ದಾವಣಗೆರೆ: ಮುಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್(Jagadish Shettar) ಎಂಬ ವಿಚಾರವಾಗಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸ್ಪಷ್ಟನೆ ನೀಡಿದ್ದಾರೆ. ಸಿಎಂ ಬದಲಾವಣೆ ಬಗ್ಗೆ ಪದೇಪದೆ ವದಂತಿ ಹಬ್ಬಿಸುತ್ತಿದ್ದಾರೆ. ಯಾರು ವದಂತಿ ಹಬ್ಬಿಸುತ್ತಿದ್ದಾರೆ ಅನ್ನೋದು ಗೊತ್ತಿಲ್ಲ. ಸದ್ಯಕ್ಕೆ ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ. ನಮ್ಮ ಪಕ್ಷದಲ್ಲಿ ಸಿಎಂ ಬದಲಾವಣೆ ಚರ್ಚೆಯೇ ನಡೆಯುತ್ತಿಲ್ಲ. ಸಿಎಂ ಬದಲಾವಣೆ ಮಾತೇ ಇಲ್ಲ ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಸಿದ್ದು ವಿರುದ್ಧ ಶೆಟ್ಟರ್ ವಾಗ್ದಾಳಿ
ಸಿದ್ದರಾಮಯ್ಯ ಸುಳ್ಳು ಹೇಳುವುದನ್ನೇ ಪ್ರವೃತ್ತಿ ಮಾಡಿಕೊಂಡಿದ್ದಾರೆ ಎಂದು ದಾವಣಗೆರೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಲಿಂಗಾಯತ ಧರ್ಮ ಒಡೆಯಲು ಪ್ರಚೋದನೆ ನೀಡಿದ್ರು. ನಂತರ ಇದೀಗ ರಂಭಾಪುರಿ ಶ್ರೀಗಳನ್ನು ಭೇಟಿಯಾಗಿ ಪಶ್ಚಾತ್ತಾಪ ವ್ಯಕ್ತಪಡಿಸಿದ್ದಾರೆ. ರಂಭಾಪುರಿ ಶ್ರೀಗಳ ಬಳಿ ನಾನು ಆ ರೀತಿ ಹೇಳೇ ಇಲ್ಲ ಅಂತಿದ್ದಾರೆ. ಧರ್ಮ ಒಡೆದ ಬಗ್ಗೆ ಡಿ.ಕೆ.ಶಿವಕುಮಾರ್ ಕ್ಷಮೆಯನ್ನು ಕೇಳಿದ್ದಾರೆ. ಇದು ಸಿದ್ದರಾಮಯ್ಯನವರ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹದ್ದು. ಅವರು ಸುಳ್ಳು ಹೇಳುವುದನ್ನೇ ಜೀವನ ಶೈಲಿ ಮಾಡಿಕೊಂಡಿದ್ದಾರೆ ಅನಿಸುತ್ತೆ. ಚುನಾವಣೆ ಸಮೀಪಿಸುತ್ತಿದ್ದಂತೆ ಸಿದ್ದರಾಮಯ್ಯ ಪ್ರವಾಸ ಶುರುವಾಗಿದೆ. ಶೃಂಗೇರಿ ಮಠ, ರಂಭಾಪುರಿ ಪೀಠ, ಮೂರುಸಾವಿರ ಮಠ, ತುಮಕೂರು, ಮೈಸೂರಿನ ಮಠಗಳಿಗೆ ಭೇಟಿ ನೀಡುತ್ತಿದ್ದಾರೆ. ಈಗ ಚುನಾವಣೆ ಸಲುವಾಗಿ ಮಠ ಮಾನ್ಯಗಳಿಗೆ ಭೇಟಿ ನೀಡ್ತಿದ್ದಾರೆ ಎಂದು ದಾವಣಗೆರೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದ್ರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 3:47 pm, Sun, 21 August 22