
ಮಂಗಳೂರು, ಸೆಪ್ಟೆಂಬರ್ 28: ಮಕ್ಕಳಿಂದ ಹಿಡಿದು ಹದಿಹರೆಯದವರವರೆಗೂ ಪರೀಕ್ಷೆಯ ಸಮಯದಲ್ಲಿ ಎಲ್ಲರೂ ಒತ್ತಡಕ್ಕೆ ಒಳಗಾಗುತ್ತಾರೆ. ಈ ಸಮಯದಲ್ಲಿ ಶಿಕ್ಷಕರು ಅಥವಾ ತಜ್ಞರು ಪರೀಕ್ಷಾ ಒತ್ತಡ ಮತ್ತು ಸಮಯ ನಿರ್ವಹಣೆ ಕುರಿತು ಉಪನ್ಯಾಸ ನೀಡುವುದು ಸಾಮಾನ್ಯ. ಆದರೆ, ತನ್ನದೇ ವಯಸ್ಸಿನ ಸಹಪಾಠಿಗಳ ಪರೀಕ್ಷಾ ಭಯವನ್ನು ಹೋಗಲಾಡಿಸಲು 15 ವರ್ಷದ ಹುಡುಗಿಯೊಬ್ಬಳು ಅಭಿಯಾನಕ್ಕಿಳಿದು ಸಾಧನೆ ಮಾಡಿರುವುದು ಅಪರೂಪದ ಸಂಗತಿ. ಮೂಡುಬಿದಿರೆಯ ಆಳ್ವಾಸ್ ಸೆಂಟ್ರಲ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ವಿಷ್ಣುಪ್ರಿಯಾ ಪೈ, 15 ದಿನಗಳಲ್ಲಿ 51 ಶಾಲೆಗಳಿಗೆ ಭೇಟಿ ನೀಡಿ ಸುಮಾರು 4,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ದಾರಿದೀಪವಾಗುವ ಮೂಲಕ ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಪುಟಕ್ಕೆ ಸೇರಿದ್ದಾರೆ.
ವಿಷ್ಣುಪ್ರಿಯಾಗೆ 6ನೇ ತರಗತಿಯಲ್ಲಿದ್ದಾಗಲೇ ಮಾನಸಿಕ ಆರೋಗ್ಯ, ಕೌನ್ಸೆಲಿಂಗ್ ಹಾಗೂ ಸೈಕಾಲಜಿ ವಿಷಯಗಳಲ್ಲಿ ತೀವ್ರ ಆಸಕ್ತಿ ಮೂಡಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ‘ಇಂಡಿಯನ್ ಕೌನ್ಸೆಲಿಂಗ್ ಸರ್ವಿಸಸ್’ ಮೂಲಕ ಆನ್‌ಲೈನ್ ಕೋರ್ಸ್‌ಗಳನ್ನು ಪೂರೈಸಿ ಜ್ಞಾನ ಹೆಚ್ಚಿಸಿಕೊಂಡಿದ್ದಾಳೆ. ತಾನು ಕಲಿತ ಸೈಕಾಲಜಿ ವಿಚಾರಗಳನ್ನು ಪುಸ್ತಕಕ್ಕೆ ಸೀಮಿತಗೊಳಿಸದೆ, ತನ್ನಂತೆಯೇ ಪರೀಕ್ಷೆಯ ಆತಂಕ ಎದುರಿಸುವ ಸಾವಿರಾರು ವಿದ್ಯಾರ್ಥಿಗಳಿಗೆ ತಲುಪಿಸಲು ನಿರ್ಧರಿಸಿದಳು.
ಆಗಸ್ಟ್ 24 ರಿಂದ ಸೆಪ್ಟೆಂಬರ್ 11 ರವರೆಗೆ ನಡೆಸಿದ ಈ ಮಹತ್ತ್ವದ ಜಾಗೃತಿ ಅಭಿಯಾನದಲ್ಲಿ ವಿಷ್ಣುಪ್ರಿಯಾ ಕರ್ನಾಟಕದ ಹಾಸನ, ಕೊಡಗು, ಬೆಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ 51 ಶಾಲೆಗಳಿಗೆ ಭೇಟಿ ನೀಡಿದ್ದಾಳೆ. ಪ್ರತಿದಿನ 1 ಗಂಟೆಯ ಕಾರ್ಯಾಗಾರ ನಡೆಸಿ, ಪರೀಕ್ಷಾ ಒತ್ತಡವನ್ನು ನಿರ್ವಹಿಸುವುದು ಹೇಗೆ?, ಸಮಯ ನಿರ್ವಹಣೆ, ಸುಲಭ ಅಧ್ಯಯನ ತಂತ್ರಗಳು ಹಾಗೂ ಪರೀಕ್ಷೆಗೆ ಸಿದ್ಧರಾಗುವ ವೈಜ್ಞಾನಿಕ ವಿಧಾನಗಳನ್ನು ಅತ್ಯಂತ ಸರಳವಾಗಿ ವಿದ್ಯಾರ್ಥಿಗಳಿಗೆ ವಿವರಿಸಿದ್ದಾಳೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ವಿಷ್ಣುಪ್ರಿಯಾ ಅವರ ಈ ಸಮಾಜಮುಖಿ ಹಾಗೂ ಶೈಕ್ಷಣಿಕ ಸಾಹಸವನ್ನು ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಸಂಸ್ಥೆಯು ಹತ್ತಿರದಿಂದ ವೀಕ್ಷಿಸಿ ವಿಶ್ವ ದಾಖಲೆಯಾಗಿ ಗುರುತಿಸಿದೆ. ಅಕ್ಟೋಬರ್ 1 ರಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರ ಉಪಸ್ಥಿತಿಯಲ್ಲಿ ಈ ವಿಶ್ವ ದಾಖಲೆಯ ಅಧಿಕೃತ ಪ್ರಮಾಣಪತ್ರವನ್ನು ಹಸ್ತಾಂತರಿಸಲಾಗುವುದು. ವಿದ್ಯಾರ್ಥಿ ಹಂತದಲ್ಲೇ ಸಹ-ವಿದ್ಯಾರ್ಥಿಗಳ ಮಾನಸಿಕ ಸಿದ್ಧತೆಗೆ ನೆರವಾದ ವಿಷ್ಣುಪ್ರಿಯಾ ಅವರ ಈ ವಿಶಿಷ್ಟ ಪ್ರಯತ್ನಕ್ಕೆ ರಾಜ್ಯಾದ್ಯಂತ ಶ್ಲಾಘನೆ ವ್ಯಕ್ತವಾಗುತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:48 am, Mon, 28 September 26