ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎಂಬ ಮಾತೊಂದಿದೆ. ಆದ್ರೆ, ಕೋಟೆನಾಡು ಚಿತ್ರದುರ್ಗದಲ್ಲಿ ಮಾತ್ರ ಕುಡಿದು ಬಂದ ಪತಿರಾಯ ಮಲಗುವ ಮುನ್ನ ಪತ್ನಿಯ ಹತ್ಯೆಗೈದ (murder) ಘಟನೆ ನಡೆದಿದೆ. ಈ ಕುರಿತು ವರದಿ ಇಲ್ಲಿದೆ. ಕುಡಿದ ಅಮಲಿನಲ್ಲಿ ಪತಿಯಿಂದಲೇ (Alcoholic husband) ಪತ್ನಿಯ (wife) ಭೀಕರ ಹತ್ಯೆ. ಕುಡಿತ ಬಿಟ್ಟು ದುಡಿಮೆ ಮಾಡು ಎಂದ ಪತ್ನಿಯ ಕೊಲೆ. ಗ್ರಾಮದಲ್ಲಿ ಆವರಿಸಿದ ನೀರವ ಮೌನ. ಈ ದೃಶ್ಯಗಳು ಕಂಡು ಬಂದಿರುವುದು ಚಿತ್ರದುರ್ಗ ( chitradurga) ತಾಲೂಕಿನ ಜೋಡಿ ಚಿಕ್ಕೇನಹಳ್ಳಿ ಗ್ರಾಮದಲ್ಲಿ.
ಹೌದು, ಗ್ರಾಮದ ಲಿಂಗರಾಜ್ ಕೃಷಿ ಮತ್ತು ಕೂಲಿ ಕೆಲಸ ಮಾಡಿಕೊಂಡಿದ್ದವನು. ಸುಮಾರು 12 ವರ್ಷಗಳ ಹಿಂದೆಯೇ ಲಕ್ಷ್ಮೀ ಜತೆ ಮದುವೆ ಆಗಿದ್ದನು. ಸುಂದರ ಸಂಸಾರಕ್ಕೆ ಇಬ್ಬರು ಮಕ್ಕಳು ಸಹ ಜತೆ ಆಗಿದ್ದರು. ಆದ್ರೆ, ಇತ್ತೀಚೆಗೆ ದುಡಿಯುವುದನ್ನು ಬಿಟ್ಟಿದ್ದ ಲಿಂಗರಾಜ್ ಕುಡಿತಕ್ಕೆ ದಾಸನಾಗಿದ್ದ. ಪತ್ನಿ ಲಕ್ಷ್ಮೀಯೇ ಕೂಲಿ ಕೆಲಸ ಮಾಡಿ ಮನೆ ನಡೆಸುವ ಸ್ಥಿತಿ ನಿರ್ಮಾಣ ಆಗಿತ್ತು.
ಈ ಹಿನ್ನೆಲೆಯಲ್ಲಿ ಆಗಾಗ ಗಂಡ ಹೆಂಡತಿ ನಡುವೆ ಗಲಾಟೆ ನಡೆಯುತ್ತಿತ್ತು. ನಿನ್ನೆ ಸಂಜೆ ವೇಳೆ ಲಕ್ಷ್ಮೀ ಕೂಲಿ ಕೆಲಸ ಮುಗಿಸಿ ಮನೆಗೆ ಬಂದಿದ್ದಳು. ಗ್ರಾಮದಲ್ಲಿ ಗ್ರಾಮ ಪಂಚಾಯತಿ ಉಪ ಚುನಾವಣೆ ಹಿನ್ನೆಲೆಯಲ್ಲಿ ಕುಡಿದ ಅಮಲಿನಲ್ಲಿ ತೇಲುತ್ತಿದ್ದ ಪತಿ ಲಿಂಗರಾಜುನನ್ನು ಕಂಡು ಕುಡಿತ ಬಿಟ್ಟು ದುಡಿಮೆ ಮಾಡುವಂತೆ ಹೇಳಿದ್ದಳು. ಪರಿಣಾಮ ಗಂಡ ಹೆಂಡಿರ ಗಲಾಟೆ ಶುರುವಾಗಿದ್ದು ಲಿಂಗರಾಜು ಕಟ್ಟಿಗೆಯಿಂದ ಪತ್ನಿ ಲಕ್ಷ್ಮೀ ತಲೆಗೆ ಬಲವಾಗಿ ಹೊಡೆದಿದ್ದಾನೆ. ಪರಿಣಾಮ ಲಕ್ಷ್ಮೀ ಸಾವಿಗೀಡಾದ ಘಟನೆ ನಡೆದಿದೆ.
ಇನ್ನು ಮೃತ ಲಕ್ಷ್ಮೀಗೆ ಪೋಷಕರು ಇಲ್ಲ. ದೂರದ ಊರಲ್ಲಿ ಸಹೋದರನಿದ್ದಾನಾದರೂ ಸಂಬಂಧಿಗಳ ಸಂಪರ್ಕಕ್ಕೆ ಸಿಕ್ಕಿಲ್ಲ. ಚಿತ್ರದುರ್ಗ ಗ್ರಾಮಾಂತರ ಠಾಣೆಯ ಪೊಲೀಸ್ರು ಜೋಡಿಚಿಕ್ಕೇನಹಳ್ಳಿಯಲ್ಲಿನ ಸಂಬಂಧಿಕರ ಮೂಲಕವೇ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಪತಿ ಲಿಂಗರಾಜುನನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಚಿತ್ರದುರ್ಗ ಎಸ್ಪಿ ಕೆ. ಪರಶುರಾಮ್ ಮಾಹಿತಿ ನೀಡಿದ್ದಾರೆ.
ಒಟ್ಟಾರೆಯಾಗಿ ಸುಂದರ ಸಂಸಾರ ಕಟ್ಟಿಕೊಳ್ಳುವ ದೃಷ್ಟಿಯಿಂದ ಪತಿಗೆ ಬುದ್ಧಿವಾದ ಹೇಳಿದ ಪತ್ನಿಯೇ ಹತ್ಯೆಗೀಡಾದ ದಾರುಣ ಘಟನೆ ಜೋಡಿ ಚಿಕ್ಕೇನಹಳ್ಳಿಯಲ್ಲಿ ನಡೆದಿದೆ. ಪಾಪಿ ಕುಡುಕ ಪತಿ ವಿರುದ್ಧ ಜನ ಹಿಡಿಶಾಪ ಹಾಕುವಂತಾಗಿದೆ. ಗ್ರಾಮಾಂತರ ಠಾಣೆಯ ಪೊಲೀಸ್ರು ಪ್ರಕರಣದ ಕೂಲಂಕಷ ತನಿಖೆ ನಡೆಸಿ ಪಾಪಿ ಪತಿಗೆ ತಕ್ಕ ಶಿಕ್ಷೆ ವಿಧಿಸಬೇಕಿದೆ.
ವರದಿ: ಬಸವರಾಜ ಮುದನೂರ್, ಟಿವಿ9, ಚಿತ್ರದುರ್ಗ