ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಎತ್ತಿನಗಾಡಿಗಳ ನಡುವೆ ನಡೆದ ಎತ್ತಿನಗಾಡಿಗಳ ಓಟದ ವಿಡಿಯೋ ವೈರಲ್ ಆಗಿದೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಪಟ್ಟಣದ ಬಳಿಯ ರಾಷ್ಟ್ರೀಯ ಹೆದ್ದಾರಿ 150A ನಲ್ಲಿ ಎತ್ತಿನಗಾಡಿಗಳ ಓಟ ನಡೆದಿದೆ. ಈ ವಿಡಿಯೋ ವೈರಲ್ ಆಗಿದ್ದು, ಜನ ಬೆಚ್ಚಿಬಿದ್ದಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮದಲ್ಲಿ ನಡೆದ ಜಾತ್ರೆಯನ್ನು ಮುಗಿಸಿಕೊಂಡು ಚಳ್ಳಕೆರೆಗೆ ಮರಳುವ ವೇಳೆ 2 ಎತ್ತಿನಗಾಡಿಗಳು ಸ್ಪರ್ಧೆಗೆ ಇಳಿದಿವೆ. ಈ ಓಟದ ವಿಡಿಯೋ ವೈರಲ್ ಆಗಿದ್ದು ಎದೆ ಝಲ್ ಎನ್ನುವಂತಿದೆ.
ಸೆಪ್ಟೆಂಬರ್ 14 ರಂದು ಗೌರಸಮುದ್ರ ಜಾತ್ರೆ ಏರ್ಪಡಿಸಲಾಗಿತ್ತು. ಆದ್ರೆ ಮಹಾಮಾರಿ ಕೊರೊನಾ ಮೂರನೇ ಅಲೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಾತ್ರೆಯನ್ನು ರದ್ದು ಮಾಡಿ ಆದೇಶ ಹೊರಡಿಸಿತ್ತು. ಆದ್ರೆ ಆದೇಶವನ್ನು ಮೀರಿ ಜನ ಸೆಪ್ಟೆಂಬರ್ 14 ರಂದು ಗೌರಸಮುದ್ರ ಜಾತ್ರೆಯನ್ನು ಮಾಡಿದ್ದಾರೆ. ಜಾತ್ರೆಗೆ ಎತ್ತಿನಗಾಡಿನಲ್ಲಿ, ಟ್ರಾಕ್ಟರ್, ಲಾರಿಗಳಲ್ಲಿ ಜನ ಸಾಗರವೇ ಹರಿದು ಬಂದಿದೆ. ಜಾತ್ರೆ ಮುಗಿದ ಬಳಿಕ ಗೌರಸಮುದ್ರ ಗ್ರಾಮದಿಂದ ಚಳ್ಳಕೆರೆಗೆ ಮರಳುವ ವೇಳೆ ಯುವಕರಲ್ಲಿ ಮಾತಿನ ಚಕಮಕಿ ನಡೆದು ಎರಡು ಎತ್ತಿನಗಾಡಿಗಳ ನಡುವೆ ಸ್ಪರ್ಧೆ ನಡೆದಿದೆ. ಎತ್ತಿನಗಾಡಿ ಓಡಿಸುತ್ತಿದ್ದವರ್ಯಾರು, ವಿಡಿಯೋ ಮಾಡಿದ್ದು ಯಾರು ಏತಕ್ಕಾಗಿ ಸ್ಪರ್ಧೆ ನಡೆದಿದೆ ಎಂಬ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲ.
ಇದನ್ನೂ ಓದಿ: ರೈಲಿನಲ್ಲಿ ಡೋಲಕ್ ನುಡಿಸುತ್ತಾ ಪ್ರಯಾಣಿಕರನ್ನು ರಂಜಿಸಿದ ಪುಟ್ಟ ಬಾಲಕ; ನೆಟ್ಟಿಗರು ಮೆಚ್ಚಿದ ವಿಡಿಯೋವಿದು