ಮುಚ್ಚು ಹರಾಜು ಮಾರುಕಟ್ಟೆ: ನಿರ್ಮಾಣವಾಗಿ ಒಂದು ವರ್ಷವಾದರೂ ಸಿಗದ ಉದ್ಘಾಟನಾ ಭಾಗ್ಯ

| Updated By: ಸಾಧು ಶ್ರೀನಾಥ್​

Updated on: Feb 03, 2021 | 10:33 AM

ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಸುಸಜ್ಜಿತ ಕಟ್ಟಡ ಉದ್ಘಾಟನೆಯಾಗದ ಹಿನ್ನೆಲೆಯಲ್ಲಿ ಒಂದೆಡೆ ರೈತರು ಮೂಲ ಸೌಕರ್ಯದ ಸಮಸ್ಯೆ ಎದುರಿಸುತ್ತಿದ್ದರೆ, ಮತ್ತೊಂದು ಕಡೆ ಕಟ್ಟಡದಲ್ಲಿ ಪುಂಡ ಪೋಕರಿಗಳ ಹಾವಳಿ ಹೆಚ್ಚುತ್ತಿದೆ. ನಿ

ಮುಚ್ಚು ಹರಾಜು ಮಾರುಕಟ್ಟೆ: ನಿರ್ಮಾಣವಾಗಿ ಒಂದು ವರ್ಷವಾದರೂ ಸಿಗದ ಉದ್ಘಾಟನಾ ಭಾಗ್ಯ
ಮುಚ್ಚು ಹರಾಜು ಮಾರುಕಟ್ಟೆ
Follow us on

ಧಾರವಾಡ: ಯಾವುದೇ ಕಾಮಗಾರಿಗಳಿಗಾಗಲಿ.. ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಆರಂಭದಲ್ಲಿ ಇರುವ ಉತ್ಸಾಹ ಕಾಮಗಾರಿ ಮುಗಿದ ಮೇಲೆ ಇರುವುದೇ ಇಲ್ಲ. ಇದಕ್ಕೆ ಧಾರವಾಡವೇನೂ ಹೊರತಾಗಿಲ್ಲ. ಕಾಮಗಾರಿಗೆ ಅನುಮೋದನೆ ದೊರೆತು, ಅದು ಮುಕ್ತಾಯವಾಗುವವರೆಗೂ ಅಧಿಕಾರಿಗಳು, ಜನಪ್ರತಿನಿಧಿಗಳು ನಿರಂತರವಾಗಿ ಅಲ್ಲಿಗೆ ಭೇಟಿ ನೀಡುತ್ತಲೇ‌ ಇರುತ್ತಾರೆ. ಯಾವಾಗ ಕಾಮಗಾರಿ ಮುಗಿಯುತ್ತದೋ, ಅವರು ಕೂಡ ಅಲ್ಲಿಗೆ ಬರುವುದನ್ನು ನಿಲ್ಲಿಸಿ ಬಿಡುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಎಂದರೆ‌ ಧಾರವಾಡದಲ್ಲಿ ನಿರ್ಮಿಸಲಾಗಿರುವ ಮುಚ್ಚು ಹರಾಜು ಕಟ್ಟೆಗಳು.

ನಿರ್ಮಿಸಿ ಒಂದು ವರ್ಷ, ಸಿಗದ ಉದ್ಘಾಟನಾ ಭಾಗ್ಯ:
ಧಾರವಾಡ ನಗರದ ಎಪಿಎಂಸಿ ವ್ಯಾಪ್ತಿಯ ಮಾಳಾಪುರ ಬಡಾವಣೆಯಲ್ಲಿನ ಜಾನುವಾರುಗಳ ಮಾರುಕಟ್ಟೆ ಪ್ರಾಂಗಣದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಮುಚ್ಚು ಹರಾಜು ಕಟ್ಟೆಗಳಿಗೆ ವರ್ಷವಾದರೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ.‌ 3 ದಶಕಗಳ ಇತಿಹಾಸ ಹೊಂದಿರುವ ಈ ಮಾರುಕಟ್ಟೆ ಸುಮಾರು 11 ಎಕರೆ ಜಾಗ ಹೊಂದಿದೆ. ಇಲ್ಲಿ ನಡೆಯುವ ಜಾನುವಾರು ಸಂತೆಯಲ್ಲಿ ಜಾನುವಾರುಗಳಿಗೆ ಬಿಸಿಲು, ಮಳೆಯಿಂದ ರಕ್ಷಣೆ ನೀಡಲು 3 ಮುಚ್ಚು ಹರಾಜು ಕಟ್ಟೆಗಳನ್ನು ನಿರ್ಮಿಸಿದ್ದು, ವರ್ಷ ಕಳೆದರೂ ಉದ್ಘಾಟನೆಯಾಗದೇ ರೈತರು ಬಯಲಿನಲ್ಲೇ ಬಿಸಿಲು, ಮಳೆ ಎನ್ನದೆ ಸಂತೆ ನಡೆಸುವಂತಾಗಿದೆ.

ಮೂರುವರೆ ಕೋಟಿ ರೂಪಾಯಿ ವೆಚ್ಚದ ಕಾಮಗಾರಿ:
ಮಾಜಿ ಸಚಿವ ವಿನಯ ಕುಲಕರ್ಣಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಮುಚ್ಚು ಹರಾಜು ಕಟ್ಟೆಗಳ ನಿರ್ಮಾಣಕ್ಕೆ ಚಾಲನೆ ಸಿಕ್ಕಿತ್ತು. ಈ ಕಾರ್ಯಕ್ಕೆ ನಬಾರ್ಡ್‌ನ ವಿವಿಧ ಯೋಜನೆಗಳ ಅಡಿ 1.50 ಕೋಟಿ ರೂಪಾಯಿ ವೆಚ್ಚದಲ್ಲಿ ಒಂದು ಕಟ್ಟೆ ಮತ್ತು 1 ಕೋಟಿ ರೂಪಾಯಿ ವೆಚ್ಚದಲ್ಲಿ ತಲಾ 2 ಕಟ್ಟೆಗಳನ್ನು ನಿರ್ಮಿಸಲಾಗಿದೆ.

ಕಟ್ಟೆ ಪಕ್ಕದಲ್ಲೇ ರೈತರಿಗೆ ಎಲ್ಲಾ ಸೌಲಭ್ಯ ಕಲ್ಪಿಸಲಾಗಿದೆ. ವಾಹನಗಳಿಂದ ಜಾನುವಾರುಗಳನ್ನು ಇಳಿಸಲು, ಜಾನುವಾರುಗಳಿಗೆ ಮೇವು, ನೀರಿನ ತೊಟ್ಟಿ, ರೈತರಿಗೆ ಶೌಚಗೃಹ- ಹೀಗೆ ಸಕಲ ಸೌಲಭ್ಯ ನೀಡಲಾಗಿದೆ. ಆದರೆ ಇಷ್ಟೆಲ್ಲ ಸೌಲಭ್ಯದ ಯೋಜನೆ ಸಿದ್ಧವಾಗಿದ್ದರೂ ರೈತರಿಗೆ ಅದು ಕನ್ನಡಿಯೊಳಗಿನ ಗಂಟಿನಂತಾಗಿದೆ. 2019ರ ಡಿಸೆಂಬರ್ ಅಂತ್ಯದಲ್ಲಿ ಕಟ್ಟೆಗಳು ಪೂರ್ಣಗೊಂಡಿದ್ದರೂ, ಇದುವರೆಗೂ ಉದ್ಘಾಟನೆಗೆ ಕಾಲ ಮಾತ್ರ ಕೂಡಿ ಬಂದಿಲ್ಲ.

ಉದ್ಘಾಟನೆಯಾಗದ ಮುಚ್ಚು ಹರಾಜು ಮಾರುಕಟ್ಟೆ

ಜಾನುವಾರು ಸಂತೆ ಆರಂಭವಾಗಿದ್ದಕ್ಕೆ ಸಮಸ್ಯೆ:
ಕೊರೊನಾ ಹಾವಳಿ ಬಳಿಕ ಜಾನುವಾರುಗಳಿಗೆ ಚರ್ಮ ಗಂಟು ರೋಗದ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಂತೆಗೆ ನಿಷೇಧ ಹೇರಿತ್ತು. ಇದೀಗ ನಿಷೇಧ ಹಿಂಪಡೆದಿರುವ ಕಾರಣ ಪ್ರತಿ ಮಂಗಳವಾರ ಜಾನುವಾರು ಸಂತೆ ಆರಂಭವಾಗಿದೆ. ಆದರೆ ಇದೀಗ ಜಾನುವಾರು, ರೈತರಿಗೆ ಕುಡಿಯುವ ನೀರು ಸೇರಿ ಅನೇಕ ಸೂಕ್ತ ಸೌಲಭ್ಯ ಇಲ್ಲವಾಗಿದೆ. ಇದರಿಂದ ಜಾನುವಾರುಗಳನ್ನು ಮಾರಾಟಕ್ಕೆ ತಂದ ರೈತರಿಗೆ ಭಾರೀ ಸಮಸ್ಯೆಯುಂಟಾಗುತ್ತಿದೆ.

ಮಿತಿ ಮೀರಿದ ಪುಂಡ ಪೋಕರಿಗಳ ಹಾವಳಿ:
ಹೀಗೆ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಸುಸಜ್ಜಿತ ಕಟ್ಟಡ ಉದ್ಘಾಟನೆಯಾಗದ ಹಿನ್ನೆಲೆಯಲ್ಲಿ ಒಂದೆಡೆ ರೈತರು ಮೂಲ ಸೌಕರ್ಯದ ಸಮಸ್ಯೆ ಎದುರಿಸುತ್ತಿದ್ದರೆ, ಮತ್ತೊಂದು ಕಡೆ ಕಟ್ಟಡದಲ್ಲಿ ಪುಂಡ ಪೋಕರಿಗಳ ಹಾವಳಿ ಹೆಚ್ಚುತ್ತಿದೆ. ನಿತ್ಯವೂ ಕತ್ತಲಾಗುತ್ತಿದ್ದಂತೆ ಇಲ್ಲಿಗೆ ಬರುವ ಪುಂಡ ಪೋಕರಿಗಳು, ಈ ಕಟ್ಟಡವನ್ನು ಮದ್ಯ ಸೇವನೆಯ ಕೇಂದ್ರಗಳನ್ನಾಗಿ ಮಾಡಿಕೊಂಡಿದ್ದಾರೆ. ಹೀಗಾಗಿ ಆದಷ್ಟು ಬೇಗನೆ ಈ ಕಟ್ಟೆಗಳ ಉದ್ಘಾಟನೆ ನಡೆಸಿ, ವ್ಯಾಪಾರ-ವಹಿವಾಟಿಗೆ ಮುಕ್ತಗೊಳಿಸಲಿ ಎನ್ನುವುದು ರೈತರ ಆಗ್ರಹ.

ಈ‌ ಬಗ್ಗೆ ಎಪಿಎಂಸಿ ಅಧ್ಯಕ್ಷ ಬಸವರಾಜ ಹೊಸೂರ ಅವರನ್ನು ಕೇಳಿದರೆ, ವಿಧಾನ ಪರಿಷತ್, ಗ್ರಾಮ ಪಂಚಾಯತಿ ಚುನಾವಣೆಗಳು ಬಂದ ಹಿನ್ನೆಲೆಯಲ್ಲಿ ಉದ್ಘಾಟನೆ ಕಾರ್ಯ ವಿಳಂಬವಾಗಿದೆ. ನೀತಿ ಸಂಹಿತೆ ಹಿನ್ನೆಲೆಯಲ್ಲಿ ಉದ್ಘಾಟನೆ ಮಾಡಲು ಆಗಲಿಲ್ಲ.‌ ಫೆಬ್ರವರಿ ತಿಂಗಳಲ್ಲಿ ಉದ್ಘಾಟನೆ ಮಾಡುವ ಸಾಧ್ಯತೆ ಇದೆ. ಇಷ್ಟರಲ್ಲಿಯೇ ಸಚಿವರು, ಶಾಸಕರ ಸಮಯ ನೋಡಿ ಉದ್ಘಾಟನೆಯ ದಿನವನ್ನು ನಿಗದಿ ಮಾಡಲಾಗುವುದು ಎಂದು ಹೇಳಿದ್ದಾರೆ.

ಏನೇ ಆಗಲಿ ಆದಷ್ಟು‌ ಬೇಗನೇ ಈ ಮಾರುಕಟ್ಟೆ ಉದ್ಘಾಟನೆಗೊಂಡು, ರೈತರಿಗೆ ಅನುಕೂಲವಾದಾಗಷ್ಟೇ ಇವುಗಳು ನಿರ್ಮಾಣಗೊಂಡಿದ್ದಕ್ಕು ಸಾರ್ಥಕವಾಗುತ್ತದೆ.

ಮಧ್ಯವರ್ತಿಗಳ ಆಟಕ್ಕೆ ಬ್ರೇಕ್​.. ಕೊಪ್ಪಳದಲ್ಲಿ ಶುರುವಾಗುತ್ತಿದೆ ನೂತನ ರೈತ ಮಾರುಕಟ್ಟೆ!