ಬಾಗಲಕೋಟೆ: ಡಿಸಿಎಂ ಲಕ್ಷ್ಮಣ ಸವದಿ ಮಗನ ಕಾರು ಬೈಕ್ಗೆ ಡಿಕ್ಕಿ ಹೊಡೆದ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕು ವ್ಯಾಪ್ತಿಯ ಕೂಡಲಸಂಗಮ ಕ್ರಾಸ್ ಬಳಿ ರಾ.ಹೆ.50ರಲ್ಲಿ ನಡೆದಿದೆ. ಬೈಕ್ ಸವಾರ ಬಾಗಲಕೋಟೆ ತಾಲೂಕಿನ ಚಿಕ್ಕಹಂಡರಗಲ್ ನಿವಾಸಿ ಕೂಡಲೆಪ್ಪ ಬೋಳಿ(58) ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಲಕ್ಷ್ಮಣ ಸವದಿ ಹಿರಿಯ ಮಗ ಚಿದಾನಂದ ಸವದಿ ಸೇರಿ 12 ಜನರು 2 ಕಾರಿನಲ್ಲಿ ಪ್ರವಾಸಕ್ಕೆ ತೆರಳಿ ವಾಪಸಾಗ್ತಿದ್ರು. ವಿಜಯಪುರ ಮಾರ್ಗವಾಗಿ ತೆರಳ್ತಿದ್ದ ಚಿದಾನಂದ ಕಾರು ಹೊಲದಿಂದ ವಾಪಸಾಗುತ್ತಿದ್ದ ಸವಾರ ಕೂಡಲೆಪ್ಪನ ಬೈಕ್ಗೆ ಡಿಕ್ಕಿ ಹೊಡೆದಿದೆ. ಈ ಪರಿಣಾಮ ಬೈಕ್ ಸವಾರ ಮೃತಪಟ್ಟಿದ್ದಾನೆ.
ಲಕ್ಷ್ಮಣ ಸವದಿ ಮಗ ಚಿದಾನಂದ ಕೆಎ22 ಎಂಸಿ5151 ನಂ. ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಇದೇ ಕಾರು ಬೈಕ್ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೈಕ್ ಸವಾರನ ತಲೆಗೆ ಗಂಭೀರ ಗಾಯಗಳಾಗಿದ್ದವು. ಹೀಗಾಗಿ ಸವಾರನನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಆದ್ರೆ ಆಸ್ಪತ್ರೆಗೆ ಸೇರಿದ ಕೆಲವೇ ಕ್ಷಣಗಳಲ್ಲಿ ಕೂಡಲೆಪ್ಪ ಮೃತಪಟ್ಟಿದ್ದಾರೆ. ವಿಪರ್ಯಾಸವೆಂದರೆ ಬೈಕ್‌ಗೆ ಡಿಕ್ಕಿ ಬಳಿಕ ಸವಾರನನ್ನು ಆಸ್ಪತ್ರೆಗೆ ಸೇರಿಸುವ ಬದಲು ತಮ್ಮ ವಾಹನದ ನಂಬರ್ ಜಖಂಗೊಳಿಸಿ ಹೊರಡಲು ಯತ್ನಿಸಿದ್ದಾರೆ. ಚಿದಾನಂದ ಮತ್ತೊಂದು ವಾಹನದಲ್ಲಿ ತೆರಳಲು ಮುಂದಾಗಿದ್ದ. ಅಪಘಾತ ಮಾಡಿದ ಕಾರು ಯಾರದ್ದೆಂದು ತಿಳಿಯದಂತೆ ನೋಡಿಕೊಳ್ಳಲು ಪ್ರಯತ್ನಿಸಿದ್ದಾನೆ. ಆದ್ರೆ ಸ್ಥಳೀಯರು ಚಿದಾನಂದನನ್ನು ತಪ್ಪಿಸಿಕೊಳ್ಳಲು ಬಿಡದೆ ಕೆಲಹೊತ್ತು ಹಿಡಿದು ಕೂರಿಸಿದ್ದಾರೆ. ಬಳಿಕ ಹುನಗುಂದ ಪೊಲೀಸರು ಚಿದಾನಂದನನ್ನು ಬಿಡಿಸಿ ಕಳಿಸಿದ್ದಾರೆ. ಈ ಬಗ್ಗೆ ಹುನಗುಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಚಿದಾನಂದ ಬದಲು ಚಾಲಕ ಹನುಮಂತ ಸಿಂಗ್ ಹೆಸರಲ್ಲಿ ದೂರು ದಾಖಲಾಗಿದೆ. ಅಪಘಾತ ಬಳಿಕ ಮೃತನ ಸಂಬಂಧಿಕರಿಗೆ ನಾನು ಡಿಸಿಎಂ ಮಗ ಹುಷಾರ್ ಎಂದು ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮೃತನ ಸಂಬಂಧಿಕರು ಚಿದಾನಂದ ಸವದಿ ವಿರುದ್ಧ ಬೆದರಿಕೆ ಆರೋಪ ಮಾಡಿದ್ದಾರೆ.
ಮತ್ತೊಂದು ವಾಹನದಲ್ಲಿ ಪರಾರಿಯಾಗಲು ಯತ್ನ
ಅಪಘಾತದ ಬಳಿಕ ತಮ್ಮ ಕಾರಿನ ನಂಬರ್ ಪ್ಲೇಟ್ ಜಖಂಗೊಳಿಸಿ ಬಳಿಕ ಮತ್ತೊಂದು ವಾಹನದಲ್ಲಿ ತೆರಳಲು ಯತ್ನಿಸಿದ್ದಾರೆ ಎಂದು ಟಿವಿ9ಗೆ ಮೃತ ಕೂಡಲೆಪ್ಪ ಬೋಳಿ ಸಂಬಂಧಿ ಸಿದ್ದಪ್ಪ ತಿಳಿಸಿದ್ದಾರೆ. ಅಪಘಾತವಾದ ಕಾರಿನ ನಂಬರ್ ಪ್ಲೇಟ್, ದಾಖಲೆಗಳನ್ನು ಮತ್ತೊಂದು ವಾಹನದಲ್ಲಿ ಹಾಕಿ ಪರಾರಿಯಾಗಲು ಯತ್ನಿಸಿದ್ರು. ಈ ವೇಳೆ ಕೂಡಲೆಪ್ಪ ಮಕ್ಕಳು, ಸ್ಥಳೀಯರು ಬಂದ್ರು. ಬಳಿಕ ಯುವಕನೊಬ್ಬ ಚಿದಾನಂದನ ಕಾರಿನ ಫೋಟೋ ತೆಗೆದಿದ್ದ. ಆಗ ಯುವಕನಿಗೆ ಚಿದಾನಂದ ಸವದಿ ಬೆದರಿಕೆ ಹಾಕಿ ಮೊಬೈಲ್‌ನಲ್ಲಿದ್ದ ಫೋಟೋ ಡಿಲೀಟ್ ಮಾಡಿದ್ದಾರೆ ಎಂದು ಸಿದ್ದಪ್ಪ ಹೇಳಿದ್ರು.
ಆಕಸ್ಮಿಕವಾಗಿ ಕಾರಿಗೆ ಅಡ್ಡಬಂದಿದ್ದರಿಂದ ಅಪಘಾತವಾಗಿದೆ
ಮನೆ ದೇವರಾಣೆಗೂ ನಾನು ಯಾರಿಗೂ ಧಮ್ಕಿ ಹಾಕಿಲ್ಲ. ಆಕಸ್ಮಿಕವಾಗಿ ಕಾರಿಗೆ ಅಡ್ಡಬಂದಿದ್ದರಿಂದ ಅಪಘಾತವಾಗಿದೆ ಎಂದು ಟಿವಿ9ಗೆ ಡಿಸಿಎಂ ಲಕ್ಷ್ಮಣ ಸವದಿ ಮಗ ಚಿದಾನಂದ ಹೇಳಿಕೆ ನೀಡಿದ್ದಾರೆ. ಅಪಘಾತವಾದ ಕಾರಿನಲ್ಲಿ ನಾನು ಇರಲಿಲ್ಲ. ಅಪಘಾತವಾಗಿರುವುದು ನಿಜ, ಸ್ಥಳದಲ್ಲಿ ಯಾರೂ ಇರಲಿಲ್ಲ. ಅಪಘಾತವಾದ ತಕ್ಷಣ ಆ್ಯಂಬುಲೆನ್ಸ್‌ಗೆ ಕರೆ ಮಾಡಿ ಅವರನ್ನು ನಾನೇ ಆಸ್ಪತ್ರೆಗೆ ದಾಖಲಿಸಿದ್ದೆ. ದೇವರಾಣೆಗೂ ನಾನೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದೆ. ಮಾನವೀಯತೆ ದೃಷ್ಟಿಯಿಂದ ಮೃತನ ಕುಟುಂಬಕ್ಕೆ ನಾನು ಸಹಾಯವನ್ನು ಮಾಡುತ್ತೇನೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಮಗ ಚಿದಾನಂದ ಹೇಳಿದ್ರು.
ನಾನು ಸ್ನೇಹಿತನ ಕಾರಿನಲ್ಲಿ ಮುಂದೆ ತೆರಳುತ್ತಿದ್ದೆ. ನಾನು ತೆರಳುತ್ತಿದ್ದ ಕಾರು 30 ಕಿಲೋಮೀಟರ್ ಮುಂದಿತ್ತು. ನನ್ನ ಕಾರನ್ನು ನನ್ನ ಚಾಲಕ ಚಲಾಯಿಸುತ್ತಿದ್ದ. ನನ್ನ ಕಾರಿನಲ್ಲಿ ಮೂವರು ಸ್ನೇಹಿತರು ಪ್ರಯಾಣಿಸುತ್ತಿದ್ದರು. ಘಟನೆಯ ವೇಳೆ ಸ್ಥಳದಲ್ಲಿ ಯಾರೂ ಇರಲಿಲ್ಲ. ಆ್ಯಂಬುಲೆನ್ಸ್‌ಗೆ ಶಿಫ್ಟ್ ಮಾಡುವ ವೇಳೆ ಜನರು ಬಂದಿದ್ದರು. ಸುಮಾರು 6 ಗಂಟೆಯ ವೇಳೆಗೆ ನನಗೆ ಕರೆ ಬಂದಿತ್ತು. ಕಾರು ಅಪಘಾತವಾಗಿರುವ ಬಗ್ಗೆ ನನ್ನ ಚಾಲಕ ಕರೆ ಮಾಡಿದ್ದ. ನಾನು, ನನ್ನ ಸ್ನೇಹಿತರು ಯಾರಿಗೂ ಬೆದರಿಕೆಯನ್ನ ಹಾಕಿಲ್ಲ. ಬೈಕ್ ಸವಾರ ಹೆಲ್ಮೆಟ್‌ನ್ನೂ ಧರಿಸಿರಲಿಲ್ಲ. ಘಟನೆಯ ಬಗ್ಗೆ ನಮಗೂ ನೋವಿದೆ ಎಂದರು.
Published On - 6:41 am, Tue, 6 July 21