ಮಂಗಳೂರು: ಇತ್ತೀಚಿಗೆ ಯುವ ಜನತೆ ಹೆಚ್ಚಾಗಿ ಮಾದಕ ವಸ್ತುಗಳಿಗೆ ಅಡಿಟ್ ಆಗುತ್ತಿದ್ದಾರೆ. ಮಾದಕ ವಸ್ತು (Narcotics) ಸೇವಿಸಿ ನಶೆಯಲ್ಲಿ ಹುಚ್ಚಾಟವಾಡುತ್ತಾರೆ. ಇದೇರೀತಿ ಗಾಂಜಾ ನಶೆಯಲ್ಲಿ ಮಂಗಳೂರು ಹೊರವಲಯದ ಉಳ್ಳಾಲ (Ullal) ನಾಟೆಕಲ್ ಜಂಕ್ಷನ್ ಬಳಿ ಚೂರಿ ಹಿಡಿದು ರಸ್ತೆ ಮಧ್ಯೆ ಧಾಂದಲೆ ಮಾಡುತ್ತಿದ್ದ ಯುವಕನನ್ನು ಸಿನಿಮಿಯ ರೀತಿಯಲ್ಲಿ ಮಂಗಳೂರು ಪೊಲೀಸರು (Mangaluru Police) ಬಂಧಿಸಿದ್ದಾರೆ. ಉಳ್ಳಾಲ ಮುಕ್ಕಚ್ಚೇರಿ, ಕೈಕೋ ರೋಡ್ ನಿವಾಸಿ ಅಬ್ಬೂಬಕ್ಕರ್ ಸಿದ್ಧೀಕ್ (24) ಬಂಧಿತ ಆರೋಪಿ.
ಅಬ್ಬೂಬಕ್ಕರ್ ಸಿದ್ಧೀಕ್ ಗಾಂಜಾ ದೊಂದಿಗೆ ಇತರ ಅಮಲು ಪದಾರ್ಥ ಸೇವಿಸಿ ನಶೆಯಲ್ಲಿ ನಾಟೆಕಲ್ ರಸ್ತೆಯ ಡಿವೈಡರ್ ಮೇಲೆ ನಿಂತು ಜನರಿಗೆ ಚೂರಿ ತೋರಿಸಿ ಬೆದರಿಕೆ ಹಾಕುತ್ತಿದ್ದನು. ಯುವಕನ ಹುಚ್ಚಾಟ ಕಂಡು ಸಾರ್ವಜನಿಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಯುವಕನ ಮನ ಒಲಿಸಲು ಯತ್ನಿಸಿದ್ದಾರೆ. ಆದರೆ ಅಬ್ಬೂಬಕ್ಕರ್ ಸಿದ್ದೀಕ್ ಪೊಲೀಸರ ಮಾತಿಗೆ ಬಗ್ಗಿಲ್ಲ. ಈ ವೇಳೆ ಪೊಲೀಸರು ಚಾಣಾಕ್ಷತನ ಪ್ರದರ್ಶಿಸಿದ್ದಾರೆ. ಅಬ್ಬೂಬಕ್ಕರ್ ಸಿದ್ಧೀಕ್ ಮುಂದೆ ಅಣತೆ ದೂರದಲ್ಲಿ ನಿಂತು ಕೆಲ ಪೊಲೀಸರು ಆತನನ್ನು ಮಾತನಾಡಿಸಲು ಆರಂಭಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು: ಪೊಲೀಸ್ ಹಾಗೂ RAW ಅಧಿಕಾರಿ ಎಂದು ಕಾಲೇಜಿನಲ್ಲಿ ಬಿಲ್ಡಪ್ ಕೊಡ್ತಿದ್ದ ನರ್ಸಿಂಗ್ ವಿದ್ಯಾರ್ಥಿ ಅರೆಸ್ಟ್
ಈ ವೇಳೆ ಸಿವಿಲ್ ಡ್ರೆಸ್ನಲ್ಲಿದ್ದ ಕೊಣಾಜೆ ಠಾಣೆಯ ಪೊಲೀಸ್ ಸಿಬ್ಬಂದಿ ಸಂತೋಷ್ ಅಬ್ಬೂಬಕ್ಕರ್ ಸಿದ್ಧೀಕ್ಗೆ ತಿಳಿಯದಂತೆ ಆತನ ಹಿಂದೆ ಹೋಗಿ ಅಬ್ಬೂಬಕ್ಕರ್ ಸಿದ್ಧೀಕ್ಯ ಎರಡು ತೋಳುಗಳಲ್ಲಿ ಕೈ ಹಾಕಿ ಲಾಕ್ ಮಾಡಿದ್ದಾರೆ. ನಂತರ ಆತನನ್ನು ಪೊಲೀಸ್ ವಾಹನದಲ್ಲಿ ಹಾಕಿಕೊಂಡು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಪೊಲೀಸ್ ಸಿಬ್ಬಂದಿ ಸಂತೋಷ್ ಅವರ ಸಾಹಸಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಇನ್ನು ಪೊಲೀಸರ ಕಾರ್ಯಾಚರಣೆ ಮೊಬೈಲ್ನಲ್ಲಿ ಸೆರೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ