ದಕ್ಷಿಣ ಕನ್ನಡ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಕರಾವಳಿಯ ಕಡಲು ಕೊಂಚ ಪ್ರಕ್ಷುಬ್ಧಗೊಂಡಿದೆ. ಆದರೂ ಈ ದೈತ್ಯ ಅಲೆಗಳ ಎದುರು ಸೆಣಸಾಡೋದು ಇಲ್ಲಿನ ಮೀನುಗಾರರಿಗೆ ಮಾಮೂಲಿ ವಿಷಯ. ಆದರೆ ನಿನ್ನೆ ಮಾತ್ರ ಮೀನುಗಾರಿಕೆಗೆ ಹೊರಟ ಆ ಐವರ ಹಣೆ ಬರಹವೇ ಬೇರೆಯಾಗಿತ್ತು. ಕಡಲಿನ ಅಬ್ಬರಕ್ಕೆ ಓರ್ವ ಸಮುದ್ರ ಪಾಲಾದರೆ, ಉಳಿದವರು ಅಕ್ಷರಶಃ ಸಾವನ್ನೇ ಗೆದ್ದು ಬಂದಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಮಂಗಳೂರಿನ ಕಡಲ ತೀರಕ್ಕೂ ಸಣ್ಣದಾಗಿ ತಟ್ಟಿದೆ. ಹೀಗಾಗಿ ಮಂಗಳೂರಿನ ಕಡಲ ತೀರ ಎಂದಿಗಿಂತ ಕೊಂಚ ಪ್ರಕ್ಷುಬ್ದಗೊಂಡಿದ್ದು, ಭಾರೀ ಗಾತ್ರದ ಅಲೆಗಳ ಅಬ್ಬರವಿದೆ. ಆದರೆ ಈ ನಡುವೆಯೂ ಮೀನುಗಾರಿಕೆಯನ್ನೇ ನಂಬಿ ಜೀವನ ನಡೆಸುವ ಮೀನುಗಾರರು ನಿತ್ಯ ಕಡಲಿಗೆ ಇಳಿಯುವುದು ಅನಿವಾರ್ಯ. ಅದರಂತೆ ಮಂಗಳೂರಿನ ತಣ್ಣೀರುಬಾವಿ ಸಮುದ್ರ ತೀರದ ಕೆಲವೇ ಮೀಟರ್ ಅಂತರದಲ್ಲಿ ನಿತ್ಯ ಮೀನುಗಾರಿಕೆ ನಡೆಸುವ ಮೀನುಗಾರರು ಅಲೆಗಳ ಅಬ್ಬರದ ಮಧ್ಯೆಯೂ ಮೀನುಗಾರಿಕೆಗೆ ತೆರಳಿದ್ದಾರೆ.
ಮೊನ್ನೆ ತಡರಾತ್ರಿಯವರೆಗೂ ಐವರು ಮೀನುಗಾರರು ಸಮುದ್ರದಲ್ಲಿ ಬಲೆ ಹಾಕಿ ಮತ್ತೆ ತೀರಕ್ಕೆ ವಾಪಾಸ್ ಬಂದಿದ್ದಾರೆ. ಅದರಂತೆ ನಿನ್ನೆ ಬೆಳ್ಳಂಬೆಳಿಗ್ಗೆ ದೋಣಿಯಲ್ಲಿ ಮತ್ತೆ ಕಡಲಿಗೆ ಇಳಿದಿದ್ದು, ನಿನ್ನೆ ರಾತ್ರಿ ಹಾಕಿದ್ದ ಬಲೆ ಎಳೆಯಲು ಮುಂದಾಗಿದ್ದಾರೆ. ಆದರೆ ಈ ವೇಳೆ ಕಡಲಿನ ಅಬ್ಬರ ಜೋರಾಗಿದ್ದು, ಭಾರೀ ಗಾತ್ರದ ಅಲೆಗಳು ಒಂದೇ ಸಮನೇ ಈ ಐವರಿದ್ದ ದೋಣಿಗೆ ಬಂದು ಬಡಿದಿದೆ. ಪರಿಣಾಮ ದೋಣಿ ಚಾಲಕ ಶರೀಫ್ ಮೋಟಾರ್ ತಿರುಗಿಸುವಷ್ಟರಲ್ಲಿ ಸಮುದ್ರಕ್ಕೆ ಬಿದ್ದಿದ್ದಾನೆ. ಈ ವೇಳೆ ಮತ್ತೆ ಅಲೆ ಬಂದು ಬಡಿದ ಪರಿಣಾಮ ಇಡೀ ದೋಣಿಯೇ ಮಗುಚಿ ಬಿದ್ದಿದ್ದು, ದೋಣಿಯಲ್ಲಿದ್ದ ಅಬ್ದುಲ್ ಅಜೀಜ್, ಇಂತಿಯಾಜ್, ಸಿನಾನ್, ಫೈರೋಜ್ ಕೂಡ ಸಮುದ್ರಕ್ಕೆ ಬಿದ್ದಿದ್ದಾರೆ.
ಈಜು ಗೊತ್ತಿದ್ದ ಕಾರಣ ಅಲೆಗಳ ಮಧ್ಯೆ ಕೆಲ ಹೊತ್ತು ಸೆಣೆಸಾಟ ನಡೆಸಿದ್ದಾರೆ. ಬಳಿಕ ಸಮುದ್ರದ ದಡದಲ್ಲಿದ್ದ ಇತರೆ ಮೀನುಗಾರರು ಇದನ್ನು ಗಮನಿಸಿದ್ದು, ಟ್ಯೂಬ್ ಮತ್ತು ಹಗ್ಗ ಹಿಡಿದು ಸಮುದ್ರಕ್ಕೆ ಹಾರಿ ಈ ನಾಲ್ವರನ್ನು ರಕ್ಷಿಸಿ ದಡಕ್ಕೆ ತಂದಿದ್ದಾರೆ. ಆದರೆ ಮೊದಲೇ ನೀರಿಗೆ ಬಿದ್ದಿದ್ದ ಶರೀಫ್ ನಾಪತ್ತೆಯಾಗಿದ್ದು, ರಾತ್ರಿ ಇವರೇ ಹಾಕಿ ಬಂದಿರೋ ಬಲೆಗೆ ಸಿಲುಕಿ ಈಜಲು ಸಾಧ್ಯವಾಗದೇ ಮೃತಪಟ್ಟಿರುವ ಸಾಧ್ಯತೆಯಿದೆ.
ಇನ್ನು ತಣ್ಣೀರುಬಾವಿ ಕಡಲ ಕಿನಾರೆಯ ಕೆಲವೇ ಮೀಟರ್ಗಳ ಕಣ್ಣಳತೆ ದೂರದಲ್ಲಿ ಈ ಘಟನೆ ನಡೆದಿದ್ದು, ಇವರೆಲ್ಲರೂ ಸಾಂಪ್ರದಾಯಿಕ ಮೀನುಗಾರಿಕಾ ವೃತ್ತಿ ನಡೆಸುವವರು. ಆಳ ಸಮುದ್ರಕ್ಕೆ ತೆರಳದೇ ಸಣ್ಣ ದೋಣಿಗಳ ಮೂಲಕ ಮೀನುಗಾರಿಕೆ ನಡೆಸುವ ಇವರೆಲ್ಲರೂ ಈಜು ಪರಿಣಿತಿ ಇದ್ದರೂ ಅಲೆಗಳ ಅಬ್ಬರಕ್ಕೆ ಅಕ್ಷರಶಃ ನಲುಗಿ ಹೋಗಿದ್ದಾರೆ. ಇನ್ನು ಬೆಳಿಗ್ಗೆ 6.30 ರಿಂದ 7 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, ತಕ್ಷಣ ಸ್ಥಳೀಯ ಮೀನುಗಾರರು ಕೋಸ್ಟ್ ಗಾರ್ಡ್ ಹಾಗೂ ಕರಾವಳಿ ತಟ ರಕ್ಷಣಾ ಪಡೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೀನುಗಾರರ ರಕ್ಷಣೆಗೆ ಮುಂದಾಗದ ಕೋಸ್ಟ್ ಗಾರ್ಡ್ ವಿರುದ್ದ ಮೀನುಗಾರರು ಕಿಡಿ
ಶರೀಫ್ ರಕ್ಷಣೆ ಮಾಡುವಂತೆ ಕೋಸ್ಟ್ ಗಾರ್ಡ್ ಬಳಿಯೂ ಮನವಿ ಮಾಡಿದ್ದಾರೆ. ಆದರೆ ಘಟನೆ ನಡೆದು ಐದಾರು ಘಂಟೆಗಳೇ ಕಳೆದರೂ ಕೋಸ್ಟ್ ಗಾರ್ಡ್ ಹಾಗೂ ಕರಾವಳಿ ರಕ್ಷಣಾ ಪಡೆ ಅತ್ತ ಸುಳಿಯದೇ ಇರೋದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಕೋಸ್ಟ್ ಗಾರ್ಡ್ ಸೆಂಟರ್ ಘಟನೆ ನಡೆದ ಸ್ಥಳದಿಂದ ಕೆಲವೇ ಮೀಟರ್ ದೂರದಲ್ಲಿ ಇದ್ದರೂ ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಣಾ ಕಾರ್ಯಕ್ಕೆ ಮುಂದಾಗಿಲ್ಲ. ಅಲ್ಲದೇ ರಾಜ್ಯದ ಕರಾವಳಿ ತಟರಕ್ಷಣಾ ಪಡೆ ಕೂಡ ಸ್ಥಳಕ್ಕೆ ಬಾರದೇ ಇರುವ ಪರಿಣಾಮ ಸಾವಿರಾರು ಜನರು ಮತ್ತು ಸ್ಥಳೀಯ ಮೀನುಗಾರರು ಸ್ಥಳದಲ್ಲಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶರೀಫ್ ನೀರಿಗೆ ಬಿದ್ದ ಬಳಿಕವೂ ಕೆಲ ಕಾಲ ಈಜಿ ಪ್ರಾಣ ಉಳಿಸಿಕೊಳ್ಳಲು ಹೋರಾಡಿದ್ದು, ಈ ವೇಳೆ ಕೋಸ್ಟ್ ಗಾರ್ಡ್ ಬೋಟ್ ಆಗಮಿಸಿದ್ದಲ್ಲಿ ಆತನೂ ಬದುಕ್ತಿದ್ದ. ಆಧುನಿಕ ತಂತ್ರಜ್ಞಾನ ಹಾಗೂ ಸುಧಾರಿತ ಬೋಟ್ ವ್ಯವಸ್ಥೆ ಇದ್ದರೂ ಕೋಸ್ಟ್ ಗಾರ್ಡ್ ಸಮುದ್ರದಲ್ಲಿ ಮೀನುಗಾರರ ರಕ್ಷಣೆ ಕೆಲಸ ಮಾಡುತ್ತಿಲ್ಲ. ಸರ್ಕಾರದ ಕೋಟಿ ಕೋಟಿ ಹಣ ತಿಂದು ತೇಗುವ ಕೆಲಸವಷ್ಡೇ ಮಾಮಾಡುತ್ತಿದೆ. ಅಲೆಗಳ ಅಬ್ಬರ ಜೋರಾಗಿದ್ದ ಕಾರಣ ಘಟನೆ ನಡೆದ ಹಲವು ಗಂಟೆ ಬಳಿಕವೂ ಸ್ಥಳೀಯ ಮೀನುಗಾರರಿಗೆ ಹುಡುಕಾಟ ಸಾಧ್ಯವಾಗಿಲ್ಲ. ಹೀಗಿದ್ದರೂ ಕೋಸ್ಡ್ ಗಾರ್ಡ್ ಆಗಲೀ ಕರಾವಳಿ ತಟ ರಕ್ಷಣಾ ಪಡೆಯಾಗಲೀ ಸ್ಥಳಕ್ಕೆ ಬಂದಿಲ್ಲ. ಈ ಬಗ್ಗೆ ಸ್ಥಳೀಯರು ದ.ಕ ಜಿಲ್ಲಾಧಿಕಾರಿಗೂ ದೂರು ನೀಡಿದ್ದಾರೆ ಎಂದು ಸ್ಥಳೀಯ ಕಾರ್ಪೊರೇಟರ್ ಮುನೀಬ್ ಬೆಂಗ್ರೆ ತಿಳಿಸಿದ್ದಾರೆ.
ಒಟ್ಟಾರೆ ಮೀನುಗಾರಿಕೆಯನ್ನೇ ನಂಬಿ ಬದುಕುವ ಮೀನುಗಾರನೊಬ್ಬ ಕಡಲಿನ ಅಬ್ಬರಕ್ಕೆ ಬಲಿಯಾಗಿದ್ದಾನೆ. ಉಳಿದವರು ಪ್ರಾಣ ಉಳಿಸಿಕೊಂಡು ದಡ ಸೇರಿದ್ದಾರೆ. ಆದರೆ ಕಡಲ ಮಕ್ಕಳ ರಕ್ಷಣೆಗಾಗಿ ಇರುವ ಕೋಸ್ಟ್ ಗಾರ್ಡ್ ನಂಥಹ ವ್ಯವಸ್ಥೆಯ ನಿರ್ಲಕ್ಷ್ಯ ಜನರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ವರದಿ: ಪೃಥ್ವಿರಾಜ್ ಬೊಮ್ಮನಕೆರೆ
ಇದನ್ನೂ ಓದಿ:
ಬಂಡೆಗೆ ಡಿಕ್ಕಿ ಹೊಡೆದ ನಾಡದೋಣಿ ಮುಳುಗಡೆ.. ಮೂವರು ಮೀನುಗಾರರು ನಾಪತ್ತೆ
ಕೇರಳದ ಕೊಲ್ಲಂನಲ್ಲಿ ದೋಣಿ ಮುಳುಗಿ 4 ಮೀನುಗಾರರು ಸಾವು; 12 ಜನರ ರಕ್ಷಣೆ