ಮಂಗಳೂರು: ಬೆಳೆಗಾರರಿಗೆ ಬಂಪರ್, ರಬ್ಬರ್ ಬೆಲೆ 12 ವರ್ಷಗಳ ನಂತರ ಗರಿಷ್ಠ ಮಟ್ಟದಲ್ಲಿ ಹೆಚ್ಚಳ

|

Updated on: Aug 23, 2024 | 3:03 PM

ರಬ್ಬರ್​​ ಬೆಲೆ 12 ವರ್ಷಗಳಲ್ಲೇ ಗರಿಷ್ಠ ಮಟ್ಟ ತಲುಪಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ರಬ್ಬರ್ ಬೆಳೆಗಾರರು ಖುಷಿಪಡುವಂತೆ ಮಾಡಿದೆ. ನೆರೆಯ ಕೇರಳದ ಕಾಸರಗೋಡು ಸೇರಿದಂತೆ ಕೇರಳದ ಬಹುತೇಕ ಪ್ರದೇಶಗಳಲ್ಲಿ ರಬ್ಬರ್ ಗರಿಷ್ಠ ಬೆಲೆಗೆ ಮಾರಾಟವಾಗುತ್ತಿದೆ. ಈಗೆಷ್ಟಿದೆ ರಬ್ಬರ್ ಬೆಲೆ? ಮಾರುಕಟ್ಟೆ ಮೂಲಗಳು ಹೇಳುವುದೇನು ಎಂಬ ವಿವರ ಇಲ್ಲಿದೆ.

ಮಂಗಳೂರು: ಬೆಳೆಗಾರರಿಗೆ ಬಂಪರ್, ರಬ್ಬರ್ ಬೆಲೆ 12 ವರ್ಷಗಳ ನಂತರ ಗರಿಷ್ಠ ಮಟ್ಟದಲ್ಲಿ ಹೆಚ್ಚಳ
ಸಾಂದರ್ಭಿಕ ಚಿತ್ರ
Follow us on

ಮಂಗಳೂರು, ಆಗಸ್ಟ್​​ 23: ದಕ್ಷಿಣ ಕನ್ನಡ ಜಿಲ್ಲೆಯ ರಬ್ಬರ್ ಬೆಳೆಗಾರರಿಗೆ ಭರ್ಜರಿ ಗುಡ್ ನ್ಯೂಸ್ ದೊರೆತಿದೆ. ರಬ್ಬರ್ ಬೆಲೆ 12 ವರ್ಷಗಳ ನಂತರ ದಾಖಲೆಯ ಗರಿಷ್ಠ ಮಟ್ಟ ತಲುಪಿದೆ. ರಬ್ಬರ್ ಬೋರ್ಡ್ ಕೆಜಿಗೆ 235 ರೂ. ಬೆಲೆ ನಿಗದಿಪಡಿಸಿದೆ. ಆದಾಗ್ಯೂ, ಕಾಸರಗೋಡು ಸೇರಿದಂತೆ ಕೇರಳದ ಬಹುತೇಕ ಪ್ರದೇಶಗಳಲ್ಲಿ 237 ರಿಂದ 241 ರೂ.ಗಳಿಗೆ ಮಾರಾಟವಾಗುತ್ತಿದೆ. ಕೆಲವು ವ್ಯಾಪಾರಿಗಳು 241 ರೂ.ಗೆ ಮಾರಾಟ ಮಾಡಿದ್ದಾರೆ. 2011-12ರಲ್ಲಿ ರಬ್ಬರ್ ಶೀಟ್‌ಗಳ ಬೆಲೆ ಕಿಲೋಗೆ 283 ರೂ. ತಲುಪಿತ್ತು.

ಬೆಲೆ ಹೆಚ್ಚಳಕ್ಕೆ ಕಾರಣವೇನು?

ಅತಿವೃಷ್ಟಿ ಹಾಗೂ ಹವಾಮಾನ ವೈಪರೀತ್ಯದಿಂದ ಮಾರುಕಟ್ಟೆಯಲ್ಲಿ ರಬ್ಬರ್ ಕೊರತೆ ಉಂಟಾಗಿದೆ. ಕಳೆದ ಕೆಲವು ದಿನಗಳಿಂದ ಕೆಜಿಗೆ 2 ರಿಂದ 3 ರೂ. ಬೆಲೆ ಏರಿಕೆಯಾಗಿದೆ. ಇದಕ್ಕೆ ಮುಖ್ಯ ಕಾರಣ ಪೂರೈಕೆ ಕೊರತೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ಸದ್ಯದ ಪರಿಸ್ಥಿತಿ ಮುಂದುವರಿದರೆ ಒಂದು ವಾರದಲ್ಲಿ ಕಿಲೋಗೆ 250 ರೂ. ತಲುಪಬಹುದು ಎಂದು ಮೂಲಗಳು ಅಂದಾಜಿಸಿವೆ.

ನೈಸರ್ಗಿಕ ರಬ್ಬರ್​ಗೇ ಏಕೆ ಹೆಚ್ಚು ಬೇಡಿಕೆ?

ದೇಶೀಯ ಮಾರುಕಟ್ಟೆಯಲ್ಲಿ ರಬ್ಬರ್ ಬೆಲೆ ಹೆಚ್ಚಾದಾಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗುವುದು ಸಾಮಾನ್ಯ. ಆದರೆ, ಈಗಿನ ಪರಿಸ್ಥಿತಿ ಭಿನ್ನವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಬ್ಬರ್ ಬೆಲೆಗಳು ಭಾರತದ ರಬ್ಬರ್ ಬೆಲೆಗಿಂತ 50 ರೂ.ನಷ್ಟು ಕಡಿಮೆ ಇದೆ. ಬ್ಯಾಂಕಾಕ್‌ನಲ್ಲಿ ಆರ್‌ಎಸ್‌ಎಸ್ 4 ಗ್ರೇಡ್​​ನ ನೈಸರ್ಗಿಕ ರಬ್ಬರ್‌ ದರ 200 ರೂ.ಗೆ ತಲುಪಿದೆ. ವಿದ್ಯುತ್ ವಾಹನಗಳಿಗೆ ಟೈರ್ ತಯಾರಿಸಲು ಹೆಚ್ಚಾಗಿ ನೈಸರ್ಗಿಕ ರಬ್ಬರ್ ಅನ್ನೇ ಬಳಸಲಾಗುತ್ತಿದೆ. ಇದು ಬೇಡಿಕೆ ಮತ್ತು ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಕೈ ಎಂಎಲ್​ಸಿ ಐವನ್ ಡಿಸೋಜಾಗೆ ಸಂಕಷ್ಟ: ಜನಪ್ರತಿನಿಧಿಗಳ ಕೋರ್ಟ್​ ಮೆಟ್ಟಿಲೇರಲು ನಿರ್ಧರಿಸಿದ ಬಿಜೆಪಿ

ಈ ಮಧ್ಯೆ, ಮುಂಗಾರು ನಂತರ ರಬ್ಬರ್ ಟ್ಯಾಪಿಂಗ್ ಹೆಚ್ಚು ಸಕ್ರಿಯವಾದರೆ ಮುಂದಿನ ದಿನಗಳಲ್ಲಿ ಕೈಗಾರಿಕೋದ್ಯಮಿಗಳು ಬೆಲೆ ತಗ್ಗಿಸಲು ರಬ್ಬರ್ ಖರೀದಿಯನ್ನು ನಿಲ್ಲಿಸಬಹುದು ಎಂದು ರಬ್ಬರ್ ವ್ಯಾಪಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕಾಳಜಿಯಿಂದ ಚಿಲ್ಲರೆ ವ್ಯಾಪಾರಿಗಳು ಹೆಚ್ಚಿನ ದಾಸ್ತಾನು ಇಟ್ಟುಕೊಳ್ಳುತ್ತಿಲ್ಲ. ಭಾರತದ ಕೆಲವು ಬಂದರುಗಳ ಮೂಲಕ ರಬ್ಬರ್ ಆಮದು ಮಾಡಿಕೊಳ್ಳಲಾಗುತ್ತಿದೆ ಎಂಬ ವರದಿಗಳೂ ಇವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ