ರಾಜ್ಯದ ಕ್ರೀಡಾಪಟುಗಳಿಗೆ ಅಂತರಾಷ್ಟ್ರೀಯ ಮಟ್ಟದ ಕೋಚ್, ಬಜೆಟ್​ನಲ್ಲಿ ಕ್ರೀಡೆಗೆ ಹೆಚ್ಚಿನ ಅನುದಾನ: ಸಿಎಂ ಬಸವರಾಜ ಬೊಮ್ಮಾಯಿ

| Updated By: guruganesh bhat

Updated on: Aug 29, 2021 | 7:26 PM

ಕ್ರೀಡಾ ಕ್ಷೇತ್ರದಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ಜತೆಗೆ ಅಂತರಾಷ್ಟ್ರೀಯ ಮಟ್ಟದ ತರಬೇತುದಾರರನ್ನು ಒದಗಿಸುವ ಬಗ್ಗೆಯೂ ಚಿಂತನೆ ಮಾಡಿದ್ದೇವೆ. ಒಲಂಪಿಕ್ಸ್​ನಲ್ಲಿ ರಾಜ್ಯದಿಂದ ಅತ್ಯುತ್ತಮ ಕ್ರೀಡಾಪಟುಗಳನ್ನು ರೂಪಿಸಿ ಕಳುಹಿಸಲಾಗುವುದು ಎಂದು ಸಹ ಮುಖ್ಯಮಂತ್ರಿಗಳು ಭರವಸೆ ನೀಡಿದರು.

ರಾಜ್ಯದ ಕ್ರೀಡಾಪಟುಗಳಿಗೆ ಅಂತರಾಷ್ಟ್ರೀಯ ಮಟ್ಟದ ಕೋಚ್, ಬಜೆಟ್​ನಲ್ಲಿ ಕ್ರೀಡೆಗೆ ಹೆಚ್ಚಿನ ಅನುದಾನ: ಸಿಎಂ ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ಒಲಂಪಿಯನ್ಸ್ ಫಾರ್ ಕನ್ನಡಿಗ ಎಂದು ಬಂದರೆ ವೈ ನಾಟ್..? ಕನ್ನಡಿಗರು ಒಲಂಪಿಕ್ಸ್​ನಲ್ಲಿ ಸಾಧನೆ ಮಾಡಲು ಏಕೆ ಸಾಧ್ಯವಾಗದು? ನಾವೂ ಸಹ ಒಲಂಪಿಕ್ ಸ್ಪರ್ಧೆಗಳಲ್ಲಿ ಸಾಧನೆ ಮಾಡಬಹುದು ಎಂಬುದೇ ನನ್ನ ನಿಲುವು ಮತ್ತು ಘೋಷಣೆಯಾಗಿರುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಈಬಾರಿ ಮಂಡಿಸಲಿರುವ ಬಜೆಟ್​ನಲ್ಲಿ ಕ್ರೀಡಾಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ಮುಂಬರುವ ಮಾರ್ಚ್ ಹೊತ್ತಿಗೆ ಬಜೆಟ್ ರಚನೆಗೆ ಹೆಚ್ಚಿ‌ನ ಶಕ್ತಿ ಮತ್ತು ಉತ್ತಮ ವಾತಾವರಣ ನನಗೆ ದೊರಕಬಹುದು. ಕ್ರೀಡಾ ಕ್ಷೇತ್ರದಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ಜತೆಗೆ ಅಂತರಾಷ್ಟ್ರೀಯ ಮಟ್ಟದ ತರಬೇತುದಾರರನ್ನು ಒದಗಿಸುವ ಬಗ್ಗೆಯೂ ಚಿಂತನೆ ಮಾಡಿದ್ದೇವೆ. ಒಲಂಪಿಕ್ಸ್​ನಲ್ಲಿ ರಾಜ್ಯದಿಂದ ಅತ್ಯುತ್ತಮ ಕ್ರೀಡಾಪಟುಗಳನ್ನು ರೂಪಿಸಿ ಕಳುಹಿಸಲಾಗುವುದು ಎಂದು ಸಹ ಮುಖ್ಯಮಂತ್ರಿಗಳು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ರೀಡೆಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳಿಗೆ ರಾಜ್ಯಪಾಲರು, ಹಾಗೂ ಸಿಎಂ ಸನ್ಮಾನಿಸಿದರು.

ಜಕ್ಕೂರ್ ಏರೋ ಡ್ರಮ್ ಇಷ್ಟು ವರ್ಷ ಖಾಲಿಯಿತ್ತು. ಈಗ ಜಕ್ಕೂರ್ ಏರೋ ಡ್ರಮ್​ನಲ್ಲಿ ತರಬೇತಿ ಶಾಲೆ ಅರಂಭಿಸಿ 100 ಪೈಲಟ್​ಗಳಿಗೆ ತರಬೇತಿ ನೀಡಲಿದ್ದೇವೆ. ಜತೆಗೆ ಅಮೃತ್ ಕ್ರೀಡಾ ಯೋಜನೆ ಅಡಿಯಲ್ಲಿ 75 ಕ್ರೀಡಾಪಟುಗಳಿಗೆ ತರಬೇತಿ ನೀಡಲು ನಿರ್ಧರಿಸಲಾಗಿದೆ. ರಾಜ್ಯದಲ್ಲಿ ಕ್ರೀಡಾ ಹಬ್ಬವನ್ನು ಆಯೋಜಿಸಲು ಸಿದ್ಧತೆ ನಡೆಸಿದ್ದೇವೆ. ಜತೆಗೆ ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಶೇಕಡಾ 2ರಷ್ಟು ಅವಕಾಶ ನೀಡಬೇಕೆಂದು ಸಿಎಂಗೆ ಮನವಿ ಮಾಡುತ್ತೇನೆ. ಶಾಲೆಗಳಲ್ಲೂ ಪ್ರತಿನಿತ್ಯ 2 ಗಂಟೆಗೂ ಹೆಚ್ಚು ಕಾಲ ಕ್ರೀಡಾ ಚಟುವಟಿಕೆ, ಆಟೋಟಗಳಿಗೆ ಅವಕಾಶ ನೀಡಬೇಕು ಎಂದು ಮನವಿ ಮಾಡುವುದಾಗಿ ರಾಷ್ಟ್ರೀಯ ಕ್ರೀಡಾ ದಿನಾಚರಣೆಯಲ್ಲಿ ಕ್ರೀಡಾ ಸಚಿವ ನಾರಾಯಣಗೌಡ ತಿಳಿಸಿದರು.

ಕ್ರೀಡಾಪಟುಗಳಿಗೆ ಹೆಚ್ಚಿನ ಸೌಲಭ್ಯಕ್ಕೆ ಮನವಿ
ರಾಜ್ಯದಲ್ಲಿ ಕ್ರೀಡಾಪಟುಗಳಿಗೆ ಉದ್ಯೋಗ ಸಿಗುವುದು ಕಡಿಮೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಕ್ರೀಡಾಪಟುಗಳಿಗೆ ಅರಣ್ಯ, ಪೊಲೀಸ್ ಇಲಾಖೆಗಳಲ್ಲಿ ನೇರ ನೇಮಕಾತಿ ಪ್ರಕ್ರಿಯೆ ನಡೆಯಬೇಕು. ಮಂಗಳೂರಿನಲ್ಲಿ ಮಿನಿ ಒಲಿಂಪಿಕ್ಸ್ ನಡೆಸುವ ಚಿಂತನೆಯಿದೆ. ಇದಕ್ಕೆ ಸಿಎಂ ಬೊಮ್ಮಾಯಿಯವರ ಸಹಕಾರ ಬೇಕಾಗಿದೆ. ಕ್ರೀಡಾಪಟುಗಳಿಗೆ ಉತ್ತಮ ಹಾಸ್ಟೆಲ್, ಆಹಾರ ನೀಡಬೇಕಿದೆ. ಕ್ರೀಡಾಪಟುಗಳಿಗೆ ಭತ್ಯೆ ಹೆಚ್ಚಳ ಮಾಡಬೇಕು ಎಂದು ಕರ್ನಾಟಕ ಒಲಂಪಿಕ್ ಸಂಸ್ಥೆ ಅಧ್ಯಕ್ಷ ಗೋವಿಂದರಾಜು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದರು.

ಕರ್ನಾಟಕ ಒಲಂಪಿಕ್ ಸಂಸ್ಥೆಯಿಂದ ಪದ್ಮಭೂಷಣ ಮೇಜರ್ ಧ್ಯಾನಚಂದ್ ದಿನಾಚರಣೆ ಹಾಗೂ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ  ರಾಜ್ಯಪಾಲ ಥಾವರ್ ಚಂದ್ ಗೆಹಲೋತ್, ಸಿಎಂ ಬಸವರಾಜ ಬೊಮ್ಮಾಯಿ, ಕ್ರೀಡಾ ಸಚಿವ ನಾರಾಯಣಗೌಡ ಡಾ.ಕೆ ಗೋವಿಂದರಾಜು ಭಾಗಿಯಾಗಿದ್ದರು.

ಓಲಂಪಿಕ್ಸ್​ನಲ್ಲಿ ಭಾಗವಹಿಸುವವರಿಗೆ ಸಾಮಾನ್ಯ ತರಬೇತಿ ನೀಡಿದರೆ ಸಾಲದು. ಪರಿಣಾಮಕಾರಿಯಾದ ತರಬೇತಿ ನೀಡಬೇಕು. ಅಂತಹ ತರಬೇತಿಯನ್ನು ರಾಜ್ಯ ಸರ್ಕಾರ ಒದಗಿಸಬೇಕು. ನಮ್ಮ ರಾಜ್ಯದ ರಾಜ್ಯಪಾಲರೇ ಸ್ವತಃ ಕ್ರೀಡಾಪಟುವಾಗಿದ್ದು ನಮಗೆ ಹೆಮ್ಮೆಯಿದೆ. ಒಂದೊಂದು ಜಿಲ್ಲೆಗೆ ಅನುದಾನ ಕೊಡುವ ಬದಲು ವಲಯವಾರು ಹಣ ನೀಡಬೇಕು. ಆಗ ಒಂದೊಂದು ವಲಯದಲ್ಲಿ ಕ್ರೀಡಾ ಮೂಲಸೌಕರ್ಯ ಒದಗಿಸಿದರೆ ಹೆಚ್ಚಿನ ಅನುಕೂಲ ಆಗಲಿದೆ. ಇದರಿಂದ ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಬೆಂಬಲ ಸಿಗುತ್ತದೆ ಎಂದು ಕರ್ನಾಟಕ ಒಲಂಪಿಕ್ ಸಂಸ್ಥೆ ಅಧ್ಯಕ್ಷ ಗೋವಿಂದರಾಜು ವಿನಂತಿಸಿದರು.

ಇದನ್ನೂ ಓದಿ: 

ಕ್ರೀಡಾಪಟುಗಳಿಗೆ ಉದ್ಯೋಗದಲ್ಲಿ ನೇರ ನೇಮಕಾತಿ; ಮಂಗಳೂರಿನಲ್ಲಿ ಮಿನಿ ಒಲಂಪಿಕ್ಸ್: ಸಿಎಂಗೆ ಕರ್ನಾಟಕ ಒಲಂಪಿಕ್ ಸಂಸ್ಥೆ ಅಧ್ಯಕ್ಷ ಗೋವಿಂದರಾಜು ಮನವಿ

2024ರ ಒಲಂಪಿಕ್ಸ್​ಗೆ ಕರ್ನಾಟಕದಿಂದ ಕನಿಷ್ಠ ನೂರು ಕ್ರೀಡಾಪಟುಗಳನ್ನು ಕಳಿಸಲು ಯೋಜನೆ: ಸಚಿವ ನಾರಾಯಣಗೌಡ

(CM Basavaraj Bommai says Kannadigas can achieve in the Olympics)

Published On - 7:25 pm, Sun, 29 August 21