ದೆಹಲಿ: ಸೆಪ್ಟೆಂಬರ್ 5ರಂದು ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿ(National Best Teacher Award) ಪ್ರದಾನ ಮಾಡಲಾಗುತ್ತಿದ್ದು ಕರ್ನಾಟಕದ ಇಬ್ಬರು ಶಿಕ್ಷಕರು ಈ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಅಮೃತಪುರ ಶಾಲೆಯ ಶಿಕ್ಷಕ ಉಮೇಶ್ ಹಾಗೂ ತುಮಕೂರಿನ ಕೇಂದ್ರೀಯ ವಿದ್ಯಾಲಯದ ಶಿಕ್ಷಕಿ ಪೊನಶಂಕರಿ ಆಯ್ಕೆ ಆಗಿದ್ದಾರೆ. ದೆಹಲಿಯ ವಿಜ್ಞಾನ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ದೇಶಾದ್ಯಂತ ಉತ್ತಮ ಶಿಕ್ಷಕ ಪ್ರಶಸ್ತಿಗೆ 46 ಶಿಕ್ಷಕರು ಆಯ್ಕೆ ಆಗಿದ್ದಾರೆ.
ಟಿ.ಪಿ.ಉಮೇಶ್ ಪರಿಚಯ
ಅಮೃತಾಪುರ ಸಹಶಿಕ್ಷಕರಾದ ಟಿ.ಪಿ.ಉಮೇಶ್ ಅವರಿಗೆ ರಾಷ್ಟ್ರೀಯ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಸಾಸಲರ ಪರಮೇಶ್ವರಪ್ಪ ಮತ್ತು ಜಯಮ್ಮ ತೊಡರನಾಳು ದಂಪತಿ ಪುತ್ರ ಟಿ.ಪಿ.ಉಮೇಶ್ಗೆ ಟಿ.ಪಿ. ಸುರೇಶ್ ಮತ್ತು ನಾಗರಾಜ್ ಎಂಬ ಇಬ್ಬರು ಸಹೋದರರಿದ್ದಾರೆ. ಇವರ ಪತ್ನಿ ಟಿ.ಬಿ.ಅನಿತ ವಿಜ್ಞಾನ ಶಿಕ್ಷಕಿಯಾಗಿದ್ದು ನ್ಯಾಷನಲ್ ಇನ್ನೋವೇಟಿವ್ ಟೀಚರ್ ಅವಾರ್ಡ್ ಪಡೆದಿದ್ದಾರೆ.
2004 ರ ಜನವರಿಯಲ್ಲಿ ಶಿಕ್ಷಕರ ವೃತ್ತಿಗೆ ಸೇರಿದ ಇವರು ಬಳ್ಳಾರಿ ಜಿಲ್ಲೆ ಚಿಕ್ಕಬಳ್ಳಾರಿ ನಂತರ ಚಿತ್ರದುರ್ಗದ ಹೊಳಲ್ಕೆರೆ ತಾಲ್ಲೋಕಿನ ಕೇಶವಾಪುರ ಶಾಲೆಯಲ್ಲಿ ಸೇವೆ ಸಲ್ಲಿಸಿ ಕಳೆದ 12 ವರ್ಷಗಳಿಂದ ಹೊಳಲ್ಕೆರೆಯ ಸರ್ಕಾರಿ ಪ್ರಾಥಮಿಕ ಶಾಲೆ ಅಮೃತಾಪುರದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಂದಿಗು ಬಸ್ ಸೌಲಭ್ಯಗಳಿಲ್ಲದ ಹಳ್ಳಿ ಬುಡಕಟ್ಟು ಜನ ಸಮುದಾಯದ ಗಡಿ ಗ್ರಾಮ ಅಮೃತಾಪುರ. ಈಗ ಪಕ್ಕಾ ರಸ್ತೆ ಇದೆ. ಕಳೆದ ಎಂಟತ್ತು ವರ್ಷಗಳ ಹಿಂದೆ ಕೆಸರಿನ ಕಚ್ಚಾ ರಸ್ತೆ ಇತ್ತು. ಚಿತ್ರದುರ್ಗದ ಜಿಲ್ಲಾ ಕೇಂದ್ರದಿಂದ 30 ಕಿ.ಮೀ., ಹೊಳಲ್ಕೆರೆ ತಾಲ್ಲೂಕಿನಿಂದ 24 ಕಿ.ಮೀ., ದೂರದ ಅಮೃತಾಪುರ ಬುಡಕಟ್ಟು ಸಮುದಾಯವಾದ ಗೊಲ್ಲ ಜನಾಂಗದವರಿರುವ ಗ್ರಾಮ. ಮೊದಲೆಲ್ಲ ಚಿತ್ರಹಳ್ಳಿ ಗೇಟ್ ನಿಂದ ನಡೆದುಕೊಂಡು, ನಂತರ ಸೈಕಲ್ ನಲ್ಲಿ ನಂತರ ಬೈಕ್ ನಲ್ಲಿ ಸಂಚರಿಸಿ ಗ್ರಾಮದ ಶಾಲೆಯ ಶೈಕ್ಷಣಿಕ ಹಾಗು ಗ್ರಾಮದ ಸಾಮಾಜಿಕ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ಇವರ ನಿಸ್ವಾರ್ಥ ಹಾಗು ಪರಿಶ್ರಮದ ಶೈಕ್ಷಣಿಕ ಸೇವೆಗೆ 2017 ರಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದಿದ್ದಾರೆ. 2013 ಹಾಗು 2019 ರಲ್ಲಿ ರೋಟರಿ ಇಂಟರ್ ನ್ಯಾಷನಲ್ ನಿಂದ ನೇಷನ್ ಬಿಲ್ಡರ್ ಅವಾರ್ಡ್ ಪಡೆದಿದ್ದಾರೆ. ಇವರ ಶ್ರಮದಿಂದ ಹಿಂದುಳಿದ ಹೊಳಲ್ಕೆರೆ ಅಮೃತಾಪುರ ಶಾಲೆ ಹೈಟೆಕ್ ಆಗಿದೆ. ಟಿ.ಬಿ.ಅನಿತ ಕೊರೊನಾ ಸಂಕಷ್ಟದಲ್ಲಿ ಶಾಲಾ ಕೆಲಸಕ್ಕೆ ರಜೆ ಹಾಕದೆ ಕರ್ತವ್ಯ ನಿರ್ವಹಿಸಿದ್ದಾರೆ. ಸೋಮವಾರದಿಂದ ಶನಿವಾರದ ತನಕ ಶಾಲೆಯಲ್ಲೆ ಉಳಿದು ಪಾಳಿಗಳಲ್ಲಿ ಪಾಠ ಬೋಧಿಸಿದ್ದಾರೆ. ವಿದ್ಯಾಗಮ, ಜಗಲಿ ಶಾಲೆ, ಗುಡಿ ಶಾಲೆ, ಆನ್‌ಲೈನ್ ಪಾಠ ಕೈಗೊಂಡಿದ್ದಾರೆ. ನೆಟ್ ಇಲ್ಲದ ಮಕ್ಕಳ ಕೀಪ್ಯಾಡ್ ಮೊಬೈಲ್ ಗೆ ಇವರೇ ಕರೆಮಾಡಿ ಪಾಠದ ಮುಖ್ಯಾಂಶಗಳ ಹೇಳಿವ ಮೂಲಕ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿದ್ದಾರೆ.
ಕರೆನ್ಸಿ ಇಲ್ಲದ ಫೋನ್ (ಬಹಳ ಕೂಲಿಕಾರ ಮಕ್ಕಳು ಇಲ್ಲಿದ್ದಾರೆ) ಇರುವ ಮಕ್ಕಳು ಮಿಸ್ ಕಾಲ್ ಕೊಟ್ಟರು ಇವರೇ ಕರೆಮಾಡಿ ಪಾಠದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಮಿಸ್ ಕಾಲ್ ಕೊಡಿ ಪಾಠ ಕೇಳಿ ಅಭಿಯಾನ ಕೊರೊನಾದ ಎರಡು ವರ್ಷದಿಂದಲು ಮಾಡುತ್ತ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಯಾವುದೇ ಮಗು ಕೊರೊನಾ ಸಂಕಷ್ಟದಿ ಅನಾರೋಗ್ಯಕ್ಕೆ ಒಳಗಾಗದಂತೆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾಕ್ಟರ್, ನರ್ಸ್ ಆಶಾ ಕಾರ್ಯಕರ್ತರ ಜೊತೆ ಸಂಪರ್ಕ ಇರಿಸಿಕೊಂಡು ಜಾಗೃತಿ ಮೂಡಿಸಿದ್ದಾರೆ. 2015 ರಲ್ಲಿ ಪ್ರಕೃತಿ ವಿಕೋಪದಿಂದ ಇದ್ದ ಮೂರು ಕೊಠಡಿಗಳಲ್ಲಿ ಎರಡು ಕೊಠಡಿಗಳು ಬಿದ್ದು ಹೋದಾಗ… ಸರ್ಕಾರದ ನೆರವು ಸಿಗದಾದಾಗ ಎರಡು ವರ್ಷ ಗ್ರಾಮದ ಗುಡಿಯಲ್ಲಿ, ಮರದ ನೆರಳಿನಲ್ಲಿ, ತಾತ್ಕಾಲಿಕ ಟೆಂಟನಲ್ಲಿ ಪಾಠ ಮಾಡಿದ್ದಾರೆ. ಮಕ್ಕಳ ದಾಖಲಾತಿ ಯಾವತ್ತು ಕಡಿಮೆಯಾಗದಂತೆ ಕಾಪಾಡಿಕೊಂಡಿದ್ದಾರೆ.
2016 ರಲ್ಲಿ ಖಾಸಗಿ NGO ಓಸಾಟ್ ಮತ್ತು ರೋಟರಿ ಬೆಂಗಳೂರು ಎಂಬ ಸಂಸ್ಥೆ ಸಂಪರ್ಕಿಸಿ ಅವರ ಒಪ್ಪಿಸಿ 30 ಲಕ್ಷ ರೂಗಳಲ್ಲಿ ಸುಸಜ್ಜಿತ ನಾಲ್ಕು ಕೊಠಡಿ ಹಾಗು ಬಾಲಕ ಬಾಲಕಿಯರಿಗೆ ಶೌಚಾಲಯ ನಿರ್ಮಿಸಲು ನೆರವು ನೀಡಿದ್ದಾರೆ. ಮಕ್ಕಳಿಗೆ ಬೆಂಗಳೂರು ರೋಟರಿಯಿಂದ 20 ಮರದ ಡೆಸ್ಕ್ ಹಾಗು 60 ರೀಡಿಂಗ್ ಟೇಬಲ್ ಮತ್ತು ವಾಟರ್ ಫಿಲ್ಟರ್ ಸೇರಿ 3 ಲಕ್ಷ ರೂಗಳ ವಸ್ತುಗಳ ದೇಣಿಗೆ ಪಡೆದಿದ್ದಾರೆ. ಸ್ಥಳೀಯ ದಾನಿಗಳಿಂದ 3 ಲಕ್ಷ ರೂಗಳಲ್ಲಿ ರಂಗಮಂದಿರ ನಿರ್ಮಿಸಿದ್ದಾರೆ. ಸ್ನೇಹಿತ ದಾನಿಗಳಿಂದ ಒಂದು ಲಕ್ಷ ರೂ ಮೌಲ್ಯದ 3 ಲ್ಯಾಪ್ ಟಾಪ್ ಪಡೆದು ICT ಲ್ಯಾಬ್ ನಿರ್ಮಿಸಿ ಪಾಠ ಮಾಡುತ್ತಿದ್ದಾರೆ.
ವಿಜ್ಞಾನ ಲ್ಯಾಬ್ ನ್ನು ಸ್ಥಳೀಯ ಹೈಸ್ಕೂಲ್ ಹಾಗು ಕಾಲೇಜುಗಳಿಂದ ಹಳೆಯ ವಿಜ್ಞಾನ ಉಪಕರಣ ಕೇಳಿ ಪಡೆದು ನಿರ್ಮಿಸಿದ್ದಾರೆ. ಸರ್ಕಾರಿ ಪ್ರಾಥಮಿಕ ಶಾಲೆ ವಿಭಾಗದಿ ಕಿರು ಪ್ರಯೋಗಾಲಯದ ಲ್ಯಾಬ್ ಹೊಂದಿದ ಏಕೈಕ ಶಾಲೆ ಅಮೃತಾಪುರ. ಪ್ರತ್ಯೇಕ ಪಾಠೋಪಕರಣಗಳ ಸಂಗ್ರಹ ಕೊಠಡಿ ನಿರ್ಮಿಸಿದ್ದಾರೆ. ಜಿಲ್ಲೆಯಲ್ಲಿಯೇ ಕಿರಿಯ ಪ್ರಾಥಮಿಕ ವಿಭಾಗದಿ ಪ್ರತ್ಯೇಕ ಕೊಠಡಿಯಲ್ಲಿ ಗ್ರಂಥಾಲಯ ಹೊಂದಿದ ಏಕೈಕ ಶಾಲೆ ಅಮೃತಾಪುರವಾಗಿ ರೂಪಿಸಿದ್ದಾರೆ. ಅಮೃತಾಪುರ ಕಿರಿಯ ಪ್ರಾಥಮಿಕ ಶಾಲೆ ಆದರು ಹೈಸ್ಕೂಲ್/ಕಾಲೇಜು ಮಟ್ಟದ ಸೌಲಭ್ಯಗಳನ್ನು ಮಕ್ಕಳಿಗಾಗಿ ಕಲ್ಪಿಸಿದ್ದಾರೆ. ಮೊದಲೆಲ್ಲ ದಾಖಲಾತಿ 40 ಕ್ಕಿಂತ ಕಡಿಮೆ ಇತ್ತು 8 ವರ್ಷದ ಹಿಂದೆಯೇ ಹೊಳಲ್ಕೆರೆ ತಾಲ್ಲೊಕಿನಲ್ಲಿ ಸರ್ಕಾರಿ ಶಾಲೆಯಲ್ಲಿ ಪ್ರಥಮವಾಗಿ lkg ukg ಮಕ್ಕಳ ಮನೆ ಓಪನ್ ಮಾಡಿ ಸ್ಥಳೀಯ ವ್ಯಕ್ತಿಗಳ ಬಳಸಿಕೊಂಡು ದಾಖಲಾತಿ ಹೆಚ್ಚಿಸಿಕೊಂಡು ಖಾಸಗಿ ಶಾಲೆಯ ಎಲ್ಲ ಮಕ್ಕಳು ಶಾಲೆಗೆ ಬರುವಂತೆ ಮಾಡಿ ಪ್ರತಿ ವರ್ಷ 60 ರಿಂದ 70 ರಷ್ಟು ಮಕ್ಕಳ ದಾಖಲಾತಿ ಕಡಿಮೆಯಾಗದಂತೆ ಪೋಷಕರ ನಂಬಿಕೆ ಉಳಿಸಿಕೊಂಡಿದ್ದಾರೆ. ಈ ಶೈಕ್ಷಣಿಕ ವರ್ಷ 64 ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿಯುತ್ತಿದ್ದಾರೆ.
ಕಿರಿಯ ಪ್ರಾಥಮಿಕ ಶಾಲೆ ವಿಭಾಗದಲ್ಲಿ ಅಮೃತಾಪುರ ಶಾಲೆ ಹೊಳಲ್ಕೆರೆ ತಾಲ್ಲೋಕಿನಲ್ಲಿ ಹೆಚ್ಚು ದಾಖಲಾತಿ ಹೊಂದಿದ ಶಾಲೆಯಾಗಿದೆ. ಅನುದಾನ ಕಡಿಮೆ ಆದ ಕಾರಣ ಸ್ವಂತ 20 ಸಾವಿರ ಖರ್ಚಿನಲ್ಲಿ ಶಾಲೆಗೆ 2020 ರಲ್ಲಿ ಬಣ್ಣ ಬಳಿಸಿದ್ದಾರೆ. ಅಂದ ಚಂದಗೊಳಿಸಿ ಮಕ್ಕಳಿಗೆ ಆಕರ್ಷಣೆಯಾಗುವಂತೆ ಮಾಡಿದ್ದಾರೆ.
Published On - 10:24 pm, Thu, 25 August 22