9 ತಿಂಗಳ ಗರ್ಭಿಣಿಯಾಗಿದ್ದರೂ ಕಯಾದು ವೇಷ ಧರಿಸಿದ ರಂಗಸ್ಥಳದಲ್ಲಿ ಕುಣಿದ ದಿಶಾ ಶೆಟ್ಟಿ: ವೈರಲ್ ವಿಡಿಯೋಗೆ ನೆಟ್ಟಿಗರು ಫುಲ್ ಫಿದಾ

ದಿಶಾ ಸಿ. ಶೆಟ್ಟಿ, 9 ತಿಂಗಳ ಗರ್ಭಿಣಿಯಾಗಿದ್ದಾಗಲೂ ಯಕ್ಷಗಾನದ ಕಯಾದು ಪಾತ್ರ ಮಾಡಿ ಭಾರಿ ಮೆಚ್ಚುಗೆ ಗಳಿಸಿದ್ದಾರೆ. ಸುರತ್ಕಲ್‌ನಲ್ಲಿ ನಡೆದ ಅವರ ಈ ಪ್ರದರ್ಶನ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯಕ್ಷಗಾನ ನನ್ನ ರಕ್ತದಲ್ಲೇ ಇದೆ ಎಂಬ ದಿಶಾ ಅವರ ಮಾತು, ಕಲೆಯ ಮೇಲಿನ ಅವರ ಅಚಲ ಪ್ರೀತಿ ಮತ್ತು ಸಮರ್ಪಣಾ ಭಾವವನ್ನು ಎತ್ತಿ ತೋರಿಸುತ್ತದೆ. ಕರಾವಳಿಯ ಈ ಕಲಾವಿದೆಯು ಯಕ್ಷಗಾನಕ್ಕೆ ಸ್ಫೂರ್ತಿದಾಯಕ.

9 ತಿಂಗಳ ಗರ್ಭಿಣಿಯಾಗಿದ್ದರೂ ಕಯಾದು ವೇಷ ಧರಿಸಿದ ರಂಗಸ್ಥಳದಲ್ಲಿ ಕುಣಿದ ದಿಶಾ ಶೆಟ್ಟಿ: ವೈರಲ್ ವಿಡಿಯೋಗೆ ನೆಟ್ಟಿಗರು ಫುಲ್ ಫಿದಾ
ದಿಶಾ ಸಿ. ಶೆಟ್ಟಿ
Image Credit source:
Edited By:

Updated on: Oct 23, 2026 | 3:26 PM

ಮಂಗಳೂರು, ಅ.23: ದಕ್ಷಿಣ ಕನ್ನಡ ಜಿಲ್ಲೆಯೂ ನಾಡಿನ ಸಂಸ್ಕೃತಿ ಕಲಶದದ್ದಂತೆ, ಎಲ್ಲ ಕಲೆಗೂ ಅಲ್ಲಿ ಮಹತ್ವ ಇದೆ. ಅದರಲ್ಲೂ ಮಂಗಳೂರಿನ ಉಸಿರು ಯಕ್ಷಗಾನ. ಕರಾವಳಿಯ ಗಂಡುಕಲೆ ಯಕ್ಷಗಾನದ ಮೇಲಿನ ಅಪಾರ ಪ್ರೀತಿ ಮತ್ತು ಸಮರ್ಪಣಾ ಭಾವಕ್ಕೆ ಮಂಗಳೂರಿನ ಸುರತ್ಕಲ್‌ನಲ್ಲಿ ಅಪರೂಪದ ನಿದರ್ಶನವೊಂದು ಸಾಕ್ಷಿಯಾಗಿದೆ. 9 ತಿಂಗಳ ಗರ್ಭಿಣಿಯಾಗಿದ್ದಾಗಲೂ ರಂಗಸ್ಥಳವೇರಿ ‘ಕಯಾದು’ ಪಾತ್ರವನ್ನು ಅತ್ಯಂತ ನಯಮನೋಹರವಾಗಿ ಅಭಿನಯಿಸಿದ ಪ್ರಸಿದ್ಧ ಮಹಿಳಾ ಯಕ್ಷಗಾನ ಕಲಾವಿದೆ ದಿಶಾ ಸಿ. ಶೆಟ್ಟಿ (Disha C. Shetty) ಅವರ ವಿಡಿಯೋಗಳು ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಸಾರ್ವಜನಿಕರು ಹಾಗೂ ಯಕ್ಷಗಾನ ಪ್ರಿಯರಿಂದ ಮುಕ್ತಕಂಠದ ಶ್ಲಾಘನೆ ವ್ಯಕ್ತವಾಗುತ್ತಿದೆ.

ಇದು ಸಾಧನೆಯೂ ಅಲ್ಲ, ಟ್ರೆಂಡ್ ಸಹ ಅಲ್ಲ: ನನ್ನ ವೈಯಕ್ತಿಕ ಸಂತೋಷ ಅಷ್ಟೇ

ತಮ್ಮ ಈ ಸಾಹಸಮಯ ಅಭಿನಯದ ಕುರಿತು ಹೆಮ್ಮೆಯಿಂದ ಮಾತನಾಡಿರುವ ದಿಶಾ ಶೆಟ್ಟಿ, “ಇದನ್ನು ನಾನು ಯಾವುದೇ ದಾಖಲೆ, ಸಾಧನೆ ಅಥವಾ ಸಾಮಾಜಿಕ ಜಾಲತಾಣದ ಟ್ರೆಂಡ್ ಎಂದು ಪರಿಗಣಿಸುವುದಿಲ್ಲ. ಯಕ್ಷಗಾನ ಎಂಬುದು ನನ್ನ ರಕ್ತದಲ್ಲೇ ಉಸಿರಾಡುವ ಕಲೆ. ಒಂಬತ್ತನೇ ತಿಂಗಳಿನಲ್ಲೂ ರಂಗಸ್ಥಳವೇರಿ ಕಯಾದು ಪಾತ್ರ ಮಾಡಿದ್ದು ನನಗೆ ಸಿಕ್ಕ ಪೂರ್ಣ ವೈಯಕ್ತಿಕ ಆತ್ಮಸಂತೃಪ್ತಿ ಮತ್ತು ಸಂತೋಷ” ಎಂದು ಅತ್ಯಂತ ಸರಳವಾಗಿ ಪ್ರತಿಕ್ರಿಯಿಸಿದ್ದಾರೆ.

ಇಲ್ಲಿದೆ ನೋಡಿ ಇನ್ಸ್ಟಾ ಪೋಸ್ಟ್:

ಸೋಶಿಯಲ್​​ ಮೀಡಿಯಾದಲ್ಲಿ ನೆಟ್ಟಿಗರ ಮನಗೆದ್ದ ಅಕ್ಕ-ತಂಗಿ :

ಬಾಲ್ಯದಿಂದಲೇ ಯಕ್ಷಗಾನದ ವಾತಾವರಣದಲ್ಲೇ ಬೆಳೆದ ದಿಶಾ ಅವರಿಗೆ ತಾಯಿ ಪ್ರಮದಾ ಸಿ. ಶೆಟ್ಟಿ ಹಾಗೂ ಚಿಕ್ಕಮ್ಮಂದಿರು ಪ್ರೇರಣೆಯಾಗಿದ್ದರು. ನಾಟ್ಯಗುರುಗಳಾದ ರಕ್ಷಿತ್ ಪಾದ್ರೆ ಹಾಗೂ ರಾಕೇಶ್ ರೈ ಅಡ್ಕ ಅವರಿಂದ ಕಠಿಣ ನಾಟ್ಯ, ಅರ್ಥಗಾರಿಕೆ, ತಾಳ ಹಾಗೂ ಭಾವಾಭಿನಯದ ಶಾಸ್ತ್ರೀಯ ತರಬೇತಿ ಪಡೆದಿದ್ದಾರೆ. ಸಾಂಪ್ರದಾಯಿಕವಾಗಿ ಪುರುಷ ಪ್ರಾಧಾನ್ಯವಾಗಿದ್ದ ಯಕ್ಷಗಾನ ಕ್ಷೇತ್ರದಲ್ಲಿ ಕೇವಲ ಸ್ತ್ರೀವೇಷಕ್ಕೆ ಸೀಮಿತವಾಗದೆ ‘ಪುಂಡುವೇಷ’ಗಳಾದ ಸುದರ್ಶನ, ಅಭಿಮನ್ಯು, ಅಶ್ವತ್ಥಾಮ, ಚಂಡ-ಮುಂಡರಂತಹ ಗಂಭೀರ ಹಾಗೂ ಸಾಹಸಮಯ ಪಾತ್ರಗಳನ್ನು ಲೀಲಾಜಾಲವಾಗಿ ಅಭಿನಯಿಸಿ ಕರಾವಳಿಯಲ್ಲಿ ಸೈ ಎನಿಸಿಕೊಂಡಿದ್ದಾರೆ. ರಾಧಾ ವಿಲಾಸ’ ಪ್ರಸಂಗದಲ್ಲಿ ತಂಗಿ ಡಾ. ವರ್ಷಾ ಶೆಟ್ಟಿ (ರಾಧೆ) ಅವರೊಂದಿಗೆ ದಿಶಾ ಶೆಟ್ಟಿ (ಕೃಷ್ಣ) ಅಭಿನಯಿಸಿದ ಅಭಿನಯ ಜೋಡಿ ಯಕ್ಷಗಾನ ಪ್ರೇಕ್ಷಕರ ಮನಗೆದ್ದಿದೆ.

ಇದನ್ನೂ ಓದಿ: ಕೇವಲ 19 ಗಂಟೆ 29 ನಿಮಿಷಗಳಲ್ಲಿ 2,000 ಮೆಹಂದಿ ಕೋನ್‌ಗಳನ್ನು ತಯಾರಿಸಿ ‘ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್’ ದಾಖಲೆ ಬರೆದ ಕರಾವಳಿಯ ಶಿವಾನಿ ಪ್ರಸಾದ್

ಮೂಡಬಿದಿರೆ ಆಳ್ವಾಸ್‌ನಲ್ಲಿ ಉಪನ್ಯಾಸಕಿ:

ಸುರತ್ಕಲ್‌ನಲ್ಲಿ ನಡೆದ ಪ್ರಸಂಗದಲ್ಲಿ ಗರ್ಭಿಣಿ ಸ್ಥಿತಿಯಲ್ಲೂ ಅಭಿನಯಿಸಲು ಪತಿ ಪ್ರಥಮ್ ಶೆಟ್ಟಿ, ತಂದೆ ಚಂದ್ರ ಎನ್. ಎಂ., ತಾಯಿ ಪ್ರಮದಾ ಮತ್ತು ಇಡೀ ಕುಟುಂಬಸ್ಥರು ನೀಡಿದ ಬೆಂಬಲ ಹಾಗೂ ಪ್ರೋತ್ಸಾಹವೇ ಮೂಲ ಕಾರಣ ಎಂದು ದಿಶಾ ಕೃತಜ್ಞತೆ ಸಲ್ಲಿಸಿದ್ದಾರೆ. ಪ್ರಸ್ತುತ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಹಾಗೂ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ದಿಶಾ ಶೆಟ್ಟಿ, ವೃತ್ತಿಜೀವನ ಮತ್ತು ಯಕ್ಷಗಾನ ಕಲೆಯೆರಡನ್ನೂ ಅತ್ಯಂತ ಸಮರ್ಥವಾಗಿ ಸರಿದೂಗಿಸಿಕೊಂಡು ಸಾಗುತ್ತಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us