ಮಂಗಳೂರು, ಜ.9: ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಟೋರಿಯಸ್ ರೌಡಿಶೀಟರ್ ಕಾಲಿಗೆ ಸಿಸಿಬಿ (CCB) ಪೊಲೀಸರು ಗುಂಡು ಹಾರಿಸಿ ಬಂಧಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ (Mangaluru) ಜೆಪ್ಪು ಕುಡ್ಪಾಡಿ ಬಳಿ ನಡೆದಿದೆ. ಬಂಧಿಸಲು ಮುಂದಾದಾಗ ಪೊಲೀಸರ ಮೇಲೆ ಚಾಕುವಿನಿಂದ ಹಲ್ಲೆಗೆ ಯತ್ನಿಸಿದಾಗ ಹಿನ್ನೆಲೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಮಲ್ಪೆಯಲ್ಲಿ ತನ್ನ ಸ್ನೇಹಿತನ ರೂಮ್ನಲ್ಲಿ ಶರಣ್ ನೆಲೆಸಿರುವ ಮಾಹಿತಿ ತಿಳಿದ ಸಿಸಿಬಿ ಪೊಲೀಸರು, ಕಾರ್ಯಾರಣೆ ನಡೆಸಿದ್ದಾರೆ. ಮಾಹಿತಿ ತಿಳಿದ ಶರಣ್, ಮಲ್ಪೆಯಿಂದ ತಪ್ಪಿಸಿಕೊಂಡಿದ್ದನು. ಈತನಿಗೆ ಆಶ್ರಯ ಕೊಟ್ಟ ಸ್ನೇಹಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಸಿಸಿಬಿ ಪೊಲೀಸರಿಗೆ ಶರಣ್ ಬಿಳಿ ಬಣ್ಣದ ಐ10 ಕಾರಿನಲ್ಲಿ ತೆರಳಿದ್ದಾಗಿ ತಿಳಿದುಬಂದಿದೆ.
ಇದನ್ನೂ ಓದಿ: ಮಂಗಳೂರು ಮೂಡಾ ಆಯುಕ್ತರ ವಿರುದ್ಧ ಮಹಿಳಾ ಉದ್ಯೋಗಿಯಿಂದ ಲೈಂಗಿಕ ದೌರ್ಜನ್ಯ ಆರೋಪ: ದೂರು ದಾಖಲು
ಬಳಿಕ ಹೆಜಮಾಡಿ ಟೋಲ್ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿ ಶರಣ್ನನ್ನು ಚೇಸ್ ಮಾಡಿದಾಗ ಮಂಗಳೂರಿನ ಪಂಪ್ ವೆಲ್ ಬಳಿ ಪೊಲೀಸರ ಕಣ್ಣಿಗೆ ಬಿದ್ದಿದ್ದಾನೆ. ಇಲ್ಲಿಂದಲೂ ಕಾರು ಮೂಲಕ ತಪ್ಪಿಸಿಕೊಂಡ ಶರಣ್, ಜೆಪ್ಪು ಕುಡುಪಾಡಿ ರಸ್ತೆಯ ಖಾಸಗಿ ಜಾಗದಲ್ಲಿ ಕಾರು ನಿಲ್ಲಿಸಿದಾಗ ಎಂಟು ಸಿಸಿಬಿ ಪೊಲೀಸರು ಸುತ್ತವರಿದಿದ್ದಾರೆ.
ಈ ವೇಳೆ ಹಿಡಿಯಲು ಬಂದ ಕಾನ್ಸ್‌ಟೇಬಲ್ ಪ್ರಕಾಶ್ ಮೇಲೆ ಶರಣ್ ಚೂರಿಯಿಂದ ದಾಳಿ ನಡೆಸಿದಾಗ ಸಿಬ್ಬಂದಿ ಪ್ರಾಣ ರಕ್ಷಣೆಗಾಗಿ ಪಿಎಸ್ಐ ಸುದೀಪ್ ಅವರು ಶರಣ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ ಕುಸಿದುಬಿದ್ದ ಶರಣ್ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳದಲ್ಲಿ ಫಾರೆನ್ಸಿಕ್ ತಜ್ಞರಿಂದ ಪರಿಶೀಲನೆ ನಡೆಸಲಾಗಿದ್ದು, ಆಸ್ಪತ್ರೆಗೆ ಭೇಟಿ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಸಿಸಿಬಿ ಪೊಲೀಸರಿಂದ ಮಾಹಿತಿ ಪಡೆದಿದ್ದಾರೆ. ಶರಣ್ ವಿರುದ್ಧ ಕೊಲೆ, ಕೊಲೆ ಯತ್ನ, ಪೋಕ್ಸೋ ಸೇರಿದಂತೆ 21ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ