
ಬೆಳ್ತಂಗಡಿ, ಸೆ.30: ರಾಜ್ಯಾದ್ಯಂತ ತೀವ್ರ ಕುತೂಹಲ ಮೂಡಿಸಿರುವ ಮಂಗಳೂರಿನ ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಇದೀಗ ಸ್ಫೋಟಕ ಮಾಹಿತಿಯೊಂದು ಸಿಕ್ಕಿದೆ. ಈ ಪ್ರಕರಣದ ತನಿಖೆ ನಡೆಸಿದ ವಿಶೇಷ ತನಿಖಾ ತಂಡ (SIT) ಸರ್ಕಾರಕ್ಕೆ ಅತ್ಯಂತ ಆಘಾತಕಾರಿ ವರದಿಯೊಂದನ್ನು ಸಲ್ಲಿಸಿದೆ. ಧರ್ಮಸ್ಥಳ ಗ್ರಾಮದಲ್ಲಿ ದಾಖಲಾಗಿರುವ ಅಸ್ವಾಭಾವಿಕ ಸಾವು ಪ್ರಕರಣಗಳ ದಾಖಲೆಗಳಲ್ಲಿ ಭಾರಿ ವ್ಯತ್ಯಾಸಗಳು ಇರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಎಸ್‌ಐಟಿ ಸಲ್ಲಿಸಿರುವ ಪ್ರಾಥಮಿಕ ವರದಿಯ ಪ್ರಕಾರ, 1998 ರಿಂದ 2014ರವರೆಗಿನ (16 ವರ್ಷಗಳ ಕಾಲಾವಧಿ) ಯುಡಿಆರ್ ಪ್ರಕರಣಗಳನ್ನು ಕೂಲಂಕುಷವಾಗಿ ಪರಿಶೀಲಿಸಿದಾಗ ಧರ್ಮಸ್ಥಳ ಗ್ರಾಮ ಪಂಚಾಯತ್ ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಯ ದಾಖಲೆಗಳಲ್ಲಿ ಭಾರಿ ವ್ಯತ್ಯಾಸ ಪತ್ತೆಯಾಗಿರುವ ಬಗ್ಗೆ ವರದಿಯನ್ನು ಸಲ್ಲಿಸಿದೆ. ಈ ವಿಚಾರವಾಗಿ ಮಹಿಳಾ ಆಯೋಗವು ಸರ್ಕಾರಕ್ಕೆ ವಿಸ್ತಾರವಾಗಿ ಪತ್ರ ಬರೆದಿದೆ.
ಧರ್ಮಸ್ಥಳ ಗ್ರಾಮ ಪಂಚಾಯತ್ ದಾಖಲೆಗಳ ಪ್ರಕಾರ, ಪಂಚಾಯತ್ ವ್ಯಾಪ್ತಿಯಲ್ಲಿ ದಫನ ಮಾಡಲಾದ ಒಟ್ಟು ಮೃತದೇಹಗಳ ಸಂಖ್ಯೆ 1,510. ಆದರೆ ಧರ್ಮಸ್ಥಳ ಪೊಲೀಸ್ ಠಾಣೆ ದಾಖಲೆ ಪ್ರಕಾರ, ಪೊಲೀಸ್ ಠಾಣೆಯ ಅಧಿಕೃತ ರಿಜಿಸ್ಟರ್‌ನಲ್ಲಿ ದಾಖಲಾಗಿರುವ ಯುಡಿಆರ್ ಪ್ರಕರಣಗಳ ಸಂಖ್ಯೆ 1,480. ಪಂಚಾಯತ್ ದಾಖಲೆಯಲ್ಲಿ 1,510 ತೋರಿಸಿದ್ರೆ, ಪೊಲೀಸ್ ಠಾಣೆ ದಾಖಲೆಯಲ್ಲಿ 1,480 ತೋರಿಸುತ್ತಿರುವ ಭಾರೀ ಅನುಮಾನಕ್ಕೆ ಕಾರಣವಾಗಿದೆ ಎಂದು ಮಹಿಳಾ ಆಯೋಗವು ಹೇಳಿದೆ.
ಧರ್ಮಸ್ಥಳ ಪಂಚಾಯತ್ ದಫನ ಮಾಡಿದ ಉಳಿದ 30 ಮೃತದೇಹಗಳ ಕುರಿತು ಪೊಲೀಸ್ ಠಾಣೆಯ ದಾಖಲೆಗಳಲ್ಲಿ ಯಾವುದೇ ಮಾಹಿತಿಯಿಲ್ಲ. ಈ 30 ಮೃತದೇಹಗಳ ದಾಖಲೆಗಳು ಎಲ್ಲಿ ಹೋದವು ಮತ್ತು ಅವು ಯಾರದ್ದು ಎಂಬ ಪ್ರಶ್ನೆ ತನಿಖಾ ಸಂಸ್ಥೆಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಇದನ್ನೂ ಓದಿ: ಸೌಜನ್ಯ ಕೊಲೆ ಪ್ರಕರಣ ಮರು ತನಿಖೆ: ಎಸ್‌ಐಟಿಯಿಂದ ಕೈಬಿಡುವಂತೆ ಸರ್ಕಾರಕ್ಕೆ ಎಎಸ್ಪಿ ಪತ್ರ
ಈ ಸ್ಫೋಟಕ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಪ್ರಕರಣದ ವರದಿ ತರಿಸಿಕೊಂಡು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸುದೀರ್ಘ ಪತ್ರ ಬರೆದಿದೆ. ತನಿಖೆಯ ಕಾನೂನುಬದ್ಧತೆ ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ಆಯೋಗ ಹಲವು ಪ್ರಮುಖ ನಿರ್ದೇಶನಗಳನ್ನು ನೀಡಿದೆ. ತನಿಖೆ ವೇಳೆ ಹೊಸದಾಗಿ ಪತ್ತೆಯಾಗಿರುವ ಈ 30 ಮೃತದೇಹಗಳ ವ್ಯತ್ಯಾಸದ ಸಂಗತಿಗಳು ಸ್ವಯಂಚಾಲಿತವಾಗಿ ಎಸ್‌ಐಟಿ ತನಿಖಾ ವ್ಯಾಪ್ತಿಗೆ ಒಳಪಡುವುದಿಲ್ಲ. ಆದ್ದರಿಂದ ರಾಜ್ಯ ಸರ್ಕಾರ ತಕ್ಷಣವೇ ಅಧಿಕೃತ ಆದೇಶ ಹೊರಡಿಸಿ, ಎಸ್‌ಐಟಿ ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಬೇಕು ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಮೂಲ ದಾಖಲೆಗಳು, ಪೊಲೀಸ್ ರಿಜಿಸ್ಟರ್‌ಗಳು, ಗ್ರಾಮ ಪಂಚಾಯತ್ ಮರಣ ನೋಂದಣಿ ಪುಸ್ತಕಗಳು ಹಾಗೂ ವೈದ್ಯಕೀಯ ವರದಿಗಳು ದುರುಪಯೋಗವಾಗದಂತೆ ಸುರಕ್ಷಿತವಾಗಿಡಲು ಆಡಳಿತಾತ್ಮಕ ನಿರ್ದೇಶನ ನೀಡಬೇಕು ಎಂದು ಮಹಿಳಾ ಆಯೋಗ ಹೇಳಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:00 pm, Wed, 30 September 26