
ಮಂಗಳೂರು, ಅಕ್ಟೋಬರ್ 27: ಮುಚ್ಚುವ ಹಂಚಿನಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಲು ಮತ್ತು ಅವುಗಳ ಸಮಸ್ಯೆಗಳನ್ನು ಜಗತ್ತಿಗೆ ಸಾರಲು ‘ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ’ದ ರಾಜ್ಯ ಸಂಚಾಲಕ ಉನೈಸ್ ಪೆರಾಜೆ ನೇತೃತ್ವದಲ್ಲಿ ವರ್ಷಪೂರ್ತಿ ನಡೆಯುವ ವಿನೂತನ ಅಭಿಯಾನ ಆರಂಭವಾಗಿದೆ. ಕರ್ನಾಟಕದ 31 ಜಿಲ್ಲೆಗಳು ಹಾಗೂ 239 ತಾಲ್ಲೂಕುಗಳ ಜೊತೆಗೆ ಗೋವಾ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಗಡಿ ಭಾಗಗಳಲ್ಲಿರುವ ಕನ್ನಡ ಶಾಲೆಗಳ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ಈ ತಂಡ ಮುಂದಾಗಿದೆ.
ಕಾಸರಗೋಡಿನಲ್ಲಿ ಆರಂಭವಾದ ಈ ಪಯಣವು ನಿಗದಿತ ಅವತಿಗಿಂತ ಹೆಚ್ಚು ದಿನಗಳ ಕಾಲ ಮುಂದುವರಿದು, ಅಲ್ಲಿನ ಶಾಲೆಗಳ ಮೂಲಭೂತ ಸಮಸ್ಯೆಗಳನ್ನು ಬೆಳಕಿಗೆ ತಂದಿದೆ. ಕೆಲವು ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಭಾಷೆ ಬಲ್ಲ ಶಿಕ್ಷಕರೇ ಕನ್ನಡ ಪಾಠ ಮಾಡುತ್ತಿರುವ ಗಂಭೀರ ಸಮಸ್ಯೆಯನ್ನು ಈ ತಂಡ ಪತ್ತೆ ಹಚ್ಚಿ, ಶಿಕ್ಷಣಾಧಿಕಾರಿಗಳ ಗಮನಕ್ಕೆ ತಂದಿದೆ.
ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಹಂಚಿನಲ್ಲಿರುವ ಶಾಲೆಗಳಿಗೆ ಸಹಾಯ ಹಸ್ತ ಚಾಚಲಾಗುತ್ತಿದ್ದು, ದೆಲಂಪಾಡಿಯಲ್ಲಿ ಮಕ್ಕಳು ಶಾಲೆಗೆ ತೆರಳಲು ಹಾದಿಯಿಲ್ಲದೆ ಪಡುತ್ತಿರುವ ಕಷ್ಟವನ್ನು ಮನಗಂಡು ಸ್ಥಳೀಯ ಶಾಸಕರಿಗೆ ರಸ್ತೆ ದುರಸ್ತಿ ಮಾಡುವಂತೆ ಮನವಿ ಮಾಡಲಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ರಾಜ್ಯದಲ್ಲಿ 5,000ಕ್ಕೂ ಅಧಿಕ ಶಾಲೆಗಳು ಮುಚ್ಚಿಹೋಗಿದ್ದು, ಈ ಅಭಿಯಾನದ ಮೂಲಕ ಇದುವರೆಗೆ ಸುಮಾರು 170 ಶಾಲೆಗಳಿಗೆ ಪೀಠೋಪಕರಣ ಹಾಗೂ ಶೈಕ್ಷಣಿಕ ಸಾಮಗ್ರಿಗಳನ್ನು ಒದಗಿಸಲಾಗಿದೆ.
ಕನ್ನಡ ಶಾಲೆಗಳ ಸಂರಕ್ಷಣೆಗಾಗಿ ಸರ್ಕಾರದ ಮಟ್ಟದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಈ ಅಭಿಯಾನವು ಕೆಲವು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ