ನಾಗರ ಪಂಚಮಿ; ಚಂದ್ರಯಾನ-3ರ ಯಶಸ್ಸಿಗಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ, ಕ್ಷೀರಾಭಿಷೇಕ
ಚಂದ್ರಯಾನ-3 ಯೋಜನೆಯ ಯಶಸ್ಸಿಗಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಹೆಸರಿನಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ದೇವಾಲಯದ ಆಡಳಿತ ಮಂಡಳಿಯು ಕಾರ್ತಿಕ ಪೂಜೆ, ಮಹಾಪೂಜೆಯನ್ನು ಸಲ್ಲಿಸಿದ್ದು, ವಿಶೇಷ ‘ಕ್ಷೀರಾಭಿಷೇಕ ಮಾಡಲಾಯಿತು.
ಮಂಗಳೂರು, ಆಗಸ್ಟ್ 21: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ (Kukke Subramanya Temple) ಸೋಮವಾರ ನಾಗಪಂಚಮಿ ಹಬ್ಬದ (Nag Panchami) ಸಂದರ್ಭದಲ್ಲಿ ಚಂದ್ರಯಾನ-3 (Chandrayaan 3) ಯೋಜನೆಯ ಯಶಸ್ಸಿಗಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಹೆಸರಿನಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು. ದೇವಾಲಯದ ಆಡಳಿತ ಮಂಡಳಿಯು ಕಾರ್ತಿಕ ಪೂಜೆ, ಮಹಾಪೂಜೆಯನ್ನು ಸಲ್ಲಿಸಿದ್ದು, ವಿಶೇಷ ‘ಕ್ಷೀರಾಭಿಷೇಕ (ದೇವತೆಗೆ ಹಾಲನ್ನು ವಿಗ್ರಹದ ಮೇಲೆ ಸುರಿಯುವ ಮೂಲಕ ಚಂದ್ರನ ಕಾರ್ಯಾಚರಣೆಯ ಯಶಸ್ಸಿಗೆ ಪ್ರಾರ್ಥಿಸಲಾಯಿತು) ಮಾಡಲಾಯಿತು ಎಂದು ‘ಐಎಎನ್ಎಸ್’ ಸುದ್ದಿಸಂಸ್ಥೆ ವರದಿ ಮಾಡಿದೆ.
ಭಾರತೀಯ ಬಾಹ್ಯಾಕಾಶ ಸಂಸ್ಥೆ ಕಳೆದ ಗುರುವಾರ ಮಧ್ಯಾಹ್ನ ಮುಖ್ಯ ಬಾಹ್ಯಾಕಾಶ ನೌಕೆ ಚಂದ್ರಯಾನ-3 ನಿಂದ ಚಂದ್ರನ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಬೇರ್ಪಡಿಸಿದೆ.
ಸುಮಾರು 600 ಕೋಟಿ ರೂಪಾಯಿ ವೆಚ್ಚದ ಭಾರತದ ಮೂರನೇ ಚಂದ್ರಯಾನದ ಮುಖ್ಯ ಉದ್ದೇಶ ಲ್ಯಾಂಡರ್ ಅನ್ನು ಚಂದ್ರನ ಮೇಲೆ ಯಶಸ್ವಿಯಾಗಿ ಲ್ಯಾಂಡ್ ಮಾಡಿಸುವುದಾಗಿದೆ. ವಿಕ್ರಮ್ ಎಂಬ ಹೆಸರಿನ ಲ್ಯಾಂಡರ್ ಚಂದ್ರನ ಮೇಲೆ ಅಪ್ಪಳಿಸಿದ್ದರಿಂದ ಚಂದ್ರಯಾನ-2 ಮಿಷನ್ ವಿಫಲವಾಗಿತ್ತು.
ಇಸ್ರೋ ಪ್ರಕಾರ, ಲ್ಯಾಂಡರ್ ಆಗಸ್ಟ್ 23 ರಂದು ಸಂಜೆ 5.47 ಕ್ಕೆ ಚಂದ್ರನ ದಕ್ಷಿಣ ಧ್ರುವದ ಬಳಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ನಿರೀಕ್ಷೆಯಿದೆ. ಲ್ಯಾಂಡರ್ ಚಂದ್ರನ ಮೇಲ್ಮೈಯಿಂದ ಸುಮಾರು 100 ಕಿಮೀ ಎತ್ತರದಿಂದ ಚಂದ್ರನ ಅಂಗಳಕ್ಕೆ ಇಳಿಯಲಿದೆ. ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಜುಲೈ 14 ರಂದು ಉಡಾವಣೆ ಮಾಡಲಾಗಿತ್ತು.
ಆಗಸ್ಟ್ 23ರಂದು ಲ್ಯಾಂಡಿಂಗ್ ಆಗದಿದ್ದರೆ ಮುಂದೇನು?
ಆಗಸ್ಟ್ 23 ರಂದು ಚಂದ್ರನ ಮೇಲ್ಮೈಯಲ್ಲಿ ವಿಕ್ರಮ್ ಲ್ಯಾಂಡರ್ನ ಲ್ಯಾಂಡಿಂಗ್ಗೆ ಪೂರಕ ವಾತಾವರಣ ಇರದಿದ್ದರೆ 27 ರಂದು ಮರಳಿ ಪ್ರಯತ್ನ ಮಾಡಲಾಗುವುದು ಎಂದು ಇಸ್ರೋ ತಿಳಿಸಿದೆ.
ಇದನ್ನೂ ಓದಿ: ಸ್ವಾಗತ ಗೆಳೆಯ..ಚಂದ್ರಯಾನ-2 ಆರ್ಬಿಟರ್ ಜತೆ ಸಂಪರ್ಕ ಸಾಧಿಸಿದ ಚಂದ್ರಯಾನ-3 ಲ್ಯಾಂಡರ್
ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಎರಡು ಗಂಟೆಗಳ ಮೊದಲು ಅದರ ಸ್ಥಿತಿಗತಿ ಮತ್ತು ಚಂದ್ರನ ಮೇಲಿನ ಪರಿಸ್ಥಿತಿಗಳ ಆಧಾರದ ಮೇಲೆ ನಿರ್ಧಾರ ಕೈಗೊಳ್ಳಲಾಗುವುದು. ಲ್ಯಾಡಿಂಗ್ ಮಾಡಬೇಕೇ ಅಥವಾ ಆ ಕ್ಷಣದಲ್ಲಿ ಸೂಕ್ತವಲ್ಲವೇ ಎಂದು ತೀರ್ಮಾನ ಕೈಗೊಳ್ಳಲಾಗುವುದು. ಅನುಕೂಲಕರ ಪರಿಸ್ಥಿತಿ ಇಲ್ಲದಿದ್ದರೆ ಆಗಸ್ಟ್ 27ಕ್ಕೆ ಮುಂದೂಡಿಕೆ ಮಾಡಿ ಮತ್ತೊಂದು ಪ್ರಯತ್ನ ಮಾಡಲಾಗುವುದು ಎಂದು ಇಸ್ರೋದ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರದ ನಿರ್ದೇಶಕ ನಿಲೇಶ್ ಎಂ ದೇಸಾಯಿ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ