ಚಿತ್ರದುರ್ಗ: ರಾಜ್ಯ ವಿಧಾನ ಸಭಾ ಚುನಾವಣೆಗೆ(Karnataka Assembly Elections 2023) ಕ್ಷಣಗಣನೆ ಶುರುವಾಗಿದೆ. ಯಾವ ಕ್ಷಣದಲ್ಲಿ ಬೇಕಾದರೂ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ. ಹೀಗಿರುವಾಗ ರಾಜಕೀಯ ಪಕ್ಷಗಳಲ್ಲಿ ಭಿನ್ನಮತ ಸ್ಪೋಟಗೊಳ್ಳುತ್ತಿದೆ. ಕೋಟೆನಾಡು ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ವಿಧಾನಸಭೆ ಕ್ಷೇತ್ರ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟಗೊಂಡಿದೆ. ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ (S Thippeswamy) ಬಿಜೆಪಿ ಸೇರ್ಪಡೆ ಹಿನ್ನೆಲೆ ಸಾರಿಗೆ ಸಚಿವ ಬಿ.ಶ್ರೀರಾಮುಲು(Sri Ramulu) ವಿರುದ್ಧ ಬಿಜೆಪಿ ಮುಖಂಡರು ಕಿಡಿಕಾರಿದ್ದಾರೆ. ಶ್ರೀರಾಮುಲು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಮುಖಂಡರು ಅಸಮಾಧಾನ ಹೊರ ಹಾಕಿದ್ದಾರೆ.
ಕಳೆದ 5 ವರ್ಷ ಶ್ರೀರಾಮುಲು ವಿರುದ್ಧ ತಿಪ್ಪೇಸ್ವಾಮಿ ಸಮರ ಸಾರಿದ್ದರು. 2018ರಲ್ಲಿ ಬಿಜೆಪಿ ಟಿಕೆಟ್ ತಪ್ಪಿಸಿ ಶ್ರೀರಾಮುಲು ಸ್ಪರ್ದೆ ಮಾಡಿದ್ದ ಹಿನ್ನೆಲೆ ಅವರ ವಿರುದ್ಧ ಸಮರ ಸಾರಿದ್ದರು. ಬಳಿಕ ಕಾಂಗ್ರೆಸ್ ಸೇರಿದ್ದ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಈಗ ಮತ್ತೆ ಅಂದ್ರೆ ಕೆಲ ದಿನಗಳ ಹಿಂದೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ. ಸಾರಿಗೆ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಸದ್ಯ ಈಗ ಎಸ್.ತಿಪ್ಪೇಸ್ವಾಮಿಗೆ ಬಿಜೆಪಿ ಟಿಕೆಟ್ ಎಂದು ಬಿಂಬಿಸಿರುವುದಕ್ಕೆ ಬಿಜೆಪಿ ಮುಖಂಡ, ಬಿಜೆಪಿ ಟಿಕೆಟ್ ಆಕಾಂಕ್ಷಿ ತಿಪ್ಪೇಸ್ವಾಮಿ ಎತ್ತಿನಹಟ್ಟಿಗೌಡ್ರು ಕಿಡಿಕಾರಿದ್ದಾರೆ. ಶ್ರೀರಾಮುಲು ಕ್ಷೇತ್ರವನ್ನೇ ವ್ಯಾಪಾರಕ್ಕಿಟ್ಟು ಕೊಳ್ಳೆ ಹೊಡೆದಿದ್ದಾರೆ. ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಶ್ರೀರಾಮುಲು ಸೂಚಿಸುವ ವ್ಯಕ್ತಿ ನಮ್ಮ ಕ್ಷೇತ್ರಕ್ಕೆ ಬೇಕಿಲ್ಲ ಎಂದಿದ್ದಾರೆ.
ಇದನ್ನೂ ಓದಿ: CT Ravi: ಜೀಪ್-ಕಾರು ಡಿಕ್ಕಿ; ಕಾರಿನಲ್ಲಿ ಮದ್ಯ, ಸಿ.ಟಿ. ರವಿ ಭಾವಚಿತ್ರವಿರುವ ಕ್ಯಾಲೆಂಡರ್ ಪತ್ತೆ!
ಇನ್ನು ಮತ್ತೊಂದೆಡೆ ಬಿಜೆಪಿ ಜಿಲ್ಲಾ ಪ್ರ.ಕಾರ್ಯದರ್ಶಿ, ಬಿಜೆಪಿ ಟಿಕೆಟ್ ಆಕಾಂಕ್ಷಿ ಜಯಪಾಲಯ್ಯ ಕೂಡ ಕಿಡಿಕಾರಿದ್ದಾರೆ. ಶ್ರೀರಾಮುಲು ವಿರುದ್ಧ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಗಲಾಟೆ ಮಾಡಿಸಿದ್ದರು. ಗಲಾಟೆ ಮಾಡಿಸಿದವರನ್ನು ಶ್ರೀರಾಮುಲು ಬಿಜೆಪಿ ಸೇರ್ಪಡೆ ಮಾಡಿದ್ದಾರೆ. ಬಿಜೆಪಿ ಕಾರ್ಯಕರ್ತರ ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ. ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗಿದೆ. ಪಕ್ಷ ಎಲ್ಲವನ್ನು ಪರಿಶೀಲಿಸಿ ಬಿಜೆಪಿ ಟಿಕೆಟ್ ನೀಡುವ ವಿಶ್ವಾಸವಿದೆ. ವಿಜಯ ಸಂಕಲ್ಪ ಯಾತ್ರೆ ವೇಳೆ ತಿಪ್ಪೇಸ್ವಾಮಿ ಅಭ್ಯರ್ಥಿ ಎಂಬಂತೆ ಶೋ ಮಾಡಲಾಗಿದೆ ಎಂದರು. ಎಸ್.ತಿಪ್ಪೇಸ್ವಾಮಿಗೆ ಟಿಕೆಟ್ ನೀಡದಂತೆ ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಕ್ಷೇತ್ರ ವ್ಯಾಪ್ತಿಯ ಕಾಲುವೆಹಳ್ಳಿ ಗ್ರಾಮದಲ್ಲಿಂದು ಬಿಜೆಪಿ ಜಿಲ್ಲಾ ಪ್ರ.ಕಾರ್ಯದರ್ಶಿ ಜಯಪಾಲಯ್ಯ ಬರ್ತಡೇ ಕಾರ್ಯಕ್ರಮ ಏರ್ಪಡಿಸಲಾಗಿದ್ದು ಕಾರ್ಯಕ್ರಮ ವೇಳೆ ಶ್ರೀರಾಮುಲು ವಿರುದ್ಧ ಭಿನ್ನಮತ ಸ್ಫೋಟಗೊಂಡಿದೆ. ಕಾರ್ಯಕ್ರಮದಲ್ಲಿ ಮೊಳಕಾಲ್ಮೂರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ ಜಯಪಾಲಯ್ಯ, ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು, ಜಿ.ಪಂ ಮಾಜಿ ಸದಸ್ಯ ನಾಗಿರೆಡ್ಡಿ ಇತರೆ ಮುಖಂಡರು ಭಾಗಿಯಾಗಿದ್ದರು. ಸಾರಿಗೆ ಸಚಿವ ಶ್ರೀರಾಮುಲು ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಮಾಜಿ ಶಾಸಕ ತಿಪ್ಪೇಸ್ವಾಮಿಗೆ ಬಿಜೆಪಿ ಟಿಕೆಟ್ ನೀಡದಂತೆ ಆಗ್ರಹಿಸಿದ್ದಾರೆ. ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ ಜಯಪಾಲಯ, ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು, ಪ್ರಭಾಕರ್ ಮ್ಯಾಸ್ ನಾಯಕ್ ಮೂವರೊಳಗೊಬ್ಬರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿದ್ದಾರೆ. ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ವಿರುದ್ಧ ಇತರೆ ಆಕಾಂಕ್ಷಿಗಳು ಒಂದಾಗಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:35 am, Mon, 27 March 23