ಬ್ಯಾಂಕಿಂಗ್ ಕ್ಷೇತ್ರಗಳ ತವರೂರು ದಕ್ಷಿಣ ಕನ್ನಡ ಜಿಲ್ಲೆ. ದೇಶದ ಅಗ್ರಗಣ್ಯ ಬ್ಯಾಂಕ್‌ಗಳು ಜನ್ಮತಾಳಿದ ಈ ಜಿಲ್ಲೆಯಲ್ಲಿ ಇದೀಗ ಮತ್ತೊಂದು ಮೈಲಿಗಲ್ಲು ಸ್ಥಾಪನೆಯಾಗಿದೆ. ರಾಜ್ಯದಲ್ಲೇ ಮೊದಲ ಬಾರಿಗೆ ಬೀದಿ ಬದಿ ವ್ಯಾಪಾರಿಗಳೇ ಒಟ್ಟು ಸೇರಿ ಸಹಕಾರಿ ಸೊಸೈಟಿಯೊಂದನ್ನು ಆರಂಭಿಸಿದ್ದಾರೆ. ಮೀಟರ್ ಬಡ್ಡಿದಂಧೆಯವರಿಂದ ಬೀದಿ ಬದಿ ವ್ಯಾಪಾರಿಗಳನ್ನು ರಕ್ಷಣೆ ಮಾಡಲು ಸಂಘಟನಾತ್ಮಕವಾಗಿ ಒಟ್ಟಾಗಿದ್ದಾರೆ.
ಹೌದು..ದೇಶದ ಅಗ್ರಗಣ್ಯ ಬ್ಯಾಂಕ್‌ಗಳಾದ ಕೆನರಾ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ವಿಜಯ ಬ್ಯಾಂಕ್ ಜನ್ಮತಾಳಿದ ಜಿಲ್ಲೆ ಇದೇ ದಕ್ಷಿಣ ಕನ್ನಡ. ಇದರ ಜೊತೆ ಇಲ್ಲಿ ಬ್ಯಾಂಕ್‌ಗಳ ಹಲವು ಶಾಖೆಗಳ ಜೊತೆ ಸಾಕಷ್ಟು ಸೊಸೈಟಿಗಳು ಸಹ ಇದೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಬೀದಿಬದಿ ವ್ಯಾಪಾರಿಗಳೇ ಒಟ್ಟು ಸೇರಿ ಸಹಕಾರ ಸಂಘವೊಂದನ್ನು ಪ್ರಾರಂಭಿಸಿದ್ದಾರೆ.
ರಾಜ್ಯದಲ್ಲಿ ಬೀದಿಬದಿ ವ್ಯಾಪಾರಿಗಳ ಮೊದಲ ಸಹಕಾರ ಸಂಘ ಇದಾಗಿದ್ದು ದಕ್ಷಿಣ ಕನ್ನಡ ಬೀದಿಬದಿ ವ್ಯಾಪಾರಸ್ಥರ ಸಹಕಾರ ಸಂಘ ಎಂಬ ಹೆಸರಿನ ಮೂಲಕ ಸಹಕಾರ ಇಲಾಖೆಯಲ್ಲಿ ನೋಂದಣಿ ಮಾಡಲಾಗಿದೆ. ಇಲ್ಲಿ ಬೀದಿ ಬದಿ ವ್ಯಾಪಾರಸ್ಥರೇ ಸೊಸೈಟಿಯ ಸದಸ್ಯರಾಗಿದ್ದು ಆರ್ಥಿಕ ಹಿತರಕ್ಷಣೆ ಮತ್ತು ಸ್ವಾವಲಂಬನೆಯ ಬದುಕಿನ ಉದ್ದೇಶಕ್ಕಾಗಿ ಇದನ್ನು ಪ್ರಾರಂಭಿಸಲಾಗಿದೆ ಎಂದು ಬೀದಿಬದಿ ವ್ಯಾಪಾರಸ್ಥರ ಸಹಕಾರ ಸಂಘದ ಅಧ್ಯಕ್ಷರಾದ ಬಿ.ಕೆ. ಇಮ್ತಿಯಾಜ್ ತಿಳಿಸಿದ್ದಾರೆ.
ಬೀದಿಬದಿ ವ್ಯಾಪಾರಿಗಳು ವ್ಯಾಪಾರ ನಡೆಸಲು ಬಂಡವಾಳ ಹಾಕುವುದಕ್ಕೆ ಬಡ್ಡಿಯವರಿಂದ ಹಣ ಪಡೆಯುತ್ತಿದ್ದರು. ಆದ್ರೆ ಈ ಮೀಟರ್ ಬಡ್ಡಿ ದಂಧೆಯವರಿಂದ ಅದೆಷ್ಟೋ ವ್ಯಾಪಾರಿಗಳು ಬಡ್ಡಿ ಕಟ್ಟಲಾಗದೇ ಸಂಕಷ್ಟಕ್ಕೆ ಒಳಗಾಗಿದ್ದರು. ಇದರ ಜೊತೆ ಕೆಲ ವ್ಯಾಪಾರಿಗಳು ದುಡಿದ ಹಣವನ್ನು ಕೆಲ ಯೋಜನೆಗಳಲ್ಲಿ ಹೂಡಿಕೆ ಮಾಡಿ ವಂಚನೆಗೀಡಾಗುತ್ತಿದ್ದರು.
ಇದನ್ನು ಮನಗಂಡ ದಕ್ಷಿಣ ಕನ್ನಡ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಶ್ರೇಯೋಭಿವೃದ್ದಿ ಸಂಘ ಯಾಕೆ ನಾವೇ ಸೊಸೈಟಿಯನ್ನು ಪ್ರಾರಂಭಿಸಬಾರದು ಎಂದು ಯೋಚಿಸಿ, ಯೋಜಿಸಿ ಮುಂದಡಿ ಇಟ್ಟಿದೆ. ಸದ್ಯ ಈ ಸೊಸೈಟಿ 1300ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದ್ದು ಇದರಲ್ಲಿ ಕೇವಲ ಬೀದಿಬದಿ ವ್ಯಾಪಾರಿಗಳನ್ನು ಮಾತ್ರ ಸದಸ್ಯರನ್ನಾಗಿ ಮಾಡಿದ್ದು ಯಾವುದೇ ಬಂಡವಾಳಶಾಹಿಗಳಿಗೆ ಮಣೆ ಹಾಕಿಲ್ಲ. ಈ ಸೊಸೈಟಿಯ ಪ್ರಾರಂಭ ಇಂದು ಆಗಿದ್ದು ಬೃಹತ್ ಕಾರ್ಯಕ್ರಮ ನಡೆಸಿ ಸದಸ್ಯರಿಗೆ ಷೇರು ಪ್ರಮಾಣಪತ್ರ ವಿತರಿಸಲಾಯಿತು.
ಚೀಪ್ ಆ್ಯಂಡ್ ಬೆಸ್ಟ್‌ಗಾಗಿ ಅದೆಷ್ಟೋ ಜನ ಬೀದಿಬದಿ ವ್ಯಾಪಾರಿಗಳಿಂದಲೇ ವಸ್ತುಗಳನ್ನು ಖರೀದಿ ಮಾಡುತ್ತಾರೆ. ಆದ್ರೆ ಈ ವ್ಯಾಪಾರಿಗಳನ್ನು ಕೀಳಾಗಿ ಕಾಣುವವರೆ ಹೆಚ್ಚಾಗಿದ್ದಾರೆ. ಇದೆಲ್ಲದರ ನಡುವೆ ದಕ್ಷಿಣಕನ್ನಡ ಜಿಲ್ಲೆಯ ಬೀದಿಬದಿ ವ್ಯಾಪಾರಿಗಳು ಸಂಘಟನಾತ್ಮಕವಾಗಿ ಗಟ್ಟಿಯಾಗುವುದರ ಜೊತೆ ಆರ್ಥಿಕವಾಗಿಯೂ ಬಲಿಷ್ಠವಾಗಲು ಮುಂದಡಿ ಇಟ್ಟಿರೋದು ರಾಜ್ಯದ ಇತರ ಬೀದಿಬದಿ ವ್ಯಾಪಾರಿಗಳಿಗೆ ಮಾದರಿಯಾಗಿದ್ದಾರೆ.