ಕೋಲಾರ: ನೂರಾರು ವರ್ಷಗಳ ಕಾಲ ದೇಶಕ್ಕಷ್ಟೆ ಅಲ್ಲಾ ವಿಶ್ವಕ್ಕೆ ಚಿನ್ನವನ್ನು ಬಗೆದು ಕೊಟ್ಟ ಕೆಜಿಎಫ್ ನೆಲವನ್ನು ಇಂದಿಗೂ ಮಿನಿ ಇಂಗ್ಲೆಂಡ್, ಕರ್ನಾಟಕದ ರೋಂ ನಗರ, ಚರ್ಚ್ ಸಿಟಿ ಎಂದು ಕರೆಯಲಾಗುತ್ತದೆ. ಅದರಲ್ಲೂ ಡಿಸೆಂಬರ್ ತಿಂಗಳು ಬಂದರೆ ಸಾಕು ಕೆಜಿಎಫ್ ನಗರದಲ್ಲಿ ಕ್ರಿಸ್ಮಸ್ ಹಬ್ಬದ ವೈಭವ ಕಳೆ ಕಟ್ಟುತ್ತದೆ.
ಬ್ರಿಟಿಷರ ಆಳ್ವಿಕೆಯಲ್ಲಿ ಚಿನ್ನದ ಗಣಿ ಉಸ್ತುವಾರಿ ನೋಡಿಕೊಳ್ಳಲು ಬಂದ ಬಹುತೇಕ ಬ್ರಿಟಿಷ್ ಅಧಿಕಾರಿಗಳು ಕ್ರಿಶ್ವಿಯನ್ ಧರ್ಮದವರು. ಕೆಜಿಎಫ್ ನಗರದ ಅಭಿವೃದ್ದಿ ಜೊತೆಗೆ ಧರ್ಮದ ಪ್ರಚಾರಕ್ಕೂ ಆ ಅಧಿಕಾರಿಗಳು ಹೆಚ್ಚಿನ ಆದ್ಯತೆ ಕೊಟ್ಟಿದ್ದರು. ಪರಿಣಾಮ ಇಲ್ಲಿ ಕ್ರಿಶ್ಚಿಯನ್ ಧರ್ಮ ನಿರೀಕ್ಷೆಗೂ ಮೀರಿ ಬೆಳೆಯಿತು.
ಕೆಜಿಎಫ್ನಲ್ಲಿ ಇಂಗ್ಲೆಂಡ್ನ ಕ್ರಿಶ್ಚಿಯನ್ ಮಿಷನರಿಗಳು ಕಾರ್ಯಾರಂಭ ಮಾಡಿದವು. ಗಣಿ ಕೆಲಸಕ್ಕೆ ಬಂದಿದ್ದ ತಮಿಳುನಾಡಿನ ಕಡು ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಸಹಾಯ ಮಾಡುವ ಜೊತೆಗೆ ಕಣ್ಣೊರೆಸುವ ಕೆಲಸ ಮಾಡಿದ್ದವು. ಕ್ರಿಶ್ಚಿಯನ್ ಮಿಷನರಿಗಳು ಕಷ್ಟಕ್ಕೆ ಸ್ಪಂದಿಸುವ ಜೊತೆಗೆ ಸದಾ ಬೆವರು ಸುರಿಸಿ ದುಡಿಯುತ್ತಿದ್ದ ಜನರಿಗೆ ಪ್ರಾರ್ಥನೆ, ಪೂಜೆ, ದಾನ, ಧರ್ಮ ಭೋದನೆ ಮಾಡುವ ಮೂಲಕ ಮನಸ್ಸನ್ನು ಗೆದ್ದರು. ಕೆಜಿಎಫ್ನಲ್ಲಿ ಸ್ವಾತಂತ್ರ್ಯ ಪೂರ್ವದಲ್ಲೇ ಕ್ರಿಶ್ಚಿಯನ್ ಧರ್ಮ ವೈಭವದಿಂದ ಮೆರೆಯುತ್ತಿತ್ತು.
ಚರ್ಚ್ಗಳು ಹೇಳುತ್ತಿವೆ ನೂರಾರು ವರ್ಷಗಳ ಇತಿಹಾಸ
ಇಲ್ಲಿನ ಒಂದೊಂದು ಚರ್ಚ್ ಕೂಡಾ ನೂರಾರು ವರ್ಷಗಳ ಇತಿಹಾಸ ಹೇಳುತ್ತವೆ. ಮದರ್ ಆಫ್ ಮೈನ್ಸ್, ಚರ್ಚ್ ಆಫ್ ಇಂಗ್ಲೆಂಡ್, ಪಿಲೋಕಾಸ್ಟಿಯಾ ಚರ್ಚ್, ಸಂತ ಮೇರೀಸ್ ಚರ್ಚ್, ಫಿಲಿಡೆಲ್ಪಿಯಾ ಚರ್ಚ್, ಮಿಷನ್ ಬೇಕರ್ಸ್ ಚರ್ಚ್ ಹೀಗೆ ಹಲವಾರು ಇತಿಹಾಸ ಪ್ರಸಿದ್ಧ ಚರ್ಚ್ಗಳಾದರೆ ಇತ್ತೀಚಿನ ದಿನಗಳಲ್ಲಿ ನಿರ್ಮಾಣವಾಗಿರುವ ಪ್ರೇಯರ್ ಆಫ್ ಹೌಸ್, ಸೆಂಟ್ ಥಾಮಸ್ ಚರ್ಚ್, ಸೆಂಟ್ ಮೇರಿಸ್ ಚರ್ಚ್ನಂತಹ ನೂರಾರು ಚರ್ಚ್ಗಳು ತಲೆ ಎತ್ತಿವೆ.
ಇಂಗ್ಲೆಂಡ್ ಸಂಸ್ಕೃತಿಯೂ ಜೀವಂತ
ಕೆಜಿಎಫ್ನಲ್ಲಿ ಯೂರೋಪ್ ಸಂಸ್ಕೃತಿ ಆಚರಣೆಗಳು ಇಂದಿಗೂ ಜೀವಂತವಾಗಿವೆ. ರೋಂನಲ್ಲಿ ಆಚರಣೆ ಮಾಡುವ ಸ್ಮಶಾನ ಹಬ್ಬ ಇಲ್ಲೂ ಆಚರಣೆಯಲ್ಲಿದೆ. ಜೊತೆಗೆ ಕೆಜಿಎಫ್ ನಗರದ ಪ್ರತಿಯೊಂದು ರಸ್ತೆ, ಬೀದಿಗಳಿಗೂ ಇಂಗ್ಲೆಂಡ್ ಮಾದರಿಯಲ್ಲೇ ಹೆಸರುಗಳನ್ನು ಇಡುವ ಮೂಲಕ ಬ್ರಿಟಿಷರು ಸದಾಕಾಲ ನೆನಪಿನಲ್ಲಿರುವಂತೆ ಮಾಡಲಾಗಿದೆ.
ಸರ್ವಧರ್ಮ ಸಮನ್ವಯ ನೀತಿ
ಕೆಜಿಎಫ್ನಲ್ಲಿ ಇಂದಿಗೂ ಹೊಸ ಚರ್ಚ್ಗಳು ನಿರ್ಮಾಣವಾಗುತ್ತಿವೆ. ಕೋಮು ಗಲಭೆಯ ಆತಂಕ ಇಲ್ಲಿಲ್ಲ. ವಿವಿಧ ಧರ್ಮೀಯರು, ಭಾಷಿಕರು ವೈವಿಧ್ಯಪೂರ್ಣ ಜೀವನ ನಡೆಸುತ್ತಿದ್ದಾರೆ. ಬಡವರಾದರೂ ಶ್ರೀಮಂತ ಜೀವನ ಕ್ರಮ, ಇಂಗ್ಲಿಷ್ ಭಾಷೆ ಬಳಸುತ್ತಿದ್ದಾರೆ.
Christmas Special | ಕ್ರಿಸ್ಮಸ್ ಹಬ್ಬಕ್ಕೆ ತಯಾರಿಸಲೇಬೇಕಾದ ಸಿಹಿ ಕಲ್ಕಲ್ಸ್ ಮಾಡುವ ವಿಧಾನ ಇಲ್ಲಿದೆ