ಮಂಗಳೂರು: ಕರ್ನಾಟಕ ರಾಜಧಾನಿ ಬೆಂಗಳೂರು ಹಾಗೂ ಇತರ ಕೆಲವು ನಗರಗಳಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಡೆಂಗ್ಯೂ ಪ್ರಕರಣಗಳು (Dengue cases) ಹೆಚ್ಚಾಗಿದ್ದು, ದಕ್ಷಿಣ ಕನ್ನಡ ಆರೋಗ್ಯ ಇಲಾಖೆ ಈಗಾಗಲೇ ಮುನ್ನೆಚ್ಚರಿಕೆ ವಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಕನ್ನಡ-ಬೆಂಗಳೂರು ನಡುವೆ ನಿತ್ಯ ನೂರಾರು ಜನರು ಪ್ರಯಾಣಿಸುತ್ತಿದ್ದು, ಸಾರ್ವಜನಿಕರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲಾ ರೋಗ ನಿಯಂತ್ರಣ ಕಾರ್ಯಕ್ರಮ ಅಧಿಕಾರಿ ಡಾ. ನವೀನಚಂದ್ರ ಕುಲಾಲ್ ಮನವಿ ಮಾಡಿದ್ದಾರೆ.
ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಡಾ. ಕುಲಾಲ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ಪಾಲ್ಗೊಂಡಿದ್ದಾರೆ. ಜಿಲ್ಲೆಯಲ್ಲಿ ಮಳೆಯಾಗುತ್ತಿದ್ದು, ಡೆಂಗ್ಯೂ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಡಾ. ಕಿಶೋರ್ ಹೇಳಿದ್ದಾರೆ.
ಜಿಲ್ಲೆಯಲ್ಲಿ ಸೊಳ್ಳೆಗಳ ಹಾವಳಿ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯೊಂದಿಗೆ ಜನತೆ ಕೈಜೋಡಿಸಬೇಕು ಎಂದು ಡಾ. ಕುಲಾಲ್ ಕರೆ ನೀಡಿದ್ದಾರೆ.
ಒಟ್ಟಾರೆ ಜಿಲ್ಲೆಯಲ್ಲಿ ಡೆಂಗ್ಯೂ ಮತ್ತು ಮಲೇರಿಯಾ ಪ್ರಕರಣಗಳಲ್ಲಿ ಕುಸಿತ ದಾಖಲಾಗುತ್ತಿದೆ. ಜಿಲ್ಲೆಯಲ್ಲಿ ಈ ವರ್ಷ 56 ಡೆಂಗ್ಯೂ ಪ್ರಕರಣಗಳು ಹಾಗೂ 24 ಮಲೇರಿಯಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ ಯಾವುದೇ ಚಿಕೂನ್ ಗುನ್ಯಾ ಪ್ರಕರಣಗಳು ವರದಿಯಾಗಿಲ್ಲ. ಜಿಲ್ಲೆಯಲ್ಲಿ 2019 ರಲ್ಲಿ 1,539, 2020 ರಲ್ಲಿ 239, 2021 ರಲ್ಲಿ 295 ಮತ್ತು 2022 ರಲ್ಲಿ 388 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. 2019 ರಲ್ಲಿ 2,797 ಮಲೇರಿಯಾ ಪ್ರಕರಣಗಳು ವರದಿಯಾಗಿವೆ, ಮತ್ತು 2019 ರಲ್ಲಿ ಇದು 1,397 ಕ್ಕೆ ಇಳಿದಿದ್ದು, 2019 ರಲ್ಲಿ 1817 ಪ್ರಕರಣಗಳು ವರದಿಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: National Dengue Day 2022: ಡೆಂಗ್ಯೂ ರೋಗದ ಲಕ್ಷಣ, ಚಿಕಿತ್ಸೆ, ಮುನ್ನೆಚ್ಚರಿಕಾ ಕ್ರಮಗಳೇನು?
ವಿವಿಧ ಇಲಾಖೆಗಳ ಸಮನ್ವಯ, ಸಾರ್ವಜನಿಕ ಸಹಭಾಗಿತ್ವದಿಂದ ಜಿಲ್ಲೆಯಲ್ಲಿ ಮಲೇರಿಯಾ ಪ್ರಕರಣಗಳು ಇಳಿಮುಖವಾಗಿದೆ. ಹಾಗೆಂದು, ಜನರು ಮತ್ತು ಅಧಿಕಾರಿಗಳು ಮೈಮರೆಯುವಂತಿಲ್ಲ ಎಂದು ಡಾ. ಕುಮಾರ್ ಹೇಳಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಈವರೆಗೆ 23 ಟೈಫಾಯಿಡ್ ಪ್ರಕರಣಗಳು ದಾಖಲಾಗಿವೆ. ಜಿಲ್ಲೆಯಲ್ಲಿ ವರದಿಯಾಗಿರುವ ಟೈಫಾಯಿಡ್ ಪ್ರಕರಣಗಳ ವಿವರ ನೀಡುವಂತೆ ಎಲ್ಲ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ. ಟೈಫಾಯಿಡ್ ಜ್ವರವು ಕಲುಷಿತ ನೀರು ಅಥವಾ ಆಹಾರ ಸೇವನೆಯಿಂದ ಹರಡುವ ಕಾಯಿಲೆಯಾಗಿದೆ. ಕುಡುಪು, ಪಡೀಲ್, ಸಜಿಪ, ಉಳ್ಳಾಲ ಭಾಗದಲ್ಲಿ ಪ್ರಕರಣಗಳು ವರದಿಯಾಗಿವೆ. ಎಲ್ಲಾ ರೋಗಿಗಳು ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಅವರ ಸ್ಥಿತಿ ಸ್ಥಿರವಾಗಿದೆ ಎಂದು ಡಾ. ಕುಮಾರ್ ಮಾಹಿತಿ ನೀಡಿದ್ದಾರೆ.
ಮಂಗಳೂರಿನ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ