Sullia News: ಸುಳ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿನ ಪರಾಮರ್ಶೆ ಸಭೆಯಲ್ಲಿ ​ಹೊಡೆದಾಟ

| Updated By: Ganapathi Sharma

Updated on: Jul 14, 2023 | 10:45 PM

ಮಾತಿಗೆ ಮಾತು ಬೆಳೆದು ಜಿ ಕೃಷ್ಣಪ್ಪ, ನಂದಕುಮಾರ್​ ಬಣದ ನಡುವೆ ತಳ್ಳಾಟ, ನೂಕಾಟ, ಗಲಾಟೆ ನಡೆಯಿತು. ನಂದಕುಮಾರ್ ಬಣದ ಮುಖಂಡನನ್ನು ಎಳೆದಾಡಿ ಹಲ್ಲೆ ನಡೆಸಿದ ಆರೋಪ ಕೂಡ ಕೇಳಿಬಂದಿದೆ.

ಮಂಗಳೂರು, ಜುಲೈ 14: ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ (Congress) ಸೋಲಿಗೆ ಸಂಬಂಧಿಸಿ ಶುಕ್ರವಾರ ನಡೆದ ಪರಾಮರ್ಶೆ ಸಭೆ ಎರಡು ಬಣಗಳ ನಡುವಣ ಸಂಘರ್ಷಕ್ಕೆ ಸಾಕ್ಷಿಯಾಯಿತು. ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಕಡಬ ಪಟ್ಟಣದ ಡಾ.ಅಂಬೇಡ್ಕರ್​ ಭವನದಲ್ಲಿ ಪರಾಮರ್ಶೆ ಸಭೆ ನಡೆದಿದ್ದು, ಸಭೆಯಲ್ಲಿ ಗಲಾಟೆ ನಡೆದಿದೆ. ಎರಡು ಬಣಗಳ ನಡುವೆ ಮಾತಿನ ಚಕಮಕಿ ನಡೆದಿದ್ದು, ನಂತರ ಪರಸ್ಪರ ಹೊಡೆದಾಟಕ್ಕೆ ತಿರುಗಿದೆ. ಪರಾಜಿತ ಅಭ್ಯರ್ಥಿ ಜಿ ಕೃಷ್ಣಪ್ಪ, ನಂದಕುಮಾರ್​ ಬಣದ ನಡುವೆ ಘರ್ಷಣೆ ಸಂಭವಿಸಿದೆ.

ಸುಳ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿನ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಸಮಿತಿ ರಚಿಸಲಾಗಿತ್ತು. ಈ ಸಮಿತಿಯ ಸಭೆ ಕರೆಯಲಾಗಿದ್ದು, ಮುಖಂಡರು ಭಾಗವಹಿಸಿದ್ದರು. ಈ ಸಭೆಗೆ ಉಚ್ಚಾಟಿತ ಮುಖಂಡರು ಬಂದಿದ್ದಕ್ಕೆ ಜಿ. ಕೃಷ್ಣಪ್ಪ ಬಣ ಆಕ್ರೋಶ ವ್ಯಕ್ತಪಡಿಸಿದೆ. ಉಚ್ಚಾಟಿಸಿದ್ದರೂ ಸಭೆಗೆ ಬಂದಿದ್ದೀರಿ ಮಾನ ಮರ್ಯಾದೆ ಇಲ್ಲವೇ ಎಂದು ಪ್ರಶ್ನಿಸಿದೆ.

ಪರಾಜಿತ ಕಾಂಗ್ರೆಸ್​ ಅಭ್ಯರ್ಥಿ ಜಿ. ಕೃಷ್ಣಪ್ಪ ಕೂಡ ಅದೇ ಪ್ರಶ್ನೆ ಎತ್ತಿದಾಗ ಸಭೆಯಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಯಿತು.

ಕಡಬ ತಾಲೂಕಿನಲ್ಲಿ ಪಕ್ಷ ಸಂಘಟಿಸಿದ ನಮ್ಮನ್ನು ಪ್ರಶ್ನಿಸುವ ಹಕ್ಕು ನಿಮಗೆ ನೀಡಿದವರು ಯಾರು? ಎಲ್ಲಿಂದಲೋ ಬಂದ ನಿಮಗೆ ಪ್ರಶ್ನಿಸುವ ಹಕ್ಕು ಕೊಟ್ಟವರು ಯಾರು ಎಂದು ಮತ್ತೊಂದು ಬಣ ಮರು ಪ್ರಶ್ನೆ ಹಾಕಿತು.

ಇದನ್ನೂ ಓದಿ: ಕುಮಾರಸ್ವಾಮಿಯನ್ನು ಪ್ರತಿಪಕ್ಷ ನಾಯಕನಾಗಿ ನೇಮಿಸಲು ಹೊರಟ ಬಿಜೆಪಿ; ಸಿಎಂ ಸಿದ್ದರಾಮಯ್ಯ ವ್ಯಂಗ್ಯ

ಮಾತಿಗೆ ಮಾತು ಬೆಳೆದು ಜಿ ಕೃಷ್ಣಪ್ಪ, ನಂದಕುಮಾರ್​ ಬಣದ ನಡುವೆ ತಳ್ಳಾಟ, ನೂಕಾಟ, ಗಲಾಟೆ ನಡೆಯಿತು. ನಂದಕುಮಾರ್ ಬಣದ ಮುಖಂಡನನ್ನು ಎಳೆದಾಡಿ ಹಲ್ಲೆ ನಡೆಸಿದ ಆರೋಪ ಕೂಡ ಕೇಳಿಬಂದಿದೆ.

ಬಳಿಕ ಪೊಲೀಸರ ಮಧ್ಯಪ್ರವೇಶದಿಂದ ವಾಗ್ವಾದ, ಹೊಡೆದಾಟ ತಣ್ಣಗಾಗಿದೆ. ಸದ್ಯ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:05 pm, Fri, 14 July 23