೇ ಅಲ್ಲದೇ ನಿನ್ನೆ(ಏ.22) ತರೀಕೆರೆ ತಾಲೂಕಿನ ಕಲ್ಲತ್ತಿಪುರಕ್ಕೆ ಹೋಗುತ್ತಿದ್ದ ವೇಳೆ ಭಾರೀ ಬಿರುಗಾಳಿಗೆ ಬೃಹತ್ ತೆಂಗಿನ ಮರ ಹಾಗೂ ವಿದ್ಯುತ್ ಕಂಬ ಮಾರುತಿ ಓಮ್ನಿ ಕಾರಿನ ಮೇಲೆ ಬಿದ್ದು ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು. ಕಾರಿನಲ್ಲಿದ್ದ ಚಿಕ್ಕಮಗಳೂರು ತಾಲೂಕಿನ ಮಾಚೇನಹಳ್ಳಿ ಗ್ರಾಮದ ನಿವಾಸಿ ದೇವರಾಜ್ ಸ್ಥಳದಲ್ಲೇ ಮೃತಪಟ್ಟಿದ್ದರೆ, ಹನುಮಪ್ಪ ಎಂಬುವವರು ಗಂಭೀರ ಗಾಯಗೊಂಡಿದ್ದಾರೆ. ಇನ್ನು ಮೂಡಿಗೆರೆ ತಾಲೂಕಿನ ಬೆಟ್ಟಗೆರೆಯ ಗದ್ಗೋಡು ಗ್ರಾಮದ ಲಕ್ಷ್ಮಣ ಶೆಟ್ಟಿ ಎಂಬುವವರ ಮನೆಗೆ ಮಂಗಳವಾರ ರಾತ್ರಿ ಸಿಡಿಲು ಬಡಿದಿದ್ದು, ಲಕ್ಷ್ಮಣ ಶೆಟ್ಟಿ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಷ್ಟು ದಿನ ಮಳೆ ಇಲ್ಲದೇ ಇದ್ದರೂ ಕಷ್ಟಪಟ್ಟು ಬಿಸಿಲ ತಾಪವನ್ನ ತಡೆದುಕೊಂಡಿದ್ದ ಮಲೆನಾಡಿಗರು ಮಳೆಗಾಲ ಆರಂಭಕ್ಕೂ ಮುನ್ನವೇ ಸಂಭವಿಸುತ್ತಿರುವ ಈ ಪ್ರಾಣ ಹಾನಿಗಳನ್ನು ಕಂಡು ಗದ್ಗದಿತರಾಗಿದ್ದಾರೆ. ಒಟ್ಟಾರೆಯಾಗಿ ಮಳೆಯ ನಾಡು ಚಿಕ್ಕಮಗಳೂರಿನ ಮಲೆನಾಡು ಭಾಗಕ್ಕೆ ವರುಣದೇವ ಕೃಪೆ ತೋರಿದರೂ ಕೂಡ ಗುಡುಗು, ಸಿಡಿಲು, ಬಿರುಗಾಳಿಯ ಅವಕೃಪೆಯಿಂದಾಗಿ ಉಂಟಾಗುತ್ತಿರುವ ಪ್ರಾಣ ಹಾನಿ ಹಾಗೂ ಗುಡುಗು ಸಿಡಿಲಿನ ಆರ್ಭಟಕ್ಕೆ ಮಲೆನಾಡಿಗರು ಅಕ್ಷಶಃ ಬೆಚ್ಚಿಬಿದ್ದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:04 pm, Tue, 23 April 24