ದೇವರಿಗೆ ಕಾಣಿಕೆ, ಹರಕೆಯಾಗಿ ಬಂದ ವಸ್ತುಗಳನ್ನು ಹಲವೆಡೆ ಹರಾಜಿನ (Auction) ಮೂಲಕ ಭಕ್ತರಿಗೆ (Devotees) ನೀಡುವುದು ಸಂಪ್ರದಾಯ. ಹರಾಜಿನಲ್ಲಿ ಯಾರು ಹೆಚ್ಚು ಹಣವನ್ನು ನೀಡುತ್ತಾರೋ ಅವರಿಗೆ ಈ ವಸ್ತುಗಳನ್ನು ಕೊಡುವುದು ಪ್ರತೀತಿ. ಧಾರ್ಮಿಕ ಸ್ಥಳಗಳಲ್ಲಿ (Religious Places) ನೀಡಲಾಗುವ ಹಣ್ಣು ಮತ್ತು ಇತರ ವಸ್ತುಗಳನ್ನು ಅದರ ನಿಜವಾದ ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಬೆಲೆಗೆ ಭಕ್ತರು ಖರೀದಿಸುವುದು ಸಾಮಾನ್ಯವಾಗಿದೆ. ಈ ವಸ್ತುಗಳನ್ನು ಪವಿತ್ರ ಮತ್ತು ದೇವರ ಪ್ರಸಾದವೆಂದು ಭಾವಿಸುತ್ತಾರೆ. ಇದೀಗ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳದ ಮಸೀದಿಯೊಂದರಲ್ಲಿ ಭಕ್ತರೊಬ್ಬರು ಬರೋಬ್ಬರಿ 4.33 ಲಕ್ಷ ರೂ. ಹಲಸಿನ ಹಣ್ಣನ್ನು ಖರೀದಿಸಿದ್ದಾರೆ. ಇದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ನವೀಕೃತ ಮೂಲರಪಟ್ಣ ಮಸೀದಿ ಉದ್ಘಾಟನೆ ನಿಮಿತ್ತ ಧಾರ್ಮಿಕ ಪ್ರವಚನ ಆಯೋಜಿಸಲಾಗಿತ್ತು. ಸಿರಾಜುದ್ದೀನ್ ಕಾಸಿಮಿ ಪಟ್ಟಣಪುರಂ ಅವರ ಪ್ರವಚನದ ನಂತರ ಅವರು ಮಸೀದಿಗೆ ಕಾಣಿಕೆಯಾಗಿ ತಂದ ಹಲಸಿನ ಹಣ್ಣನ್ನು ಹರಾಜು ಹಾಕಲು ಪ್ರಾರಂಭಿಸಿದರು.
ಸ್ಥಳೀಯ ಮುಖಂಡರಾದ ಅಜೀಜ್ ಮತ್ತು ಲತೀಫ್ ಅವರು ಹಲಸಿನ ಹಣ್ಣಿಗೆ ಪೈಪೋಟಿ ನಡೆಸಿದ್ದು, ಲತೀಫ್ ಅವರಿಗೆ 4,33,333 ರೂ.ಗೆ ಮಾರಾಟವಾಗಿದೆ. ಹರಾಜು ಪ್ರಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಲಸಿನ ಹಣ್ಣಿಗೆ ಭಾರಿ ಮೊತ್ತ ನೀಡಿರುವುದು ಅಚ್ಚರಿ ಮೂಡಿಸಿದೆ. ಹಲಸಿನ ಹಣ್ಣಿಗೆ ಪಾವತಿಸಿದ ದೊಡ್ಡ ಮೊತ್ತದ ಬಗ್ಗೆ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಮೆಟ್ರೋದಲ್ಲಿ ಅನೌನ್ಸ್ಮೆಂಟ್ ಬದಲು ಭಿತ್ತರವಾಯ್ತು ಹರಿಯಾಣವಿ ಗೀತೆ, ಅಚ್ಚರಿಗೊಳಗಾದ ಪ್ರಯಾಣಿಕರು
ಇದರ ಜತೆಗೆ ಇತರ ಅನೇಕ ಸುವಸ್ತುಗಳು ಏಲಂ ಆಗಿ ಉತ್ತಮ ಮೊತ್ತ ಲಭಿಸಿದ್ದು, ಎಲ್ಲ ಮೊತ್ತವನ್ನು ಆಡಳಿತ ಸಮಿತಿಗೆ ಹಸ್ತಾಂತರಿಸಲಾಗಿದೆ ಎಂದು ಮಸೀದಿಯ ಮೂಲಗಳು ತಿಳಿಸಿವೆ.
Published On - 12:17 pm, Tue, 28 March 23