ಬೆಂಗಳೂರು: ಇಂದು ದೇಶಕ್ಕೆ ಐತಿಹಾಸಿಕ ದಿನ. ಕಳೆದ ಒಂದು ವರ್ಷದಿಂದ ಪ್ರಾಣ ಹಿಂಡುತ್ತಿದ್ದ ಕೊರೊನಾವನ್ನು ಹಿಮ್ಮೆಟ್ಟಿಸುವ ಲಸಿಕೆಗೆ ಇಂದು ಅದ್ದೂರಿ ಚಾಲನೆ ಸಿಕ್ಕಿದೆ. ರಾಜ್ಯಾದ್ಯಾಂತ ಎಲ್ಲಾ ಜಿಲ್ಲೆಗಳಲ್ಲಿ ಫ್ರಂಟ್ಲೈನ್ ವಾರಿಯರ್ಸ್ಗೆ ಕೊರೊನಾ ಲಸಿಕೆ ನೀಡಲಾಗುತ್ತಿದೆ.
ಇಂದು ಬೆಳಗ್ಗೆ 10.30ಕ್ಕೆ ಪ್ರಧಾನಿ ನರೇಂದ್ರ ಮೋದಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ಸಿಕ್ಕ ಬಳಿಕ ಲಸಿಕೆ ನೀಡುವ ಕಾರ್ಯ ಆರಂಭವಾಗಿದೆ. ಮೊದಲ ದಿನವಾದ ಇಂದು ಬೆಂಗಳೂರು ಸೇರಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವ್ಯಾಕ್ಸಿನೇಷನ್ ಮಾಡಲಾಗುತ್ತಿದೆ. ಒಂದೇ ದಿನದಲ್ಲಿ ಬೆಂಗಳೂರಿನಲ್ಲಿ 8 ಕೇಂದ್ರಗಳಲ್ಲಿ 800 ಜನರಿಗೆ ಲಸಿಕೆ ಹಾಕಲಾಗುತ್ತೆ. ಬೆಳಗಾವಿಯ 13 ಕೇಂದ್ರಗಳಲ್ಲಿ 1,300 ಜನರಿಗೆ ಲಸಿಕೆ. ಕೋಲಾರ 600, ಮಂಡ್ಯ 800, ಚಿಕ್ಕಬಳ್ಳಾಪುರ 825, ಗದಗ 700,
ಇನ್ನು ಬೆಂಗಳೂರಿನ ಮಲ್ಲಸಂದ್ರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯೆ ಕೋಮಲ ಈ ದಿನದ ಮೊದಲ ಲಸಿಕೆ ಪಡೆದಿದ್ದಾರೆ. ನಗರದ ಸಿವಿ ರಾಮನ್ ಜನರಲ್ ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ರೇಡಿಯಾಲಜಿಸ್ಟ್ ಶುಭಾ ಪ್ರೇಮಾವತಿ ಲಸಿಕೆ ಹಾಕಿಸಿಕೊಳ್ಳಲಿದ್ದಾರೆ. ಈ ವೇಳೆ ಮಾತನಾಡಿದ ಅವರು ಜನರಲ್ಲಿ ವಿಶ್ವಾಸ ಮೂಡಿಸುವ ಸಲುವಾಗಿ ನಮ್ಮ ಆಸ್ಪತ್ರೆಯ ಸಿಬ್ಬಂದಿಗಳೇ ಮೊದಲು ವ್ಯಾಕ್ಸಿನ್ ಪಡೆಯುತ್ತಿದ್ದೇವೆ. ಸಣ್ಣ ಮಕ್ಕಳಿಗೂ ಹೆಪಟೈಟಿಸ್ ಬಿ ವ್ಯಾಕ್ಸಿನ್ ನೀಡಲಾಗುತ್ತದೆ. ಅದೇ ರೀತಿ ಇದೂ ಒಂದು ವ್ಯಾಕ್ಸಿನ್. ಇದಕ್ಕೆ ಹೆದರುವ ಅಗತ್ಯವಿಲ್ಲ. 4 ಸಾವಿರಕ್ಕೂ ಅಧಿಕ ಸೋಂಕಿತರಿಗೆ ಟೆಸ್ಟ್ ಮಾಡಿದ್ದೇವೆ. ಆದರೆ ನನಗೆ ಕೊವಿಡ್ ಬಂದಿಲ್ಲ. ಎಲ್ಲರಿಗೂ ಮಾದರಿಯಾಗಲು, ಧೈರ್ಯ ತುಂಬಲು ನಾವೇ ಸ್ವಯಂ ಪ್ರೇರಿತವಾಗಿ ವ್ಯಾಕ್ಸಿನ್ ಪಡೆಯುತ್ತಿದ್ದೇವೆ ಎಂದು ಹೇಳಿದ್ರು.
ಬಾಗಲಕೋಟೆ ಜಿಲ್ಲೆಯ ಆರೋಗ್ಯ ಕೇಂದ್ರದಲ್ಲಿ ಕೊರೊನಾ ಲಸಿಕೆ ಹಾಕುವ ಕಾರ್ಯ ಆರಂಭವಾಗಿದ್ದು ಮೊದಲು ಲಸಿಕೆಯನ್ನು ಆರೋಗ್ಯ ಕೇಂದ್ರದ ಆರೋಗ್ಯ ಕಾರ್ಯಕರ್ತ ಕಪಿಲ್ ಗಂಜಿಹಾಳ ಪಡೆದಿದ್ದಾರೆ.
ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರರಿಗೆ ಧೈರ್ಯ ತುಂಬಲು ಡಾ. ಶಶಿಧರ್ ಮೊದಲು ವ್ಯಾಕ್ಸಿನ್ ಪಡೆದ್ರು. ಬಳಿಕ ಡಿ ಗ್ರೂಪ್ ನೌಕರ ರಾಜಾಭಕ್ಷಿ ಲಸಿಕೆ ಹಾಕಿಸಿಕೊಂಡ್ರು. ಸಂಸದ ಜಿಎಂ ಸಿದ್ದೇಶ್ವರ್, ಡಿಸಿ ಮಹಾಂತೇಶ್ ಬೀಳಗಿ, ಶಾಸಕರಾದ ಎಸ್.ಎ. ರವೀಂದ್ರನಾಥ್, ಪ್ರೋ, ಲಿಂಗಣ್ಣ ಲಸಿಕೆ ವಿತರಣೆಗೆ ಚಾಲನೆ ನೀಡಿದ್ರು.
ಬಳ್ಳಾರಿ: ಲಸಿಕೆ ಬಳಿಕ ಸಂತೋಷ ಹಂಚಿಕೊಂಡ ವಾರಿಯರ್ಸ್
ಆರೋಗ್ಯ ಇಲಾಖೆ ಡಿ ದರ್ಜೆ ನೌಕರ ಶಾಂತಕುಮಾರ್ ಮೊದಲ ಕೋವಿಡ್ ಲಸಿಕೆ ಪಡೆದಿದ್ದಾರೆ. ಈ ವೇಳೆ ಮಾತನಾಡಿದ ಅವರು “ಮೊದಲ ಲಸಿಕೆ ನನಗೆ ನೀಡಿದ್ದಕ್ಕೆ ಧನ್ಯವಾದ ಸಲ್ಲಿಸುವೆ. ಲಸಿಕೆ ಪಡೆದ ನಂತ್ರ ಯಾವುದೇ ಅಡ್ಡ ಪರಿಣಾಮ ಇಲ್ಲ. ಲಸಿಕೆ ಪಡೆಯಲು ಆರಂಭದಲ್ಲಿ ಆತಂಕ ಇತ್ತು. ಆದರೆ ಲಸಿಕೆ ಪಡೆದ ಬಳಿಕ ತುಂಬಾ ಖುಷಿಯಾಗುತ್ತಿದೆ. ಪ್ರತಿಯೊಬ್ಬರು ಕೋವಿಡ್ ಲಸಿಕೆ ಪಡೆಯಬೇಕು ಎಂದರು. ಇನ್ನು ಕೋವಿಡ್ ಲಸಿಕೆ ಪಡೆದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಬಸಾರೆಡ್ಡಿ “ಕೋವಿಡ್ ಲಸಿಕೆ ಕೊರೊನಾ ಹೆಮ್ಮಾರಿ ಹೋಗಲಾಡಿಸುವ ಆಯುಧ. ಲಸಿಕೆ ಪಡೆಯುವುದರಿಂದ ಯಾವುದೇ ತೊಂದರೆ ಇಲ್ಲ. ಪ್ರತಿಯೊಬ್ಬರು ಈ ಲಸಿಕೆ ಪಡೆಯಬೇಕು. ನನಗೂ ಈ ಹಿಂದೆ ಕೊರೊನಾ ಪಾಸಿಟಿವ್ ಆಗಿತ್ತು ಎಂದರು.
ರಾಯಚೂರಿನ ರಿಮ್ಸ ಆಸ್ಪತ್ರೆಯಲ್ಲಿ ಮೊದಲ ಲಸಿಕೆ ಪಡೆದು ರಿಮ್ಸ್ ಆಸ್ಪತ್ರೆ ಡಿ ಗ್ರೂಪ್ ನೌಕರ ಮಂಜುನಾಥ ಬಲ್ಲಟಗಿ ಸಂತಸ ವ್ಯಕ್ತಪಡಿಸಿದ್ರು. ಕೊರೊನಾ ಸಂದರ್ಭದಲ್ಲಿ ಆತಂಕದಲ್ಲೇ ಕೆಲಸ ಮಾಡಿದ್ದೆ. ಈಗ ಲಸಿಕೆ ಪಡೆದು ತುಂಬಾ ಸಂತೋಷವಾಗಿದೆ. ಇಂಜೆಕ್ಟ್ ಮಾಡಿಸಿಕೊಂಡ ನಂತರವೂ ಆರಾಮಾಗಿದ್ದೇನೆ. ಯಾವುದೇ ತೊಂದರೆಯಾಗ್ತಿಲ್ಲ ಎಂದು ಹೇಳಿದ್ರು.
ಹಾಸನದ ವೈದ್ಯಕೀಯ ಬೋದಕ ಆಸ್ಪತ್ರೆಯಲ್ಲಿ ಮೊದಲ ದಿನವೇ ಹಿಮ್ಸ್ ನಿರ್ದೇಶಕ ಡಾ.ರವಿಕುಮಾರ್ ಹಾಗೂ ವೈದ್ಯಕೀಯ ಅಧೀಕ್ಷಕ ಡಾ.ಕೃಷ್ಣಮೂರ್ತಿ ಕೋ ವ್ಯಾಕ್ಸಿನ್ ಲಸಿಕೆ ಸ್ವೀಕರಿಸಿದ್ದಾರೆ. ಲಸಿಕೆ ಪಡೆದ ಬಳಿಕ ಅರ್ಧಗಂಟೆ ನಿಗಾ ವಹಿಸಿ ಯಾವುದೇ ಅಡ್ಡಪರಿಣಾಮ ಇಲ್ಲದ ಕಾರಣ ಸೇಫಾಗಿ ತೆರಳಿದ್ರು. ಇಂದು ಜಿಲ್ಲೆಯಲ್ಲಿ ಒಟ್ಟು ಒಂದು ಸಾವಿರ ಜನರಿಗೆ ಲಸಿಕೆ ಹಾಕಲಾಗುತ್ತಿದ್ದು ಜಿಲ್ಲೆಯಲ್ಲಿ ಒಟ್ಟು 10 ಕೇಂದ್ರಗಳಲ್ಲಿ ಅರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಲಾಗುತ್ತಿದೆ.
ವಿಜಯಪುರದ ಜಿಲ್ಲಾ ಆಸ್ಪತ್ರೆಯಲ್ಲಿ ಲಕ್ಷ್ಮಣ ಕೊಳೂರ (57) ಎಂಬುವವರು ಮೊದಲ ಲಸಿಕೆ ಹಾಕಿಸಿಕೊಂಡಿದ್ದಾರೆ. ಈ ವೇಳೆ ಜಿ.ಪಂ. ಸಿಇಓ ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ ಮಹೇಂದ್ರ ಕಾಪಸೆ, ಡಿಎಸ್ ಡಾ ಶರಣಪ್ಪ ಕಟ್ಟಿ ಸೇರಿದಂತೆ ಇತರರು ಹಾಜರಿದ್ರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ನಿರೋಧಕ ಲಸಿಕೆ ನೀಡುವಿಕೆ ಆರಂಭವಾಗಿದೆ. ಮಂಗಳೂರಿನ ಗ್ರೂಪ್ ಡಿ ನೌಕರ ರೋಬಿನ್ ಗೆ ಮೊದಲ ಲಸಿಕೆ ಹಾಕಲಾಗಿದೆ. ಮಂಗಳೂರು, ಸುರತ್ಕಲ್, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯದಲ್ಲಿ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಚಾಲನೆ ನೀಡಿದ್ರು. ದಕ್ಷಿಣ ಕನ್ನಡ ಜಿಲ್ಲೆಯ 6 ಲಸಿಕಾ ಕೇಂದ್ರಗಳಲ್ಲಿ 600 ಆರೋಗ್ಯ ಸಿಬ್ಬಂದಿಗಳಿಗೆ ಇಂದೇ ವ್ಯಾಕ್ಸಿನ್ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಮಡಿಕೇರಿ ಆಸ್ಪತ್ರೆ ಡಿಗ್ರೂಪ್ ಸಿಬ್ಬಂದಿ ಧನಲಕ್ಷ್ಮೀ ಪ್ರಥಮ ಲಸಿಕೆ ಪಡೆದಿದ್ದಾರೆ. ಪ್ರಥಮ ಹಂತಕ್ಕೆ ನಮ್ಮನ್ನು ಆಯ್ಕೆ ಮಾಡಿದ್ದು ಖುಷಿಯ ವಿಚಾರ. ವ್ಯಾಕ್ಸಿನ್ ಪಡೆದ ನನಗೆ ಏನೂ ಆಗಿಲ್ಲ. ಎಲ್ಲರೂ ಧೈರ್ಯವಾಗಿ ವ್ಯಾಕ್ಸಿನ್ ಹಾಕಿಸಿಕೊಳ್ಳಿ. ಕೊರೊನಾ ಸಮಯದಲ್ಲಿ ರಜೆ ಪಡೆಯದೇ ದುಡಿದಿದ್ದೇವೆ. ಆತಂಕದಲ್ಲೂ ನಮ್ಮ ಕರ್ತವ್ಯ ನಿರ್ವಹಿಸಿದ್ದೇವೆ. ಲಸಿಕೆ ಬಂದಿದ್ದು, ಇನ್ನೂ ಧೈರ್ಯವಾಗಿ ಕೆಲಸ ಮಾಡುತ್ತೇವೆ ಎಂದು ಧನಲಕ್ಷ್ಮೀ ಹೇಳಿದ್ರು.
Published On - 12:15 pm, Sat, 16 January 21