ಪಾಲಿಕೆ ನಿರ್ಲಕ್ಷ್ಯದಿಂದ ಶಿಥಿಲಗೊಂಡ ಕಾಂಪೌಂಡ್ ಕುಸಿತ: ಕೂದಲೆಳೆ ಅಂತರದಲ್ಲಿ ಬಾಲಕ ಜಸ್ಟ್ ಮಿಸ್

| Updated By: ಗಂಗಾಧರ​ ಬ. ಸಾಬೋಜಿ

Updated on: Dec 08, 2024 | 9:26 PM

ಇತ್ತೀಚೆಗೆ ಬಿಬಿಎಂಪಿ ಮೈದಾನದ ಗೇಟ್‌ ಬಿದ್ದು ಬಾಲಕ ಸಾವನ್ನಪ್ಪಿದ್ದ. ಈ ಘಟನೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಇಂತಹದ್ದೇ ಒಂದು ಘಟನೆ ಸ್ವಲ್ಪದಲ್ಲೇ ಮಿಸ್​ ಆಗಿದೆ. ಬಿಬಿಎಂಪಿಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಬೆಂಗಳೂರಿನ ಸುಧಾಮನಗರದಲ್ಲಿ ಕಾಂಪೌಂಡ್ ಕುಸಿದು ವಾಹನಗಳು ಜಖಂಗೊಂಡಿವೆ. ಅಲ್ಲೇ ಆಟವಾಡುತ್ತಿದ್ದ ಬಾಲಕ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾನೆ.

ಪಾಲಿಕೆ ನಿರ್ಲಕ್ಷ್ಯದಿಂದ ಶಿಥಿಲಗೊಂಡ ಕಾಂಪೌಂಡ್ ಕುಸಿತ: ಕೂದಲೆಳೆ ಅಂತರದಲ್ಲಿ ಬಾಲಕ ಜಸ್ಟ್ ಮಿಸ್
ಪಾಲಿಕೆ ನಿರ್ಲಕ್ಷ್ಯದಿಂದ ಶಿಥಿಲಗೊಂಡ ಕಾಂಪೌಂಡ್ ಕುಸಿತ: ಕೂದಲೆಳೆ ಅಂತರದಲ್ಲಿ ಬಾಲಕ ಜಸ್ಟ್ ಮಿಸ್
Follow us on

ಬೆಂಗಳೂರು, ಡಿಸೆಂಬರ್​ 08: ಸಿಲಿಕಾನ್ ಸಿಟಿಯಲ್ಲಿ ಬಿಬಿಎಂಪಿ (BBMP) ಸದಾ ಒಂದಿಲ್ಲೊಂದು ಯಡವಟ್ಟಿನ ಮೂಲಕ ಜನರಿಗೆ ಸಂಕಷ್ಟ ತಂದಿಡುತ್ತಿದೆ. ಇತ್ತ ಅಪಾಯ ಇದೇ ಅಂತಾ ಅದೆಷ್ಟೋ ಭಾರೀ ಜನರೇ ಮನವಿ ಮಾಡಿದರೂ ಕ್ಯಾರೇ ಎನ್ನದ ಪಾಲಿಕೆ ನಿರ್ಲಕ್ಷ್ಯಕ್ಕೆ ಕಾಂಪೌಂಡ್ ಗೋಡೆ ಧರೆಗುರುಳಿದೆ. ದಿಢೀರ್ ಕುಸಿದ ಗೋಡೆಯಡಿ ಸಿಲುಕಿ ಕಾರು, ಸ್ಕೂಟರ್ ಜಖಂ ಆಗಿದ್ದರೆ, ಪಕ್ಕದಲ್ಲೇ ಆಟವಾಡುತ್ತಿದ್ದ ಬಾಲಕ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾನೆ.

ಪಾಲಿಕೆಯ ಯಡವಟ್ಟಿಗೆ ಗೋಡೆ ಕುಸಿತ

ಬಿಬಿಎಂಪಿಯ ಕೇಂದ್ರ ಕಚೇರಿಯಿಂದ ಕೂಗಳತೆ ದೂರದಲ್ಲಿರುವ ಸುಧಾಮನಗರದಲ್ಲಿ ದೊಡ್ಡ ಅನಾಹುತ ಒಂದು ತಪ್ಪಿದೆ. ಸಿಕೆಸಿ ಗಾರ್ಡನ್ ಬಳಿ ಇರುವ ಸರ್ಕಾರಿ ಫಾರ್ಮೆಸಿ ಕಾಲೇಜಿನ ಕಾಂಪೌಂಡ್ ಗೋಡೆ ನಿನ್ನೆ ಸಂಜೆ ಏಕಾಏಕಿ ಕುಸಿದುಬಿದ್ದಿದೆ. ಕಳೆದ ಮೂರು ತಿಂಗಳ ಹಿಂದೆಯೇ ಕಾಂಪೌಂಡ್ ಬೀಳುವ ಹಂತದಲ್ಲಿದೆ ಅಂತಾ ದೂರು ಕೊಟ್ಟಿದ್ರೂ ಕ್ರಮವಹಿಸದ ಪಾಲಿಕೆಯ ಯಡವಟ್ಟಿಗೆ ಇದೀಗ ಗೋಡೆ ಕುಸಿದು ಎರಡು ಬೈಕ್, ಒಂದು ಕಾರು ಸಂಪೂರ್ಣ ಜಖಂ ಆಗಿಬಿಟ್ಟಿದೆ.

ಇದನ್ನೂ ಓದಿ: ಬೆಂಗಳೂರು: ಬಿಬಿಎಂಪಿ ಮೈದಾನದ ಗೇಟ್​ ಬಿದ್ದು 7 ವರ್ಷದ ಮಗು ಸಾವು

ಇನ್ನು ಫಾರ್ಮೆಸಿ ಕಟ್ಟಡ ಕೂಡ ನವೀಕರಣವಾಗುತ್ತಿರುವುದರಿಂದ ಸದ್ಯ ಕಟ್ಟಡದಲ್ಲಿದ್ದ ತರಗತಿಗಳನ್ನ ಬೇರೆಡೆ ಶಿಫ್ಟ್ ಮಾಡಲಾಗಿದೆ. ಇತ್ತ ಕಟ್ಟಡದ ಒಳಭಾಗಕ್ಕೆ ಬೇರೊಂದು ಖಾಸಗಿ ಕಟ್ಟಡದಿಂದ ನಿತ್ಯ ಭಾರೀ ಪ್ರಮಾಣದ ನೀರು ಹರಿದು ಬರುತ್ತಿರುವುದು ದುರಂತಕ್ಕೆ ಕಾರಣ ಅಂತಾ ಸ್ಥಳೀಯರು ಆರೋಪ ಮಾಡುತ್ತಿದ್ದಾರೆ. ಇತ್ತ ಕಾಂಪೌಂಡ್ ಬೀಳುವ ಹಂತದಲ್ಲಿದೆ ಅಂತಾ ಪಾಲಿಕೆ ಗಮನಕ್ಕೆ ತಂದಿದ್ರೂ ಯಾರೋಬ್ಬರು ಇತ್ತ ಗಮನಹರಿಸಿಲ್ಲ, ಕಾಂಪೌಂಡ್ ಬಿದ್ದಾಗ ನಮ್ಮ ಮಗ ಇಲ್ಲೇ ಆಟ ಆಡುತ್ತಿದ್ದ, ಅವನ ಜೀವ ಹೋಗಿದ್ದರೆ ಯಾರು ತಂದುಕೊಡಂತಿದ್ದರು ಅಂತಾ ಪಾಲಿಕೆ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

ಉಳಿದ ಕಾಂಪೌಂಡ್​ ಕೂಡ ಕುಸಿಯುವ ಭೀತಿ

ಸದ್ಯ ಕಾಂಪೌಂಡ್ ಕುಸಿದುಬಿದ್ದಿರುವ ಜಾಗದ ಪಕ್ಕದಲ್ಲೇ ಇರುವ ಉಳಿದ ಭಾಗ ಕೂಡ ಸಂಪೂರ್ಣ ಶಿಥಿಲವಾಗಿದ್ದು, ಯಾವುದೇ ಕ್ಷಣದಲ್ಲಿ ಅಪಾಯ ಸಂಭವಿಸುವ ಸೂಚನೆ ನೀಡುತ್ತಿದೆ. ಸದ್ಯ ಈಗಾಗಲೇ ಒಂದು ದುರಂತ ಕೂದಲೆಳೆ ಅಂತರದಲ್ಲಿ ತಪ್ಪಿದ್ದು, ಇದೀಗ ಉಳಿದ ಭಾಗದ ಕಾಂಪೌಂಡ್ ಯಾವಾಗ ಕುಸಿದುಬೀಳುತ್ತೋ ಅನ್ನೋ ಆತಂಕದಲ್ಲೇ ಅಕ್ಕಪಕ್ಕದ ನಿವಾಸಿಗಳಿದ್ದಾರೆ. ಸದ್ಯ ಇನ್ನೂ ಜಾಗ ಪರಿಶೀಲಿಸದೇ ನಿದ್ದೆಗೆ ಜಾರಿರುವ ಪಾಲಿಕೆ, ಸಮಸ್ಯೆಗೆ ಏನು ಪರಿಹಾರ ಸೂಚಿಸುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.