ಬೆಂಗಳೂರು: ಬಿಬಿಎಂಪಿ ವಾರ್ಡ್ ಮೀಸಲಾತಿ ವಿರೋಧಿಸಿ ಕಾಂಗ್ರೆಸ್ ಪಕ್ಷವು ನಗರದ ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ವಿಧಾನ ಪರಿಷತ್ತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಮಾಜಿ ಮೇಯರ್ ಮಂಜುನಾಥ್ ರೆಡ್ಡಿ, ಎಂಎಲ್ಸಿ ಮಂಜುನಾಥ್ ಭಂಡಾರಿ, ಬಿಬಿಎಂಪಿ ಮಾಜಿ ಸದಸ್ಯರು ಸೇರಿದಂತೆ ಹಲವು ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿ ಅವೈಜ್ಞಾನಿಕ ವಾರ್ಡ್ ಮೀಸಲಾತಿ ಹಿಂಪಡೆಯುವಂತೆ ಒತ್ತಾಯ ಮಾಡುತ್ತಿದ್ದಾರೆ.
ಬಿಬಿಎಂಪಿ ವಾರ್ಡ್ ಮೀಸಲಾತಿ ಪ್ರಶ್ನಿಸಿ 2 ಸಾವಿರಕ್ಕೂ ಹೆಚ್ಚು ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದರೂ ಬಿಜೆಪಿ ಮನ್ನಣೆ ನೀಡಿಲ್ಲವೆಂದು ಆರೋಪಿಸಿ ಬೆಂಗಳೂರು ಕೇಂದ್ರ, ದಕ್ಷಿಣ, ಉತ್ತರ ಜಿಲ್ಲಾ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ತೆರಳುತ್ತಿದ್ದ ಕೈ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಫ್ರೀಡಂಪಾರ್ಕ್ನಿಂದ ಸಿಎಂ ನಿವಾಸದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಹೊರಟ ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಶಾಸಕರಾದ ರಾಮಲಿಂಗಾರೆಡ್ಡಿ, ಕೃಷ್ಣ ಭೈರೇಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಟಿವಿ9 ಜೊತೆ ಮಾತನಾಡಿದ ಬಿ.ಕೆ.ಹರಿಪ್ರಸಾದ್, ಮೀಸಲಾತಿ ಮಾಡುವ ಸಂದರ್ಭದಲ್ಲಿ ಎಲ್ಲ ವರ್ಗದವರಿಗೂ ಅವಕಾಶ ಸಿಗಬೇಕು ಅಂತ ಮಾಡಲಾಗಿದೆ. ಕಾಂಗ್ರೆಸ್ ಇರುವ ಕಡೆಗಳಲ್ಲಿ ಎಲ್ಲಾ ಮಹಿಳಾ ಮೀಸಲಾತಿ ಮಾಡಿದ್ದಾರೆ. ಇದೊಂದು ಅವೈಜ್ಞಾನಿಕ ಮೀಸಲಾತಿ. ಕೇಶವ ಕೃಪದಲ್ಲಿ ಕೂತು ಆರ್ಎಸ್ಎಸ್ನವರು ಹೇಳಿದಂತೆ ಮಾಡಿರುವ ಮೀಸಲಾತಿ ಇದು ಎಂದರು.
ಸರ್ಕಾರಕ್ಕೆ ಗೋಡ್ಸೆ ಮೇಲೆ ಬಹಳ ಪ್ರೀತಿ, ಗೋಡ್ಸೆ ಹಾಗೂ ಸಾವರ್ಕರ್ ಅವರ ಫೊಟೋಗಳನ್ನು ಕಸದ ತೊಟ್ಟಿಯ ಮೇಲೂ ಹಾಕುವುದಕ್ಕೆ ಲಾಯಕ್ಕಲ್ಲ, ಉತ್ತರಪ್ರದೇಶ ಮಾದರಿ ಮಾಡುತ್ತೇವೆ ಅಂತ ಹೊರಟಿದ್ದಾರೆ. ಅನಾಗರಿಕ ರಾಜ್ಯ ಮಾಡಲು ಹೊರಟಿದ್ದಾರೆ.
ನಮ್ಮ ಹೆಣದ ಮೇಲೆ ಅದು ಆಗುತ್ತದೆ ಎಂದರು.
ಪ್ರತಿಭಟನೆಗೆ ನಿರಸ ಪ್ರತಿಕ್ರಿಯೆ
ಬೆಂಗಳೂರಿನ ಫ್ರೀಡಂಪಾರ್ಕ್ ಬಳಿ ನಡೆಯುತ್ತಿರುವ ಕಾಂಗ್ರೆಸ್ ಪ್ರತಿಭಟನೆಗೆ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾಂಗ್ರೆಸ್ ನಾಯಕರು ಕರೆ ನೀಡಿದ್ದ ಧರಣಿಯಲ್ಲಿ ಬೆಂಗಳೂರಿನ ಬಹುತೇಕ ಕಾಂಗ್ರೆಸ್ ನಾಯಕರು ಗೈರಾಗಿದ್ದಾರೆ. ಪ್ರತಿಭಟೆನಯಲ್ಲಿ ಭಾಗಿಯಾಗುವಂತೆ ಸೂಚಿಸಿದ್ದರೂ ಶಾಸಕ ಜಮೀರ್ ಅಹಮ್ಮದ್, ಎನ್.ಎ ಹ್ಯಾರಿಸ್, ಭೈರತಿ ಸುರೇಶ್, ದಿನೇಶ್ ಗುಂಡೂರಾವ್, ಅಖಂಡ ಶ್ರೀನಿವಾಸ್ ಮೂರ್ತಿ, ಸೌಮ್ಯ ರೆಡ್ಡಿ, ಎಂ.ಕೃಷ್ಣಪ್ಪ, ಕೆ.ಜೆ ಜಾರ್ಜ್, ಸಂಸದ ಡಿ.ಕೆ ಸುರೇಶ್, ಪಿ.ಆರ್ ರಮೇಶ್, ಗೋವಿಂದ ರಾಜ್, ಯು.ಬಿ ವೆಂಕಟೇಶ್ ಸೇರಿದಂತೆ ಹಲವರು ಭಾಗವಹಿಸಿಲ್ಲ..
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:02 pm, Thu, 18 August 22