ಟಿವಿ9 ರಹಸ್ಯ ಕಾರ್ಯಾಚರಣೆ: ಪರಪ್ಪನ ಜೈಲಿನಲ್ಲಿ ಲಕ್ಷ ಲಕ್ಷ ಕೊಟ್ಟರೆ ಸಿಗುವ ಸೌಲಭ್ಯಗಳೇನು ಗೊತ್ತಾ? ಕೈದಿಗಳ ದಂಧೆಗೆ ಜೈಲಾಧಿಕಾರಿಗಳೇ ಸಾಥ್​..!

| Updated By: ಸಾಧು ಶ್ರೀನಾಥ್​

Updated on: Feb 03, 2021 | 11:29 AM

5.5 ಲಕ್ಷ ರೂಪಾಯಿ ನೀಡಿ ಪಡೆಯುವ ಸೆಲ್‌ನಲ್ಲಿ ಸ್ಟವ್, ಮಿಕ್ಸರ್, ಪಾತ್ರೆ, ಟಿವಿ, ಫ್ಯಾನ್, ಕುರ್ಚಿ, ಮಂಚ, ಹಾಸಿಗೆ ನೀಡಲಾಗುತ್ತೆ. 3.5 ಲಕ್ಷಕ್ಕೆ ಸಣ್ಣ ರೂಮ್, ₹5.5 ಲಕ್ಷಕ್ಕೆ ದೊಡ್ಡ ರೂಮ್ ನೀಡಲಾಗುತ್ತೆ.

ಟಿವಿ9 ರಹಸ್ಯ ಕಾರ್ಯಾಚರಣೆ: ಪರಪ್ಪನ ಜೈಲಿನಲ್ಲಿ ಲಕ್ಷ ಲಕ್ಷ ಕೊಟ್ಟರೆ ಸಿಗುವ ಸೌಲಭ್ಯಗಳೇನು ಗೊತ್ತಾ? ಕೈದಿಗಳ ದಂಧೆಗೆ ಜೈಲಾಧಿಕಾರಿಗಳೇ ಸಾಥ್​..!
ಜೈಲಿನ ಒಳಗೆ ಕೈದಿಗಳಿಂದ ಹಣ ಪಡೆಯುತ್ತಿರುವ ಪೊಲೀಸರು
Follow us on

ಬೆಂಗಳೂರು: ಸಮಾಜದಲ್ಲಿ ಅಪರಾದ ಚಟುವಟಿಕೆಗಳಲ್ಲಿ ಭಾಗಿಯಾದವರಿಗೆ ಶಿಕ್ಷೆ ನೀಡಿ, ಅವರಲ್ಲಿ ತಪ್ಪಿನ ಅರಿವು ಮೂಡಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿ ಬದುಕಲು ಅನುವು ಮಾಡಿಕೊಡುವುದಕ್ಕಾಗಿಯೇ ನ್ಯಾಯಾಂಗವು ಜೈಲುಗಳನ್ನು ನಿರ್ಮಿಸಿರುವುದು. ಆದರೆ ತಮ್ಮ ತಪ್ಪಿಗೆ ಶಿಕ್ಷೆ ಅನುಭವಿಸಲೆಂದು ಜೈಲು ಸೇರುವ ಅಪರಾಧಿಗಳಿಗೆ ಜೈಲಿನ ಸಿಬ್ಬಂದಿಯೇ, ಅಪರಾಧಿಗಳಿಗೆ ಬೇಕಾದ ವೈಭವದ ಜೀವನವನ್ನು ನಡೆಸಲು ಹಣ ಪಡೆದು ಸಹಾಯ ಮಾಡುವ ಕರಾಳ ದಂಧೆಯನ್ನು ಟಿವಿ9 ಬಯಲಿಗೆಳೆದಿದೆ.

ಹಳೆ ಕೈದಿಗಳಿಂದ ಹೊಸ ಕೈದಿಗಳಿಗೆ ಟಾರ್ಚರ್​..
ಮಾಧ್ಯಮ ಲೋಕದಲ್ಲೇ ಇಂತಹ ಕರಾಳ ದಂಧೆಯನ್ನು ಬಯಲಿಗೆಳೆದು ಹೊಸ ಇತಿಹಾಸ ಸೃಷ್ಟಿಸಿರುವ ಟಿವಿ9, ಎರಡು ತಿಂಗಳ ರಣರೋಚಕ ರಹಸ್ಯ ಕಾರ್ಯಾಚರಣೆ ನಡೆಸಿ ಜೈಲಿನ ಅಕ್ರಮ ದಂಧೆಯನ್ನು ಬಹಿರಂಗಗೊಳಿಸಿದೆ. ಪರಪ್ಪನ ಅಗ್ರಹಾರ ಜೈಲಿನ ಅಕ್ರಮ ದಂಧೆ ಬಟಾಬಯಲಾಗಿದ್ದು, ವಿಶೇಷ ಸೌಲಭ್ಯ ನೀಡುವುದಕ್ಕೆ ಕೈದಿಗಳ ಮೂಲಕ ಜೈಲು ಅಧಿಕಾರಿಗಳಿಂದಲೇ ಹಣ ವಸೂಲಿ ಮಾಡಲಾಗುತ್ತಿದೆ.

ಟಿವಿ9 ರಹಸ್ಯ ಕಾರ್ಯಾಚರಣೆಯಲ್ಲಿ ಜೈಲಿನ ಅಕ್ರಮ ಬಯಲಾಗಿದ್ದು, ಜೈಲಿನಲ್ಲಿರುವ ವಿಶೇಷ ಸೌಲಭ್ಯ ಪಡೆಯದಿದ್ದರೆ ಹಳೆಯ ಕೈದಿಗಳಿಂದ.. ಆಗತಾನೆ ಬಂದ ಕೈದಿಗಳಿಗೆ ಟಾರ್ಚರ್ ನೀಡಲಾಗುತ್ತಿದೆ. ಹಣ ಪಡೆದು ಸೌಲಭ್ಯ ಪಡೆಯದಿದ್ದರೆ ಹಳೆಯ ಕೈದಿಗಳು, ಹೊಸ ಕೈದಿಗಳಿಗೆ ಹೊಡೆದು ಸೌಲಭ್ಯ ಪಡೆಯುವಂತೆ ಟಾರ್ಚರ್ ನೀಡುತ್ತಿದ್ದಾರೆ. ಹೀಗಾಗಿ ಹಳೆ ಕೈದಿಗಳ ಟಾರ್ಚರ್ ಸಹಿಸಲಾಗದೆ ಕೈದಿಗಳು ಸೌಲಭ್ಯ ಪಡೆಯುತ್ತಿದ್ದಾರೆ.


ಜೈಲು ಅಧಿಕಾರಿಗಳೇ ದಂಧೆಗಿಳಿದಿದ್ದಾರೆ..
ಇಲ್ಲಿ ಬೇಲಿಯೇ ಎದ್ದು ಹೊಲ ಮೇಯುವಂತಾಗಿದ್ದು, ಕೈದಿಗಳ ಮನಃಪರಿವರ್ತನೆ ಮಾಡಬೇಕಾದ ಜೈಲು ಅಧಿಕಾರಿಗಳೇ ದಂಧೆಗಿಳಿದಿದ್ದಾರೆ. ವಿಶೇಷ ಸೌಲಭ್ಯ ನೀಡಲು ಜೈಲಧಿಕಾರಿಗಳಿಂದಲೇ ವಸೂಲಿ ಕಾರ್ಯ ನಡೆಯುತ್ತಿದ್ದು, ಕೈದಿಗಳಿಂದ ತಿಂಗಳಿಗೆ ಬರೋಬ್ಬರಿ 3 ಲಕ್ಷ ರೂ. ವಸೂಲಿ ಮಾಡುತ್ತಿದ್ದಾರೆ. ಒಬ್ಬೊಬ್ಬ ಕೈದಿಗೆ ಒಂದೊಂದು ರೇಟ್ ಫಿಕ್ಸ್ ಮಾಡಿ ವಸೂಲಿ ಮಾಡಲಾಗುತ್ತಿದೆ. ಕೈದಿಗಳು ಪಡೆಯುವ ಸೌಲಭ್ಯಕ್ಕೆ ತಕ್ಕಂತೆ ರೇಟ್ ಫಿಕ್ಸ್ ಮಾಡಲಾಗಿದ್ದು, ದೊಡ್ಡ ಸೆಲ್, ಸ್ಟೌ, ಮಿಕ್ಸರ್, ಪಾತ್ರೆ , ಟಿವಿ, ಮಂಚ, ಟೇಬಲ್, ಟಿವಿ, ಫ್ಯಾನ್, ಹಾಸಿಗೆ ದಿಂಬು, ಬಾತ್ ರೂಂ, ಶೌಚಾಲಯ ವ್ಯವಸ್ಥೆ ಮಾಡುವುದಕ್ಕೆ ಹಣ ವಸೂಲಿ ಮಾಡಲಾಗುತ್ತಿದೆ.

ಕೇಬಲ್‌ಗೆ ಹೆಚ್ಚುವರಿಯಾಗಿ ತಿಂಗಳಿಗೆ 500 ರೂಪಾಯಿ ಪಡೆಯಲಾಗುತ್ತಿದೆ. ಹಣ ನೀಡಿದ ಕೈದಿಗಳಿಗೆ ಜೈಲಿನ ಅಧಿಕಾರಿಗಳು ಮೊಬೈಲ್, ಗಾಂಜಾ, ಸಿಗರೇಟ್ ಸೌಲಭ್ಯವನ್ನು ಮಾಡಿಕೊಡುತ್ತಾರೆ. ಜೊತೆಗೆ ಕರೆಂಟ್, ನೀರಿಗಾಗಿ ಹೆಚ್ಚುವರಿ 300 ರೂಪಾಯಿ ಬಿಲ್‌ ಮಾಡಲಾಗುತ್ತಿದೆ.

ಎರಡು ರೀತಿಯ ರೇಟ್​ ಫಿಕ್ಸ್​ ಮಾಡಲಾಗಿದೆ..
ಕೈದಿಗಳು ನೀಡುವ ಹಣದ ಪ್ರಮಾಣದ ಮೇಲೆ ಅವರಿಗೆ ನೀಡುವ ಸೌಲಭ್ಯಗಳು ಬದಲಾಗುತ್ತಾ ಹೋಗುತ್ತವೆ. ಸೆಂಟ್ರಲ್ ಜೈಲ್‌ನಲ್ಲಿ ಹಣ ಕೊಟ್ಟ ಕೈದಿಗಳಿಗೆ ಐಷಾರಾಮಿ ಸೆಲ್ ನೀಡಲಾಗುತ್ತಿದೆ. ಮೂರೂವರೆ ಲಕ್ಷ ಹಾಗೂ ಐದೂವರೆ ಲಕ್ಷಕ್ಕೂ ಸೆಂಟ್ರಲ್ ಜೈಲ್ ಸೆಲ್ ಮಾರಾಟ ಮಾಡಲಾಗುತ್ತೆ. ತಿಂಗಳಿಗೆ 3.5 ಲಕ್ಷ ರೂಪಾಯಿ ಸೆಲ್‌ನಲ್ಲಿ ಸ್ಟವ್, ಟಿವಿ, ಕುರ್ಚಿ, ಮಂಚ ಫ್ಯಾನ್, ಟೇಬಲ್ ವ್ಯವಸ್ಥೆ ಮಾಡಲಾಗುತ್ತೆ.

5.5 ಲಕ್ಷ ರೂಪಾಯಿ ನೀಡಿ ಪಡೆಯುವ ಸೆಲ್‌ನಲ್ಲಿ ಸ್ಟವ್, ಮಿಕ್ಸರ್, ಪಾತ್ರೆ, ಟಿವಿ, ಫ್ಯಾನ್, ಕುರ್ಚಿ, ಮಂಚ, ಹಾಸಿಗೆ ನೀಡಲಾಗುತ್ತೆ. 3.5 ಲಕ್ಷಕ್ಕೆ ಸಣ್ಣ ರೂಮ್, ₹5.5 ಲಕ್ಷಕ್ಕೆ ದೊಡ್ಡ ರೂಮ್ ನೀಡಲಾಗುತ್ತೆ. ಕೈದಿಗಳಿಗೆ ಜೈಲು ರೂಮ್ ಕೊಟ್ಟು, ಜೈಲು ಅಧಿಕಾರಿಗಳು ಹಣ ಜೇಬಿಗಿಳಿಸ್ತಾರೆ.

ಸೆಂಟ್ರಲ್ ಜೈಲಿನಲ್ಲಿ ಫೈನಾನ್ಸ್ ದಂಧೆ..
ಸೆಂಟ್ರಲ್ ಜೈಲಿನಲ್ಲಿ ಜೈಲಿನ ಅಧಿಕಾರಿಗಳದ್ದು ಒಂದು ದಂಧೆಯಾದರೆ, ಅಲ್ಲಿನ ಕೈದಿಗಳದ್ದು ಇನ್ನೊಂದು ದಂಧೆಯಾಗಿದೆ. ಜೈಲಿನಲ್ಲಿರುವ ಹಳೆಯ ಕೈದಿಗಳು ಫೈನಾನ್ಸ್ ದಂಧೆ ಮಾಡ್ತಿದ್ದಾರೆ. ವಿಚಾರಣಾಧೀನ ಕೈದಿಗಳಿಗೆ ಸಜಾ ಕೈದಿಗಳಿಂದ ಬಡ್ಡಿಗೆ ಹಣ ನೀಡಲಾಗುತ್ತಿದೆ. ಜೈಲಿನೊಳಗೇ ಫೈನಾನ್ಸ್ ಹಣ ಕೊಟ್ಟು ಬಡ್ಡಿ ವಸೂಲಿ ದಂಧೆ ಮಾಡಲಾಗುತ್ತಿದೆ. 20 ಪರ್ಸೆಂಟ್, 30 ಪರ್ಸೆಂಟ್‌ಗೆ ಹಣವನ್ನು ಬಡ್ಡಿಗೆ ಬಿಡ್ತಿದ್ದಾರೆ.

ಅಕ್ರಮ ಆಸ್ತಿ ಗಳಿಗೆ ಕೇಸ್​ನಲ್ಲಿ 4 ವರ್ಷ ಶಿಕ್ಷೆ ಅನುಭವಿಸಿದ ಶಶಿಕಲಾಗೆ ಜೈಲುವಾಸ ಅಂತ್ಯ, ಕೊರೊನಾ ಚಿಕಿತ್ಸೆ ಬಳಿಕ ರಿಲೀಸ್ ಆಗಲಿದ್ದಾರಾ ಚಿನ್ನಮ್ಮ?