ರಾಮನಗರ: ಮಹಾಮಾರಿ ಕೊರೊನಾ ಭೀತಿಯಿಂದಾಗಿ ನೆಲಕಚ್ಚಿದ ರೇಷ್ಮೆಗೂಡಿನ ದರ ಇದೀಗ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡಿದ್ದು, 100 ರೂಪಾಯಿಗೆ ಮುಟ್ಟಿದ್ದ ರೇಷ್ಮೆಗೂಡಿನ ದರ, ಇದೀಗ 400 ರೂಪಾಯಿ ಆಸುಪಾಸಿನಲ್ಲಿದೆ. ಆದರೆ ಕೆಲ ತಾಂತ್ರಿಕ ಸಮಸ್ಯೆಯಿಂದಾಗಿ ರೈತರು ಮಾರಾಟ ಮಾಡಿದ ಗೂಡಿಗೆ ಹಣವೇ ಸಂದಾಯವಾಗುತ್ತಿಲ್ಲ. ಈ ಹಿಂದೆ ಚೆಕ್‌ಗಳ ಮೂಲಕ ವ್ಯವಹಾರ ಮಾಡಲು ಕಷ್ಟಪಡುತ್ತಿದ್ದ ರೈತರು, ಈಗ ಆನ್‌ಲೈನ್ ವಹಿವಾಟಿನ ಅನುಕೂಲವಿದ್ದರೂ ಹಣಕ್ಕಾಗಿ ಅಲೆದಾಡುತ್ತಿದ್ದಾರೆ. ರೈತರನ್ನು ಇದು ಸಂಕಷ್ಟಕ್ಕೆ ಸಿಲುಕಿಸಿದೆ.
ಏಷ್ಯಾದಲ್ಲೇ ಅತೀ ದೊಡ್ಡ ರೇಷ್ಮೆ ಮಾರುಕಟ್ಟೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರಾಮನಗರದ ಸರ್ಕಾರಿ ರೇಷ್ಮೆಗೂಡಿನ ಮಾರುಕಟ್ಟೆಯಲ್ಲಿ ಪ್ರತಿ ನಿತ್ಯ 2 ಕೋಟಿ ರೂಪಾಯಿಯಷ್ಟು ವಹಿವಾಟು ನಡೆಯುತ್ತಿದೆ. ದಿನ ಪ್ರತಿ 40 ಟನ್‌ಗಳಷ್ಟು ರೇಷ್ಮೆಗೂಡು ಮಾರಾಟವಾಗುತ್ತಿದ್ದು, ರಾಮನಗರ ಜಿಲ್ಲೆ ಅಲ್ಲದೇ, ಮಂಡ್ಯ, ಮೈಸೂರು, ತುಮಕೂರು ಸೇರಿದಂತೆ ಹೊರ ಜಿಲ್ಲೆಗಳಿಂದಲೂ ರೈತರು ಗೂಡು ತಂದು ಮಾರಾಟ ಮಾಡುತ್ತಾರೆ. ಈ ರೀತಿ ಸರ್ಕಾರಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ರೈತರಿಗೆ ಆನ್‌ಲೈನ್ ಮೂಲಕ ಮಾರಾಟಗಾರರ ಖಾತೆಗೆ ನೇರವಾಗಿ ಹಣ ಜಮೆ ಮಾಡಲಾಗುತ್ತದೆ.
ಆದರೆ ಇತ್ತೀಚಿಗೆ ಬ್ಯಾಂಕ್ಗಳ ವಿಲೀನದಿಂದಾಗಿ ಐಎಫ್ಎಸ್ಸಿ ಕೋಡ್ ಬದಲಾವಣೆಯಾಗಿದ್ದು, ಝೀರೋ ಬ್ಯಾಲೆನ್ಸ್ ಖಾತೆ ಮಾಡಿಸಿರುವವರಿಗೆ 25 ಸಾವಿರ ರೂಪಾಯಿಗಳಿಗಿಂತ ಅಧಿಕ ಹಣ ಪಾವತಿಯಾಗುತ್ತಿಲ್ಲ. ಹೆಚ್ಚುವರಿ ಹಾಕಿರುವ ಹಣವೆಲ್ಲವು ಬೌನ್ಸ್ ಆಗಿ ರೇಷ್ಮೆ ಮಾರುಕಟ್ಟೆಗೆ ವಾಪಸ್ಸಾಗುತ್ತಿದೆ.
ರಾಮನಗರ ಜಿಲ್ಲೆಯ ಲಕ್ಷಮ್ಮ ಎಂಬ ಮಹಿಳೆಗೆ 1.25 ಲಕ್ಷ ಸಂದಾಯ ಮಾಡಬೇಕಿತ್ತು. ಆದರೆ ಆ ರೈತ ಮಹಿಳೆಯ ಬ್ಯಾಂಕ್ ಖಾತೆ ಝೀರೋ ಬ್ಯಾಲೆನ್ಸ್ ಆಗಿರುವುದರಿಂದ ಹಣವೆಲ್ಲವು ಬೌನ್ಸ್ ಆಗಿದೆ. ಎರಡು ತಿಂಗಳ ಹಿಂದೆ ಗೂಡು ಮಾರಾಟ ಮಾಡಿದ್ದ ರೈತರೊಬ್ಬರ ಖಾತೆ ನಂಬರ್ನ ಒಂದು ಸಂಖ್ಯೆ ಬದಲಾವಣೆ ಆಗಿದ್ದರಿಂದ ಈವರೆಗೂ ಮಾರಾಟ ಮಾಡಿದ್ದ ಹಣವು ಅವರ ಕೈ ಸೇರಿಲ್ಲ.
ಕೆಲ ಬ್ಯಾಂಕುಗಳು ವಿಲೀನಗೊಂಡಿರುವ ಹಿನ್ನೆಲೆಯಲ್ಲಿ ಕೆಲ ಖಾತೆಗಳ ಐಎಫ್ಎಸ್ಸಿ ನಂಬರ್‌ಗಳು ಬದಲಾಗಿವೆ. ಹೀಗಾಗಿ ವಿಜಯ ಬ್ಯಾಂಕ್, ಸಿಡಿಕೇಂಟ್ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡುವುದೇ ಮಾರುಕಟ್ಟೆ ಅಧಿಕಾರಿಗಳಿಗೆ ತಲೆ ನೋವಾಗಿ ಪರಿಣಮಿಸಿದೆ. ಇನ್ನೊಂದು ಕಡೆ 3 ತಿಂಗಳ ಕಾಲ ಬಳಕೆ ಮಾಡದ ಬ್ಯಾಂಕ್ ಖಾತೆಗಳು ರದ್ದುಗೊಳ್ಳುತ್ತಿವೆ. ಹೀಗಾಗಿ ಮಾರುಕಟ್ಟೆಗೆ ಬರುವ ಕೆಲ ರೈತರಿಗೆ ಇದರ ಬಗ್ಗೆ ಮಾಹಿತಿ ಇಲ್ಲದೇ ರದ್ದುಗೊಂಡಿರುವ ಖಾತೆಗಳಿಗೆ ಹಣ ಜಮೆಯಾಗುತ್ತಿಲ್ಲ. ಆದರೆ ರೈತರು ಮಾತ್ರ ನಾವು ರೇಷ್ಮೆಗೂಡು ಮಾರಾಟ ಮಾಡಿ ಬಂದರು ನಮ್ಮ ಖಾತೆಗೆ ಹಣ ಬಂದಿಲ್ಲ ಎಂಬ ದೂರುಗಳನ್ನು ಪ್ರತಿನಿತ್ಯ ಅಧಿಕಾರಿಗಳ ಮುಂದೆ ಇಡುತ್ತಿದ್ದಾರೆ.
ಈ ಬಗ್ಗೆ ಟಿವಿ9 ಜೊತೆ ಮಾತನಾಡಿ ರೈತ ಸಂಘದ ಮುಖಂಡ ತುಂಬೇನಹಳ್ಳಿ ಶಿವಕುಮಾರ್, ನಾನು 2 ತಿಂಗಳ ಹಿಂದೆ ರೇಷ್ಮೆ ಗೂಡು ಮಾರಾಟ ಮಾಡಿದ್ದೆ. ಆದರೆ ಈವರೆಗೂ ನನ್ನ ಖಾತೆಗೆ ಹಣ ಸಂದಾಯವಾಗಿಲ್ಲ. ಮಾರುಕಟ್ಟೆ ಅಧಿಕಾರಿಗಳು ತಾಂತ್ರಿಕ ಸಮಸ್ಯೆ ಎನ್ನುತ್ತಾರೆ. ನಾವೇನು ಮಾಡಬೇಕು ಎಂಬುದನ್ನೆ ಹೇಳುತ್ತಿಲ್ಲ ಎಂದರು.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಮನಗರದ ಸರ್ಕಾರಿ ರೇಷ್ಮೆಗೂಡಿನ ಉಪನಿರ್ದೇಶಕ ಮುನ್ಷಿ ಬಸಯ್ಯ, ಕೆಲ ಸಮಸ್ಯೆಗಳ ಹೊರತಾಗಿ ಆನ್‌ಲೈನ್ ವಹಿವಾಟು ಚೆನ್ನಾಗಿ ನಡೆಯುತ್ತಿದೆ. ಕೆಲವರ ಖಾತೆಗಳು ಇನ್ ಆ್ಯಕ್ಟಿವ್ ಆಗಿವೆ, ಝಿರೋ ಬ್ಯಾಲೆನ್ಸ್ ಖಾತೆಗಳಿಗೆ 25,000 ರೂಪಾಯಿಗಳಿಗಿಂತ ಹೆಚ್ಚಿನ ಹಣ ಸಂದಾಯ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲ ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.