Updated on: Mar 11, 2023 | 1:01 PM
ವಿಶೇಷ ಸಂದರ್ಭದಲ್ಲಿ ದೇವರ ದರ್ಶನಕ್ಕೆ ಸಾಲುಗಟ್ಟಿ ನಿಂತ ಭಕ್ತರು. ಭಕ್ತಗಣ ಸಾಗರದ ನಡುವೆ ಆರಾಧ್ಯ ದೇವರ ಅದ್ಧೂರಿ ರಥೋತ್ಸವ. ಕ್ವಿಂಟಲ್ ಗಟ್ಟಲೆ ಕೊಬ್ಬರಿ ಸುಟ್ಟು ಹರಕೆ ತೀರಿಸಿದ ಭಕ್ತರು. ಈ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ.
15, 16ನೇ ಶತಮಾನದಲ್ಲಿ ಲೋಕಸಂಚಾರ ಹೊರಟಿದ್ದ ಸಂತ ತಿಪ್ಪೇರುದ್ರಸ್ವಾಮಿ ಕೋಟೆನಾಡಿನ ನಾಯಕನಹಟ್ಟಿಗೆ ಆಗಮಿಸುತ್ತಾರಂತೆ. ಆಗ ಭೀಕರ ಬರಗಾಲದಿಂದ ಈ ಭಾಗದ ಜನ ತತ್ತರಿಸಿರುವುದು ಕಂಡು ಹಲವು ಪರಿಹಾರ ನೀಡುತ್ತಾರೆ.
ಸಂತ ತಿಪ್ಪೇರುದ್ರಸ್ವಾಮಿಯವರು ಏಳು ಕೆರೆಗಳನ್ನು ನಿರ್ಮಿಸಿ ಜನರಿಗೆ ನೆರವಾಗುತ್ತಾರೆ. ಹಲವು ಪವಾಡಗಳನ್ನು ಸೃಷ್ಠಿಸುತ್ತಾರೆ. ಮಾಡಿದಷ್ಟು ನೀಡು ಭೀಕ್ಷೆ ಎಂದು ಸಾರುವ ಮೂಲಕ ಕಾಯಕ ತತ್ವ ಹೇಳುತ್ತಾರೆ.
ಹೀಗೆ ಜನರ ಕಷ್ಟಗಳಿಗೆ ಪರಿಹಾರ ನೀಡಿದ ಸಂತ ತಿಪ್ಪೇರುದ್ರಸ್ವಾಮಿ ದೈವತ್ವಕ್ಕೆ ಏರಿದ್ದಾರೆ. ಅಂತೆಯೇ ನೂರಾರು ವರ್ಷಗಳಿಂದ ಪ್ರತಿ ವರ್ಷ ಅದ್ಧೂರಿ ಜಾತ್ರೆ, ರಥೋತ್ಸವ ನಡೆಯುತ್ತದೆ.
ಮತ್ತೊಂದು ಕಡೆ ದೇಗುಲದ ಬಳಿಯಲ್ಲಿ ಭಕ್ತರು ಕೊಬ್ಬರಿ ಸುಟ್ಟು ಹರಕೆ ತೀರಿಸುತ್ತಾರೆ. ನಾಯಕನಹಟ್ಟಿಗೆ ಸಂತ ತಿಪ್ಪೇರುದ್ರಸ್ವಾಮಿಗಳು ಬರುವ ಸಂದರ್ಭ ರಾತ್ರಿ ಕತ್ತಲು ಆವರಿಸಿರುತ್ತದಂತೆ. ಹೀಗಾಗಿ, ಕೊಬ್ಬರಿ ಸುಟ್ಟು ಕೊಬ್ಬರಿ ಬೆಳಕಿನಲ್ಲಿ ಭಕ್ತರು ಕರೆದುಕೊಂಡು ಬರುತ್ತಾರಂತೆ.
ಇನ್ನು ಈ ಜಾತ್ರೆಯಲ್ಲಿ ಲಕ್ಷಾಂತರ ಜನ ಭಕ್ತರು ಭಾಗಿಯಾಗಿ ಕೃತಾರ್ಥರಾಗುತ್ತಾರೆ. ರಥೋತ್ಸವಕ್ಕೂ ಮುನ್ನ ‘ಮುಕ್ತಿ ಬಾವುಟ' ಹರಾಜು ಪ್ರಕ್ರಿಯೆ ನಡೆಯುತ್ತದೆ. ಈ ಸಲ ಮಾಜಿ ಸಚಿವ ಡಿ.ಸುಧಾಕರ್ 55ಲಕ್ಷ ರೂಪಾಯಿಗೆ ಮುಕ್ತಿ ಬಾವುಟ ಪಡೆದರು.
ಇಂದಿಗೂ ಜಾತ್ರೆ ವೇಳೆ ಭಕ್ತರು ಕೊಬ್ಬರಿ ಸುಟ್ಟು ಬೆಳಗುವ ಮೂಲಕ ಹರಕೆ ತೀರಿಸುತ್ತಾರೆ. ಸಂತಾನ ಭಾಗ್ಯ, ಕಂಕಣ ಭಾಗ್ಯ ಸೇರಿ ಇತರೆ ಕಷ್ಟ ಕಾರ್ಪಣ್ಯಗಳಿಗೆ ಸಂತ ಇಂದಿಗೂ ಪರಿಹಾರ ನೀಡುತ್ತಾನೆಂಬುದು ಭಕ್ತರ ನಂಬಿಕೆ.
ಒಟ್ಟಾರೆಯಾಗಿ ಕೋಟೆನಾಡಿನ ನಾಯಕನಹಟ್ಟಿಯಲ್ಲಿ ಸಾಂಪ್ರದಾಯಿಕ ಅದ್ಧೂರಿ ಜಾತ್ರೆ ನಡೆದಿದೆ. ರಾಜ್ಯದ ಮೂಲೆ ಮೂಲೆಯಿಂದ ಮಾತ್ರವಲ್ಲದೆ ಆಂಧ್ರಪ್ರದೇಶದಿಂದಲೂ ಭಕ್ತರು ಆಗಮಿಸಿದ್ದು, ಲಕ್ಷಾಂತರ ಜನರು ರಥೋತ್ಸವದಲ್ಲಿ ಭಾಗಿಯಾಗಿ ಪುಳಕಿತರಾದರು.