ಫ್ಲ್ಯಾಟ್ ಕೊಡಿಸುವುದಾಗಿ ಹೇಳಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ: ಮಂಗಳೂರಿನಲ್ಲಿ ದೂರು ದಾಖಲು

| Updated By: Rakesh Nayak Manchi

Updated on: Dec 01, 2023 | 10:45 AM

ಪ್ರಾಪರ್ಟಿ ಡೆವಲಪರ್​ಗಳೆಂದು ಪರಿಚಯಮಾಡಿಕೊಂಡು ಫ್ಲ್ಯಾಟ್ ಕೊಡಿಸುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚನೆ ಎಸಗಿದ ಪ್ರಕರಣ ಸಂಬಂದ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಗಳಾದ ಅಶ್ರಫ್‌ ಹಸನ್‌ ಹಾಗೂ ಮಹಮ್ಮದ್‌ ಸಲಾಂ ಭರವಸೆ ನೀಡಿದ್ದರು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಫ್ಲ್ಯಾಟ್ ಕೊಡಿಸುವುದಾಗಿ ಹೇಳಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ: ಮಂಗಳೂರಿನಲ್ಲಿ ದೂರು ದಾಖಲು
ಫ್ಲ್ಯಾಟ್ ಕೊಡಿಸುವುದಾಗಿ ಹೇಳಿ ಮಹಿಳೆಗೆ ಲಕ್ಷಾಂತರ ರೂ. ವಂಚನೆ ಎಸಗಿದ ಸಂಬಂಧ ಮಂಗಳೂರಿನಲ್ಲಿ ದೂರು ದಾಖಲಾಗಿದೆ (ಸಾಂದರ್ಭಿಕ ಚಿತ್ರ)
Follow us on

ಮಂಗಳೂರು, ಡಿ.1: ಫ್ಲ್ಯಾಟ್ ಕೊಡಿಸುವುದಾಗಿ ನಂಬಿಸಿದ ಇಬ್ಬರು ವ್ಯಕ್ತಿಗಳು ಕೇರಳದ ಪಾಲಕ್ಕಾಡ್ ಜಿಲ್ಲೆಯ ಮಹಿಳೆಯೊಬ್ಬರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚನೆ (Fraud) ಎಸಗಿದ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. ಈ ಬಗ್ಗೆ ಮಂಗಳೂರು (Mangaluru) ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಶ್ರಫ್‌ ಹಸನ್‌ ಹಾಗೂ ಮಹಮ್ಮದ್‌ ಸಲಾಂ ಎಂಬವರು 2015ರಲ್ಲಿ ತಮ್ಮನ್ನು ಪ್ರಾಪರ್ಟಿ ಡೆವಲಪರ್‌ಗಳೆಂದು ಪರಿಚಯಿಸಿಕೊಂಡಿದ್ದಾರೆ. ನಂತರ ನಗರದ ಜೆಪ್ಪುವಿನಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್‌ ನಿರ್ಮಿಸುವುದಾಗಿ ಹಾಗೂ ಒಂದು ಫ್ಲ್ಯಾಟ್ ಕೊಡಿಸುವುದಾಗಿ ನಂಬಿಸಿ 30 ಲಕ್ಷ ರೂಪಾಯಿ ವಂಚಿಸಿದ್ದಾಗಿ ಮಹಿಳೆ ರುಚಿಯಾಬಿ ಮೂಡಂಬೈಲ್‌ ದೂರಿನಲ್ಲಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಮಂಗಳೂರು ಕುಕ್ಕರ್ ಬಾಂಬ್​ ಸ್ಫೋಟ ಪ್ರಕರಣ; ಎನ್​ಐಎ ಅಧಿಕಾರಿಗಳಿಂದ ಚಾರ್ಜ್​ಶೀಟ್​ ಸಲ್ಲಿಕೆ

ಆರೋಪಿಗಳು 2017ರಲ್ಲಿ ಫ್ಲ್ಯಾಟ್ ನಿರ್ಮಾಣದ ಯೋಜನೆ ಪೂರ್ಣಗೊಳಿಸಲು ಒಪ್ಪಿಕೊಂಡು ರುಚಿಯಾಬಿ ಅವರಿಗೆ ನಗರದಲ್ಲಿ ನಿವೇಶನವೊಂದನ್ನು ತೋರಿಸಿದ್ದರು. ಅದರಂತೆ, ಆರೋಪಿಗಳು ರುಚಿಯಾಬಿ ಅವರಿಂದ 2015ರ ಜುಲೈ 15 ಮತ್ತು 2016 ರ ನವೆಂಬರ್ 21 ರ ನಡುವೆ ಕ್ರಮವಾಗಿ 20 ಲಕ್ಷ ಮತ್ತು 10 ಲಕ್ಷ ರೂ.ಗಳ ಚೆಕ್ ಪಡೆದಿದ್ದಾರೆ.

ಆದರೆ ಒಪ್ಪಂದದಂತೆ 2017 ರಲ್ಲಿ ಯೋಜನೆಯನ್ನು ಪೂರ್ಣಗೊಳಿಸಲು ವಿಫಲರಾದ ಅಶ್ರಫ್ ಹಸನ್ ಮತ್ತು ಮೊಹಮ್ಮದ್ ಸಲಾಂ ಅವರು ರುಚಿಯಾಬಿ ಅವರಿಗೆ ತಲಾ 10 ಲಕ್ಷ ರೂ.ಗಳ ಮೂರು ಚೆಕ್‌ಗಳನ್ನು ನೀಡಿದ್ದಾರೆ. ಆದರೆ, ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದ ಕಾರಣ ಚೆಕ್ ಬೌನ್ಸ್ ಆಗಿದೆ. ಸದ್ಯ, ವಂಚನೆ ಸಂಬಂಧ ಮಹಿಳೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:42 am, Fri, 1 December 23