ಪ್ರವೀಣ್ ನೆಟ್ಟಾರು ಕನಸಿನ ಮನೆ ಸಿದ್ದ: ನಾಳೆ ನೆರವೇರಲಿದೆ ನೂತನ ಮನೆಯ ಗೃಹ ಪ್ರವೇಶ

|

Updated on: Apr 26, 2023 | 5:53 PM

ಕಳೆದ ವರ್ಷ ಕೊಲೆಯಾದ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ, ಹಿಂದೂ ಕಾರ್ಯಕರ್ತ ಬೆಳ್ಳಾರೆಯ ಪ್ರವೀಣ್‌ ನೆಟ್ಟಾರು ಕನಸಿನ ಮನೆ ಸಿದ್ಧವಾಗಿದ್ದು, ನಾಳೆ ನೂತನ ಮನೆಯ ಗೃಹ ಪ್ರವೇಶ ನೆರವೇರಲಿದೆ.

ಪ್ರವೀಣ್ ನೆಟ್ಟಾರು ಕನಸಿನ ಮನೆ ಸಿದ್ದ: ನಾಳೆ ನೆರವೇರಲಿದೆ ನೂತನ ಮನೆಯ ಗೃಹ ಪ್ರವೇಶ
ಪ್ರವೀಣ್ ನೆಟ್ಟಾರು ಹೊಸ ಮನೆ
Follow us on

ಮಂಗಳೂರು: ಕಳೆದ ವರ್ಷ ಕೊಲೆಯಾದ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿ, ಹಿಂದೂ ಕಾರ್ಯಕರ್ತ ಬೆಳ್ಳಾರೆಯ ಪ್ರವೀಣ್‌ ನೆಟ್ಟಾರು (Praveen Nettaru) ಕನಸಿನ ಮನೆ ಸಿದ್ಧವಾಗಿದ್ದು, ನಾಳೆ ನೂತನ ಮನೆಯ ಗೃಹ ಪ್ರವೇಶ ನೆರವೇರಲಿದೆ. ಜಿಲ್ಲಾ ಬಿಜೆಪಿ ವತಿಯಿಂದ ಸುಳ್ಯ ತಾಲೂಕಿನ ನೆಟ್ಟಾರುವಿನಲ್ಲಿ ಐದೇ ತಿಂಗಳಲ್ಲಿ ವಿಶಾಲವಾದ ಸುಂದರ ಮನೆ ನಿರ್ಮಾಣವಾಗಿದೆ. 70 ಲಕ್ಷ ವೆಚ್ಚದಲ್ಲಿ, 2,800 ಚದರಡಿ ವಿಸ್ತೀರ್ಣದಲ್ಲಿ ಮನೆ‌‌ ನಿರ್ಮಾಣ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯ ನೆಟ್ಟಾರುವಿನಲ್ಲಿ 2022ರ ನವೆಂಬರ್ 2ರಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಗುದ್ದಲಿಪೂಜೆ ನೆರವೇರಿಸಿದ್ದರು. ಈ ಮೂಲಕ ಹತ್ಯೆಯಾದ ಕಾರ್ಯಕರ್ತನ ಕುಟುಂಬದ ಪರ ನಿಂತಿದ್ದೇವೆ ಎಂದು ಬಿಜೆಪಿ ಸಂದೇಶ ಸಾರಲಿದೆ.

ಪ್ರವೀಣ್ ಪತ್ನಿಗೆ ಸರ್ಕಾರಿ ಉದ್ಯೋಗ

ಪ್ರವೀಣ್ ಪತ್ನಿಗೆ ಸದ್ಯ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ‌ಕಚೇರಿಯಲ್ಲಿ ಸರ್ಕಾರಿ ಉದ್ಯೋಗ ನೀಡಲಾಗಿದೆ. ಜುಲೈ 26 ರಂದು ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯಾಗಿತ್ತು. ಪ್ರವೀಣ್ ಹತ್ಯೆ ಬಳಿಕ ತೀವ್ರ ಮುಜುಗರಕ್ಕೆ ಈಡಾಗಿದ್ದ ಬಿಜೆಪಿ‌ ನಾಯಕರು ಸದ್ಯ ಈಗ ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾಗಿದ್ದಾರೆ.

ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಕನಸಿನ ಮನೆಗೆ ಮುಹೂರ್ತ ಫಿಕ್ಸ್; ಚುನಾವಣೆಗೆ ಹೊಸ ಅಸ್ತ್ರ ಪ್ರಯೋಗಕ್ಕೆ ಮುಂದಾದ ಬಿಜೆಪಿ

ದುಷ್ಕರ್ಮಿಗಳಿಂದ ಬಿಜೆಪಿ ಯುವ ಮುಖಂಡ ಪ್ರವೀಣ್​ ನೆಟ್ಟಾರ್​ ಹತ್ಯೆ

2022 ಜುಲೈ‌ 26 ರಂದು ದುಷ್ಕರ್ಮಿಗಳಿಂದ ಬಿಜೆಪಿ ಯುವ ಮುಖಂಡ ಪ್ರವೀಣ್​ ನೆಟ್ಟಾರ್​ ಹತ್ಯೆಗೀಡಾಗಿದ್ದ. ಘಟನೆ ಬಳಿಕ ಬಿಜೆಪಿ ಸರ್ಕಾರದ ವಿರುದ್ಧ ಹಿಂದೂ ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಜನಪ್ರತಿನಿಧಿಗಳ ಕಾರ್ಯಕರ್ತರು ವಿರುದ್ಧ ಸಮರ ಸಾರಿದ್ದರು. ಕಾರ್ಯಕರ್ತರ ಆಕ್ರೋಶದಿಂದ ಬಿಜೆಪಿ ನಾಯಕರು ಮುಜುಗರಕ್ಕೆ ಒಳಗಾಗಿದ್ದರು.

ಇದನ್ನೂ ಓದಿ: ಪುತ್ತೂರು ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ ವಿಚಾರಣಾಧೀನ ಕೈದಿ, ಪ್ರವೀಣ್ ನೆಟ್ಟಾರು ಕೊಲೆ ಆರೋಪಿ

ಪ್ರವೀಣ್ ನೆಟ್ಟಾರ್ ಕುಟುಂಬ, ಕಾರ್ಯಕರ್ತರಿಗೆ ಸರ್ಕಾರ, ಬಿಜೆಪಿ ನಾಯಕರು ಸಾಂತ್ವನ ಹೇಳಿದ್ದರು. ಆ ಸಂದರ್ಭ ಪ್ರವೀಣ್ ನೆಟ್ಟಾರ್ ಕನಸಿನ ಮನೆ ನಿರ್ಮಾಣ ಕುರಿತು ಬಿಜೆಪಿ ಭರವಸೆ ನೀಡಿತ್ತು. ಸದ್ಯ ಕೊಟ್ಟ ಭರವಸೆಯನ್ನು‌ ಬಿಜೆಪಿ ಈಡೇರಿಸಿದೆ. ಪ್ರವೀಣ್ ನೆಟ್ಟಾರ್ ಸಮಾಧಿ ಬಳಿಯೇ ನೂತನ ಮನೆ ನಿರ್ಮಾಣ ಮಾಡಿದ್ದು, ಪ್ರವೀಣ ಹೆಸರಿನಲ್ಲೆ‌ ನಿರ್ಮಾಣ ಮಾಡಲಾಗಿದೆ. ನಾಳೆ ಅಧಿಕೃತವಾಗಿ ಪ್ರವೀಣ್ ಕುಟುಂಬಕ್ಕೆ ನೂತನ ಮನೆ ಹಸ್ತಾಂತರ ಮಾಡಲಾಗುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:53 pm, Wed, 26 April 23