ಮಂಗಳೂರು ಪೊಲೀಸರಿಗೆ ಪ್ರತಿನಿತ್ಯ ಉಚಿತ ಪೌಷ್ಠಿಕಾಹಾರ; ಕ್ಯಾಂಟೀನ್​ಗೆ ಸಂಘ ಸಂಸ್ಥೆಗಳಿಂದಲೂ ನೆರವು

ಇಸ್ಕಾನ್ ಸಂಸ್ಥೆಯವರು ಪೌಷ್ಠಿಕ ಆಹಾರವನ್ನು ಪೊಲೀಸರಿಗೆ ಕೊಡುತ್ತಿದ್ದು, ಅಕ್ಷಯ ಪಾತ್ರೆ ಯೋಜನೆ ಅಡಿ ಕೃಷ್ಣನ ಪ್ರಸಾದವನ್ನು ಹಂಚುವ ಕಾರ್ಯವನ್ನು ಮಾಡುತ್ತಿದ್ದಾರೆ.

  • ಪೃಥ್ವಿರಾಜ್ ಬೊಮ್ಮನಕೆರೆ
  • Published On - 7:57 AM, 30 Apr 2021
ಮಂಗಳೂರು ಪೊಲೀಸರಿಗೆ ಪ್ರತಿನಿತ್ಯ ಉಚಿತ ಪೌಷ್ಠಿಕಾಹಾರ; ಕ್ಯಾಂಟೀನ್​ಗೆ ಸಂಘ ಸಂಸ್ಥೆಗಳಿಂದಲೂ ನೆರವು
ಪೊಲೀಸ್ ಕ್ಯಾಂಟೀನ್

ದಕ್ಷಿಣ ಕನ್ನಡ: ಕೊರೊನಾ ಎರಡನೇ ಅಲೆಯಿಂದಾಗಿ ಈ ವರ್ಷ ಮತ್ತೆ ಲಾಕ್​ಡೌನ್ ನಡೆಯುತ್ತಿದೆ. ಲಾಕ್​ಡೌನ್​ನಲ್ಲಿ ಕೊರೊನಾ ವಾರಿಯರ್ಸ್​ಗಳಾಗಿ ಹೆಚ್ಚು ಕೆಲಸ ಮಾಡುತ್ತಿರುವವರಲ್ಲಿ ಪೊಲೀಸ್ ಇಲಾಖೆ ಕೂಡ ಒಂದು. ಪೊಲೀಸರಿಗೆ ಲಾಕ್​ಡೌನ್​ನಲ್ಲಿ ಹೆಚ್ಚುವರಿ ಕೆಲಸ ಇದ್ದು, ಊಟ ತಿಂಡಿ ಸರಿಯಾಗಿ ಸಿಗುವುದಿಲ್ಲ. ಆದರೆ ಮಂಗಳೂರು ಪೊಲೀಸರಿಗೆ ಮಾತ್ರ ಈ ಸಮಸ್ಯೆ ಇಲ್ಲ. ಏಕೆಂದರೆ ಇಲ್ಲಿ ಪೊಲೀಸ್ ಕ್ಯಾಂಟೀನ್ ಇದ್ದು, ಪೊಲೀಸರು ನೆಮ್ಮದಿಯಿಂದ ಊಟ ಮಾಡುವಂತಾಗಿದೆ.

ಸದ್ಯ ರಾಜ್ಯದಲ್ಲಿ ಲಾಕ್​ಡೌನ್ ನಡೆಯುತ್ತಿದೆ. 15 ದಿನಗಳ ಲಾಕ್​ಡೌನ್​ನಲ್ಲಿ ಜನರನ್ನು ಮನೆಯಲ್ಲಿರಿಸುವ ಜವಾಬ್ದಾರಿ ಮತ್ತು ಅವಶ್ಯಕ ವಸ್ತುಗಳ ಖರೀದಿ ಸಮಯದಲ್ಲಿ ಸಾಮಾಜಿಕ ಅಂತರ ಕಾಪಾಡುವಂತೆ ನೋಡಿಕೊಳ್ಳುವುದು ಪೊಲೀಸರ ಕರ್ತವ್ಯವಾಗಿದೆ. ಪ್ರತಿನಿತ್ಯ ರಾತ್ರಿ ಹಗಲು ಪೊಲೀಸರು ಹೊರಗೆ ಕೆಲಸ ಮಾಡಲೇಬೇಕು. ಹೀಗಾಗಿ ಮಂಗಳೂರು ಪೊಲೀಸರು ಕರ್ತವ್ಯದ ವೇಳೆ ತಮ್ಮ ಆಹಾರಕ್ಕೆ ಪರದಾಡಬಾರದು ಎಂದು ಮಂಗಳೂರಿನಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಾದಗ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಪೊಲೀಸರಿಗೆ ಉಚಿತ ಪೊಲೀಸ್ ಕ್ಯಾಂಟಿನ್ ತೆರೆದಿದ್ದರು.

ಆಗ ಮಧ್ಯಾಹ್ನ ಊಟವನ್ನು ಉಚಿತವಾಗಿ ಕೊಡಲಾಗುತ್ತಿತ್ತು. ಇಂತಹ ವಿಶೇಷ ಕರ್ತವ್ಯದ ಸಂದರ್ಭದಲ್ಲಿ ಪೊಲೀಸರಿಗೆ ಒಬ್ಬರಿಗೆ ಇಷ್ಟು ಎಂದು ಊಟಕ್ಕೆ ಹಣವನ್ನು ಇಲಾಖೆಯಿಂದ ಬರಿಸುವ ಅವಕಾಶ ಇತ್ತು. ಆ ಹಣವನ್ನು ಬಳಿಸಿ ಆರಂಭಿಸಿದ ಪೊಲೀಸ್ ಕ್ಯಾಂಟೀನ್ ಈಗ ಯಶಸ್ವಿಯಾಗಿದೆ. ಪೊಲೀಸ್ ಇಲಾಖೆಯಿಂದ ಮಧ್ಯಾಹ್ನ ಉಚಿತವಾಗಿ ಊಟವನ್ನು ಕೊಟ್ಟರೆ ಬೆಳಗ್ಗೆ ಮತ್ತು ರಾತ್ರಿ ವೇಳೆ ನಾವು ಊಟ ಕೊಡುತ್ತೇವೆ ಎಂದು ಇದೀಗ ಸಂಘ ಸಂಸ್ಥೆಗಳು ಮುಂದೆ ಬಂದಿದೆ. ಕುಡುಪು ಇಸ್ಕಾನ್ ಸಂಸ್ಥೆಯವರು ಕೂಡ ಪ್ರತಿನಿತ್ಯ ಪೌಷ್ಠಿಕ ಆಹಾರವನ್ನು ಕೊಡುವುದಾಗಿ ಹೇಳಿದ್ದು, ಪೊಲೀಸರಿಗೆ ಊಟ ಕೊಡಲು ಆರಂಭಿಸಿದ್ದಾರೆ.

police canteen

ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಎನ್.ಶಶಿಕುಮಾರ್

ಇಸ್ಕಾನ್ ಸಂಸ್ಥೆಯವರು ಪೌಷ್ಠಿಕ ಆಹಾರವನ್ನು ಪೊಲೀಸರಿಗೆ ಕೊಡುತ್ತಿದ್ದು, ಅಕ್ಷಯ ಪಾತ್ರೆ ಯೋಜನೆ ಅಡಿ ಕೃಷ್ಣನ ಪ್ರಸಾದವನ್ನು ಹಂಚುವ ಕಾರ್ಯವನ್ನು ಮಾಡುತ್ತಿದ್ದಾರೆ. ಇನ್ನು ಡ್ರೈಫ್ರೂಟ್ಸ್​ಗಳನ್ನು ಒಳಗೊಂಡ ಗೋಧಿ ಪಾಯಸ, ಸೋಯ ಮತ್ತು ವಿವಿಧ ಪೌಷ್ಟಿಕಾಂಶ ಪದಾರ್ಥಗಳುಳ್ಳ ಪಲಾವ್ ಮತ್ತು ಆರೋಗ್ಯ ವರ್ಧಕ ಕಷಾಯವನ್ನು ಉಚಿತವಾಗಿ ನೀಡುತ್ತಿದ್ದಾರೆ.

ಸದ್ಯ ಪೊಲೀಸ್ ಇಲಾಖೆ ಮತ್ತು ಸಂಘ ಸಂಸ್ಥೆಗಳು ನೀಡುತ್ತಿರುವ ಉಚಿತ ಊಟದಿಂದ ಅದೆಷ್ಟೋ ಪೊಲೀಸರಿಗೆ ಕರ್ತವ್ಯದ ವೇಳೆ ಯಾವುದೇ ಊಟೋಪಚಾರದ ತೊಂದರೆಯಾಗುತ್ತಿಲ್ಲ. ಇನ್ನು ಒಳ್ಳೆ ಊಟ ಸಿಕ್ಕಿರುವುದರಿಂದ ಇನ್ನು ಹೆಚ್ಚು ಕೆಲಸ ಮಾಡುವ ಹುಮ್ಮಸ್ಸಿನಲ್ಲಿದ್ದಾರೆ ನಗರದ ಪೊಲೀಸರು.

ಇದನ್ನೂ ಓದಿ:

ತುಮಕೂರಿನಲ್ಲಿ ಒಂದೇ ದಿನ 3 ಶಿಕ್ಷಕರು ಕೊರೊನಾದಿಂದ ನಿಧನ, 85 ಪೊಲೀಸರಿಗೆ ಸೋಂಕು ದೃಢ, 18 ಬಡಾವಣೆಗಳು ಹಾಟ್​ಸ್ಪಾಟ್

ಮದುವೆಗೆ ಹೋಗಲು ಕುದುರೆ ಏರಿ ಬಂದ ಯುವಕ! ಕುದುರೆಯ ಕಂಡು ಕೆ.ಆರ್.ಮಾರುಕಟ್ಟೆ ಪೊಲೀಸರು ಗಲಿಬಿಲಿ