ಬೆಂಗಳೂರು: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ರಾತ್ರಿ ಕರ್ಫ್ಯೂ ಹೇರಲು ಕೈಗೊಂಡಿರುವ ಕ್ರಮ, ಕೊರೊನಾ ಓಡಿಸಲು ತಟ್ಟೆ ಬಡಿಯಲು ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದ ಕರೆಯಷ್ಟೇ ಬಾಲಿಷ ಕ್ರಮವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಧ್ಯಮ ಪ್ರಕಟಣೆಯಲ್ಲಿ ಹೇಳಿದ್ದಾರೆ. ಜೊತೆಗೆ ದೆಹಲಿಯಲ್ಲೊಬ್ಬರು ಪಾಳೆಗಾರ, ರಾಜ್ಯದಲ್ಲಿ ಮಾಂಡಲಿಕ. ಇದು ಭಲೇ ಜೋಡಿ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ರಾತ್ರಿ ತೆರೆದಿರುವ ಹೊಟೇಲ್, ಚಿತ್ರಮಂದಿರ ಮತ್ತು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದರೆ ಸಾಲದೇ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ
ಕೊರೊನಾ ನಿಯಂತ್ರಣಕ್ಕೆ ಯಾವ ರೀತಿಯಲ್ಲಿಯೂ ಉಪಯೋಗವಾಗದ ರೀತಿ ಆಯ್ದ ನಗರಗಳಲ್ಲಿ ರಾತ್ರಿ ಕರ್ಫ್ಯೂ ಏಕೆ? ಎಂದು ಕೇಳಿದ್ದಾರೆ. ಕೊರೊನಾ ನಿಯಂತ್ರಿಸಬೇಕೆಂಬ ಪ್ರಾಮಾಣಿಕ ಇಚ್ಛೆ ರಾಜ್ಯದ ಮುಖ್ಯಮಂತ್ರಿಗೆ ಇದ್ದರೆ ಮೊದಲು ಸುರಕ್ಷತಾ ಕ್ರಮ ಕಟ್ಟುನಿಟ್ಟಾಗಿ ಜಾರಿ ಮಾಡಲಿ. ರಾಜ್ಯದಲ್ಲಿ ಕೊವಿಡ್ ಟೆಸ್ಟ್ಗಳ ಸಂಖ್ಯೆಯನ್ನು ಹೆಚ್ಚಿಸಲಿ. ಸೋಂಕಿತರಿಗೆ ತಕ್ಷಣವೇ ಚಿಕಿತ್ಸೆ ಸಿಗುವಂತೆ ಮಾಡಲಿ ಎಂದು ತಿಳಿಸಿದ್ದಾರೆ.
ಕೊವಿಡ್ ಲಸಿಕೆ ನೀಡಲು ಆರಂಭಿಸಿ 80 ದಿನಗಳಾಗಿವೆ. ಶೇಕಡಾ 1ರಷ್ಟು ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ. ರಾಜ್ಯದಲ್ಲಿ ವ್ಯಾಕ್ಸಿನ್ ಕೊರತೆಯ ಬಗ್ಗೆ ಕೇಳಿ ಬರುತ್ತಿದೆ. ಹೀಗಾಗಿ ಗಿಮಿಕ್ ಬಿಟ್ಟು ಲಸಿಕೆ ಕಡೆ ಗಮನ ಹರಿಸಿ ಎಂದು ಸಿದ್ದರಾಮಯ್ಯನವರು ಮಾಧ್ಯಮ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ. ಪ್ರಧಾನಿ ಅಂಧಾ ದರ್ಬಾರ್ನಿಂದ ರಾಜ್ಯದ ಮುಖ್ಯಮಂತ್ರಿಗಳು ಸ್ಪೂರ್ತಿ ಪಡೆದರೆ, ಮುಖ್ಯಮಂತ್ರಿಗಳಿಂದ ಪ್ರೇರಣೆ ಪಡೆದು ಕೆಲವು ಜಿಲ್ಲಾಧಿಕಾರಿಗಳು ಕೊರೊನಾ ನಿಯಂತ್ರಣದ ಹೆಸರಲ್ಲಿ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಮುಖ್ಯಮಂತ್ರಿಗಳೇ ನೀವು ಸ್ಪಲ್ಪ ಬುದ್ಧಿಯನ್ನು ಕಲಿಯಿರಿ, ಅವರಿಗೂ ಸ್ವಲ್ಪ ಬುದ್ಧಿಯನ್ನು ಹೇಳಿ ಎಂದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಯೇ ಗೆಲ್ಲುತ್ತಾರೆ: ಸಿದ್ದರಾಮಯ್ಯ
ಬೆಳಗಾವಿ: ಏಪ್ರಿಲ್ 17ರಂದು ಬೆಳಗಾವಿ ಲೋಕಸಭಾ ಉಪಚುನಾವಣೆ ಹಿನ್ನೆಲೆ ನಿರೀಕ್ಷೆಗೂ ಮೀರಿ ಕಾಂಗ್ರೆಸ್ಗೆ ಬೆಂಬಲ ಸಿಗುತ್ತಿದೆ. ಬೆಳಗಾವಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಗೆಲ್ಲುತ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ನಂತರ ಸತೀಶ್ ಜಾರಕಿಹೊಳಿ ಹರಕೆಯ ಕುರಿ ಎಂಬ ಹೇಳಿಕೆಗೆ ತಿರುಗೇಟು ನೀಡಿದ ವಿಪಕ್ಷ ನಾಯಕ ಬಿಜೆಪಿಯವರು ಮಂಗಳಾ ಅಂಗಡಿಗೆ ಏನು ಮಾಡಿದ್ರು? ಸಿ.ಟಿ.ರವಿ ಹೇಳಿಕೆಗಳಿಗೆ ನಾವು ಉತ್ತರ ಕೊಡಬೇಕಾ? ಸಿ.ಟಿ.ರವಿ ಯಾವಾಗಲೂ ಸುಳ್ಳನ್ನೇ ಹೇಳುತ್ತಾರೆ ಎಂದರು.
ಇನ್ನೂ ಕಾಂಗ್ರೆಸ್ ಮುಳುಗುವ ಹಡಗು ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಬಿ.ಎಸ್.ಯಡಿಯೂರಪ್ಪನವರೇ ಸದ್ಯ ಮುಳುಗುತ್ತಿದ್ದಾರೆ. ಅವರು ಕುಳಿತಿರುವ ಹಡಗೇ ಈಗ ಮುಳುಗುತ್ತಿದೆ ಎಂದು ಟಾಂಗ್ ಕೊಟ್ಟಿದ್ದಾರೆ.
ಚರ್ಚ್ಗೆ ಭೇಟಿ ನೀಡಿದ ಸಿದ್ದರಾಮಯ್ಯ
ಬೆಳಗಾವಿಯಲ್ಲಿ ಚರ್ಚ್ಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮಾಜಿ ಸಚಿವ ಎಂ.ಬಿ.ಪಾಟೀಲ್, ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜಾ ಸಾಥ್ ನೀಡಿದರು. ಈ ವೇಳೆ ಮಾಜಿ ಶಾಸಕ ಫಿರೋಜ್ ಸೇಠ್ ಉಪಸ್ಥಿತಿತರಿದ್ದರು.
ಇದನ್ನೂ ಓದಿ
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕನ್ನಡ ಪ್ರೇಮಿ ಸಯ್ಯದ್ ಗ್ರಂಥಾಲಯಕ್ಕೆ ಬೆಂಕಿ, 11 ಸಾವಿರ ಪುಸ್ತಕಗಳು ಭಸ್ಮ
ಕರಾವಳಿ ಸಮುದ್ರಗಳಿಗೆ ಕಾಯಕಲ್ಪ; ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ನೀಡಲು ಮುಂದಾದ ಮಂಗಳೂರು ಜಿಲ್ಲಾಡಳಿತ
(Congress Leader Siddaramaiah slams on government for imposing Night Corona Curfew in Karnataka)
Published On - 12:56 pm, Sat, 10 April 21