ಕುದುರೆಮುಖ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ, ಭದ್ರಾ ನದಿಗೆ ಒಳಹರಿವಿನ ಪ್ರಮಾಣ ಹೆಚ್ಚಳ

| Updated By: ಕಿರಣ್ ಹನುಮಂತ್​ ಮಾದಾರ್

Updated on: May 19, 2024 | 4:27 PM

ಚಿಕ್ಕಮಗಳೂರು ಮಲೆನಾಡು ಭಾಗದಲ್ಲಿ ವರುಣಾರ್ಭಟ ಮುಂದುವರೆದಿದೆ. ಬಿರುಗಾಳಿ ಸಹಿತ ಧಾರಾಕಾರವಾಗಿ ಸುರಿಯುತ್ತಿರುವ ಬಿರುಗಾಳಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದ್ದು, ಕಳಸ ತಾಲೂಕಿನಾದ್ಯಂತ ಬಿರುಗಾಳಿ ಹೊಡೆತಕ್ಕೆ ಹತ್ತಾರು ಮನೆಗಳ ಮೇಲೆ ಮರ ಬಿದ್ದಿದ್ರೆ ,ರಸ್ತೆಗೆ ಅಡ್ಡಲಾಗಿ ಮರಗಳು ಬೀಳುತ್ತಿದ್ದು ವಿದ್ಯುತ್ ಕಂಬಗಳು ಮುರಿದು ಮಲೆನಾಡಿನ ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಕಟ್ ಆಗಿದೆ. ಜೊತೆಗೆ ದಕ್ಷಿಣ ಕಾಶಿ ಎಂದ ಪ್ರಸಿದ್ದವಾದ ಕಳಸೇಶ್ವರ ಸ್ವಾಮಿ ದೇವಸ್ಥಾನದ ಮೆಟ್ಟಿಲು ಮೇಲಿಂದ ನೀರು ಹರಿಯುತ್ತಿದೆ.

ಕುದುರೆಮುಖ ಘಟ್ಟ ಪ್ರದೇಶದಲ್ಲಿ ಭಾರಿ ಮಳೆ, ಭದ್ರಾ ನದಿಗೆ ಒಳಹರಿವಿನ ಪ್ರಮಾಣ ಹೆಚ್ಚಳ
ಕಳಸಾದಲ್ಲಿ ಮಳೆಯ ಅಬ್ಬರ
Follow us on

ಚಿಕ್ಕಮಗಳೂರು, ಮೇ.19: ಕಾಫಿನಾಡ ಮಲೆನಾಡಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಚಿಕ್ಕಮಗಳೂರು ಜಿಲ್ಲೆಯ ಕಳಸ (Kalasa) ತಾಲೂಕಿನಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆ(Rain)ಗೆ ಜನಜೀವನ ಅಸ್ತವ್ಯಸ್ತವಾಗಿದೆ. ಎತ್ತರದ ಪ್ರದೇಶದಲ್ಲಿರುವ ದಕ್ಷಿಣ ಕಾಶಿ ಕಳಸೇಶ್ವರ ಸ್ವಾಮಿ ದೇವಸ್ಥಾನದ ಮೆಟ್ಟಿಲು ಮೇಲಿಂದ ನೀರು ಹರಿಯುತ್ತಿದೆ. ಇತ್ತ ಕುದುರೆಮುಖ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಹಿನ್ನಲೆ ಭದ್ರಾ ನದಿ ಒಳಹರಿವಿನಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿದೆ.

ಮುಂಗಾರು ಪೂರ್ವ ಮಳೆಗೆ ಈಗಾಗಲೇ ಮೂರು ಬಲಿ

ಮುಂಗಾರು ಪೂರ್ವ ಮಳೆಯ ನಿರೀಕ್ಷೆಯಲ್ಲಿದ್ದ  ಜಿಲ್ಲೆಯ ಮಲೆನಾಡು ಭಾಗದ ಜನರು ಸಂತಸಗೊಂಡಿದ್ದಾರೆ. ಕಳೆದ ಒಂದು ವಾರದಿಂದ ಜಿಲ್ಲೆಯ ಮಲೆನಾಡು ತಾಲೂಕುಗಳಲ್ಲಿ ವರುಣಾರ್ಭಟ ಮುಂದುವರೆದಿದೆ. ಚಿಕ್ಕಮಗಳೂರು, ಕಳಸ,ಮೂಡಿಗೆರೆ, NRಪುರ, ಶೃಂಗೇರಿ ಕೊಪ್ಪದಲ್ಲಿ ಉತ್ತಮ ಮಳೆಯಾಗುತ್ತಿದೆ. ಮಳೆಯ ಜೊತೆಗೆ ಬಿರುಗಾಳಿ ಬೀಸುತ್ತಿದ್ದು, ಬಿರುಗಾಳಿ ಸಹಿತ ಗುಡುಗು ಮಿಂಚಿನೊಂದಿಗೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಅವಾಂತರವನ್ನು ಸೃಷ್ಟಿ ಮಾಡಿದೆ. ಮುಂಗಾರು ಪೂರ್ವ ಮಳೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೂವರನ್ನ ಬಲಿ ಪಡೆದಿದ್ದು ಆತಂಕ ಮೂಡಿಸಿದೆ.

ಇದನ್ನೂ ಓದಿ:ಚಿಕ್ಕಮಗಳೂರು: ಮೇವಿಗಾಗಿ ಕಾಡಿನಿಂದ ನಾಡಿಗೆ ಬಂದ ಕಾಡು ಕೋಣಗಳ ಹಿಂಡು

ನಿತ್ಯ ಸಂಜೆ ವೇಳೆಗೆ ಆರಂಭವಾಗುತ್ತಿರುವ ಗುಡುಗು, ಮಿಂಚು ಸಹಿತ ಬಿರುಗಾಳಿ ಮಳೆಯ ಅಬ್ಬರ ಮುಂದುವರೆದಿದ್ದು. ಕಳಸ ತಾಲೂಕಿನಲ್ಲಿ ಬಿಸುತ್ತಿರುವ ಬಿರುಗಾಳಿಗೆ ಮರಗಳು ಮುರಿದು ಬಿದ್ದು ಲಕ್ಷಾಂತರ ಮೌಲ್ಯದ ಆಸ್ತಿಪಾಸ್ತಿ ನಾಶವಾಗಿದೆ. ಕಳಸ ತಾಲೂಕಿನ ನೆಲ್ಲಿಕೆರೆ, ಕೈಮರ ,ಕಲ್ಮಕ್ಕಿ ಗ್ರಾಮದ ಹತ್ತಾರು ಮನೆಗಳ‌ ಮೇಲೆ ಮರ ಬಿದ್ದು ಮನೆಗಳ ಮೇಲ್ಛಾವಣಿಗೆ ಹಾನಿಯಾಗಿದೆ.ಇನ್ನೂ ರಸ್ತೆಗೆ ಅಡ್ಡಲಾಗಿ ಮರಗಳು ಬೀಳುತ್ತಿದ್ದು ವಾಹನ ಸವಾರರಲ್ಲಿ ಆತಂಕ ಮೂಡಿಸಿದೆ. ಮುಂಗಾರು ಪೂರ್ವ ಮಳೆಯು ಮಲೆನಾಡು ಭಾಗದಲ್ಲಿ ಅಬ್ಬರಿಸುತ್ತಿದ್ದು, ಬಿರುಗಾಳಿ ಸಹಿತ ಧಾರಾಕಾರ ಮಳೆ ಮಲೆನಾಡು ಭಾಗದಲ್ಲಿ ಅವಾಂತರ ಸೃಷ್ಟಿ ಮಾಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ