
ಚಿತ್ರದುರ್ಗ, ನವೆಂಬರ್ 19: ಈ ವರ್ಷದಿಂದ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕಗಳ ವಿತರಣೆ ಯೋಜನೆಯನ್ನು ಸರ್ಕಾರ ಘೋಷಿಸಿದೆ. ಆದರೆ ಶೈಕ್ಷಣಿಕ ವರ್ಷವೇ ಮುಗಿಯುತ್ತಾ ಬಂದರೂ ಅನೇಕ ವಿದ್ಯಾರ್ಥಿಗಳಿಗೆ ಇನ್ನೂ ಅಗತ್ಯ ಪುಸ್ತಕಗಳೇ ಕೈಸೇರಿಲ್ಲ. ಹೀಗಾಗಿ, ಪರೀಕ್ಷೆಗೆ ತಯಾರಿ ನಡೆಸಿರುವ ವಿದ್ಯಾರ್ಥಿಗಳು ಹಿಡಿಶಾಪ ಹಾಕುವಂತಾಗಿದೆ.
ರಾಜ್ಯ ಸರ್ಕಾರ ಈ ಸಾಲಿನಿಂದ ಪಿಯುಸಿ ವಿದ್ಯಾರ್ಥಿಗಳಿಗೂ ಉಚಿತ ಪಠ್ಯ ಪುಸ್ತಕ ವಿತರಿಸುವ ಯೋಜನೆ ರೂಪಿಸಿದೆ. ಆದರೆ ಚಿತ್ರದುರ್ಗದಲ್ಲಿ ಮಾತ್ರ ಈವರೆಗೆ ಪಿಯುಸಿ ವಿದ್ಯಾರ್ಥಿಗಳಿಗೆ ಅಗತ್ಯ ಪಠ್ಯ ಪುಸ್ತಕಗಳು ಸಿಕ್ಕಿಲ್ಲ. ಪ್ರಥಮ ಪಿಯುಸಿಯ ರಸಾಯನ ಶಾಸ್ತ್ರ, ಗಣಿತ ಶಾಸ್ತ್ರ, ದ್ವಿತೀಯ ಪಿಯುಸಿ ಗಣಿತ ಶಾಸ್ತ್ರ, ಜೀವಶಾಸ್ತ್ರ, ಕನ್ನಡ, ಇಂಗ್ಲಿಷ್ ಹಾಗೂ ಕಾಮರ್ಸ್ನ ವ್ಯವಹಾರ ಅಧ್ಯಯನ ಪುಸ್ತಕಗಳು ಈವರೆಗೆ ವಿದ್ಯಾರ್ಥಿಗಳ ಕೈಸೇರಿಲ್ಲ.
ಇದನ್ನೂ ಓದಿ: ಪದವಿ ಮಾಡದಿದ್ದರೂ ಸಿಗುತ್ತೆ ಸರ್ಕಾರಿ ಕೆಲಸ! PUC ಪಾಸಾದವರಿಗೆ ಇರುವ ಉದ್ಯೋಗಾವಕಾಶಗಳಿವು
ಪರೀಕ್ಷೆಗಳೇ ಸಮೀಪಿಸಿದರು ಸಹ ಸರ್ಕಾರ ಪಠ್ಯ ಪುಸ್ತಕ ವಿತರಿಸದಿರುವುದು ವಿದ್ಯಾರ್ಥಿಗಳ ಹಿಡಿಶಾಪಕ್ಕೆ ಗುರಿ ಆಗಿದೆ. ಒಂದು ಕಡೆ ಸರ್ಕಾರ ಉಚಿತವಾಗಿ ನೀಡುವ ಪುಸ್ತಕಗಳು ಸಿಕ್ಕಿಲ್ಲ. ಮತ್ತೊಂದು ಕಡೆ ಹಣ ಕೊಟ್ಟು ಖರೀದಿಸಲು ಕೂಡ ಖಾಸಗಿ ಬುಕ್ ಸ್ಟಾಲ್ಗಳಲ್ಲಿ ಪಠ್ಯಪುಸ್ತಕಗಳು ಲಭ್ಯವಿಲ್ಲದಂತಾಗಿದೆ. ಹೀಗಾಗಿ, ವಿದ್ಯಾರ್ಥಿಗಳು ಅಡ್ಡ ಕತ್ತರಿಯಲ್ಲಿ ಸಿಲುಕಿದ್ದು, ಸರ್ಕಾರದ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.
ಇನ್ನು ಈ ಬಗ್ಗೆ ಚಿತ್ರದುರ್ಗ ಪಿಯು ಡಿಡಿ ಅಶೋಲ್ ಪ್ರತಿಕ್ರಿಯಿಸಿದ್ದು, ‘ನಾವು ಮೇ ತಿಂಗಳಲ್ಲೇ ಬೇಡಿಕೆಯನ್ವಯ ಬುಕ್ಸ್ಗಳಿಗೆ ಸೂಚಿಸಿದ್ದೇವೆ. ಆದರೆ ಕೆಲ ಬುಕ್ ಪ್ರಿಂಟಿಂಗ್ ವಿಳಂಬ ಆಗಿದೆ. ಈ ಬಗ್ಗೆ ಗಮನಹರಿಸಿ ಶೀಘ್ರಗತಿಯಲ್ಲಿ ಬುಕ್ಸ್ ತರಿಸಿ ಎಲ್ಲರಿಗೂ ವಿತರಣೆ ಮಾಡಲು ಪ್ರಯತ್ನಿಸುತ್ತೇವೆ. ಆದರೆ ಯಾವಾಗ ಬುಕ್ಸ್ ಲಭ್ಯವಾಗಲಿವೆ ಎಂಬುದನ್ನು ಈಗಲೇ ಹೇಳಲಾಗದು’ ಎಂದು ಸಮಜಾಯಿಷಿ ನೀಡಿದ್ದಾರೆ.
ಇದನ್ನೂ ಓದಿ: ಹಿರಿಯ ಡಿಡಿಪಿಐ ಹುದ್ದೆಗಳು ಖಾಲಿ-ಖಾಲಿ: ಶಿಕ್ಷಣ ಇಲಾಖೆಯ ಆಡಳಿತಕ್ಕೆ ಭಾರಿ ಹಿನ್ನಡೆ, ಶಿಕ್ಷಣದ ಮೇಲೂ ಪರಿಣಾಮದ ಆತಂಕ
ಒಟ್ಟಾರೆ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲೇ ಅನೇಕ ಪಿಯುಸಿ ವಿದ್ಯಾರ್ಥಿಗಳಿಗೆ ಇನ್ನೂ ಅಗತ್ಯ ಪುಸ್ತಕಗಳು ಕೈಸೇರಿಲ್ಲ. ಹೀಗಾಗಿ, ಪರೀಕ್ಷೆ ಸಮಯದಲ್ಲಿ ಓದಿಕೊಳ್ಳುವುದು ಹೇಗೆ, ಪರೀಕ್ಷೆಗೆ ಸಿದ್ಧಗೊಳ್ಳುವುದು ಹೇಗೆ ಎಂಬ ಚಿಂತೆಯಲ್ಲಿ ವಿದ್ಯಾರ್ಥಿಗಳು ಮುಳುಗಿದ್ದಾರೆ. ಹೀಗಾಗಿ, ಇನ್ನಾದ್ರೂ ಸರ್ಕಾರ ಮತ್ತು ಶಿಕ್ಷಣ ಇಲಾಖೆ ಈ ಬಗ್ಗೆ ಗಮನಹರಿಸಿ ಶೀಘ್ರ ಗತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.