ಚಿತ್ರದುರ್ಗ, ಆ.1: ನಗರದಲ್ಲಿರುವ ಸರ್ಕಾರಿ ಜಿಲ್ಲಾಸ್ಪತ್ರೆ(Government District Hospital)ಗೆ ನಿತ್ಯ ಅನೇಕ ಗರ್ಭಿಣಿಯರು ಬಂದು ಚಿಕಿತ್ಸೆ ಪಡೆಯುತ್ತಾರೆ. ಆದ್ರೆ, ಹೆರಿಗೆ ಬಳಿಕ ಅನೇಕರಿಗೆ ಬೆಡ್ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ಪುಟ್ಟ ಕಂದಮ್ಮಗಳು ಇನ್ನೂ ಐಸಿಯುನಲ್ಲಿರುವಾಗಲೇ ತಾಯಿ ಈ ವಾರ್ಡ್ನಿಂದ ಹೊರಗಡೆ ಕಳುಹಿಸಲಾಗುತ್ತದೆ. ಪರಿಣಾಮ ಮಗುವಿಗೆ ಹಾಲು ಕೊಟ್ಟು ಹಾರೈಕೆ ಮಾಡಬೇಕಾದ ತಾಯಿ, ಹೆರಿಗೆ ವಾರ್ಡ್ನ ಹೊರಗೆ ನೆಲದ ಹಾಸಿಗೆ ಮೇಲೆ ವಿಶ್ರಾಂತಿ ಪಡೆಯಬೇಕು. ಅಥವಾ ಬೆಂಚ್ಗಳನ್ನೇ ಆಶ್ರಯಿಸಿಕೊಳ್ಳಬೇಕಾದ ದುಸ್ಥಿತಿ ನಿರ್ಮಾಣ ಆಗಿದೆ. ಇನ್ನು ಚಳಿ, ಗಾಳಿಯ ಸಂದರ್ಭದಲ್ಲಿ ಬಾಣಂತಿಯರ ಸಂಕಷ್ಟ ಹೇಳತೀರದಾಗಿದೆ. ಇಷ್ಟೆಲ್ಲಾ ಸಮಸ್ಯೆ ಇದ್ದರೂ ಜಿಲ್ಲಾಸ್ಪತ್ರೆಯವರು ಮಾತ್ರ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.
ಇನ್ನು ಈಗಾಗಲೇ ತಾಯಿ ಮಕ್ಕಳ ವಾರ್ಡ್ಗಾಗಿಯೇ ಜಿಲ್ಲಾಸ್ಪತ್ರೆಯ ಆವರಣದಲ್ಲಿ ನೂತನ ಬಿಲ್ಡಿಂಗ್ ನಿರ್ಮಾಣ ಆಗಿದ್ದು, ಈಗಾಗಲೇ ಮೂರು ವರ್ಷಗಳೇ ಕಳೆಯುತ್ತಿದೆ. ಆದ್ರೆ, ಇನ್ನೂ ಉದ್ಘಾಟನೆ ಮಾಡುವಲ್ಲಿ ಆರೋಗ್ಯ ಇಲಾಖೆ, ಜಿಲ್ಲಾಸ್ಪತ್ರೆಯ ಅಧಿಕಾರಿಗಳು ವಿಫಲರಾಗಿದ್ದಾರೆ. ಈ ಬಗ್ಗೆ ಜಿಲ್ಲಾಸ್ಪತ್ರೆಯ ಸರ್ಜನ್ ಡಾ.ಬಸವರಾಜ್ ಅವರನ್ನು ಕೇಳಿದರೆ. ‘ಬೆಡ್ಗಳ ಕೊರತೆಯಿಂದ ಬಾಣಂತಿಯರು ವಾರ್ಡ್ ಹೊರಭಾಗದಲ್ಲಿ ನೆಲ, ಬೆಂಚ್ ಮೇಲೆ ವಿಶ್ರಾಂತಿ ಪಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಮಗು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ಹೆರಿಗೆಯಾದ ಬಳಿಕ ವಾರ್ಡ್ನಿಂದ ಡಿಸ್ಚಾರ್ಜ್ ಆಗಿದ್ದವರು ಹೆರಿಗೆ ವಾರ್ಡ್ ಬಳಿ ನೆಲದ ಮೇಲೆ ವಿಶ್ರಾಂತಿ ಪಡೆಯುವಂತಾಗಿದೆ. ಇನ್ನು ಎರಡ್ಮೂರು ತಿಂಗಳಲ್ಲಿ ಪ್ರತ್ಯೇಕ ಸುಸಜ್ಜಿತ ಕಟ್ಟಡ ಉದ್ಘಾಟನೆ ಆಗಲಿದೆ. ಬಾಣಂತಿಯರಿಗೂ ಪ್ರತ್ಯೇಕ 50ಬೆಡ್ನ ವಾರ್ಡ್ ನಿರ್ಮಾಣಕ್ಕೆ ಪ್ರಪೋಸಲ್ ನೀಡಲಾಗಿದ್ದು, ಶೀಘ್ರ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ನಗರದಲ್ಲಿನ ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆ ವಾರ್ಡ್ನ ಸ್ಥಿತಿ ಹದಗೆಟ್ಟಿದೆ. ಬಾಣಂತಿಯರು ನೆಲದ ಹಾಸಿಗೆ, ಬೆಂಚ್ಗಳಲ್ಲಿ ಆಶ್ರಯ ಪಡೆಯುವ ದುಸ್ಥಿತಿ ನಿರ್ಮಾಣ ಆಗಿದೆ. ಹೀಗಾಗಿ, ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಶೀಘ್ರವಾಗಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:05 pm, Tue, 1 August 23