ಹಾಸನ: ಈರುಳ್ಳಿ ರೇಟ್ ಗಗನಕ್ಕೇರಿದೆ. ದಿನದಿಂದ ದಿನಕ್ಕೆ ಗಗನಕುಸುಮವಾಗ್ತಿದೆ. ಆನಿಯನ್ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್. ಚಿನ್ನ ಕೊಳ್ಳೋ ಬದ್ಲು ಈರುಳ್ಳಿ ಕೊಂಡ್ರೆ ಸಾಕಪ್ಪಾ ಅಂತಿದ್ದಾರೆ. ಆನಿಯನ್ ಹೆಸರಲ್ಲಿ ಆನ್ಲೈನ್ ವಂಚನೆ ಜಾಲ ಸದ್ದು ಮಾಡಿದೆ.
ಈರುಳ್ಳಿ ಹೆಸರಲ್ಲಿ ಕಾಲಿಟ್ಟಿದೆ ಆನ್ಲೈನ್ ವಂಚನೆ ಜಾಲ!
ಈರುಳ್ಳಿಗೆ ಬಂಗಾರದಂತ ರೇಟ್ ಬಂತೋ ವಂಚನೆ ಜಾಲ ಜೋರಾಗ್ತಿದೆ. ವರ್ತಕರು ಕೂಡ ಎಲ್ಲಿ ಕಡಿಮೆ ರೇಟ್ ಸಿಗುತ್ತೆ ಅಂತ ಜಾಲಾಡ್ತಿದ್ದಾರೆ. ಇದೀಗ ಇವರನ್ನೇ ಟಾರ್ಗೆಟ್ ಮಾಡಿರೋ ಖದೀಮರು ಆನ್ಲೈನ್ಲ್ಲಿ ಲಕ್ಷ ಲಕ್ಷ ಮೋಸ ಮಾಡಿದ್ದಾರೆ. ಹಾಸನ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಈರುಳ್ಳಿ ವರ್ತಕ ಸೈಯದ್ ಮುದಾಸೀರ್ಗೆ ದೂರವಾಣಿ ಕರೆ ಮಾಡಿದ್ದಾರಂತೆ.
ನಮ್ಮ ಬಳಿ ಲೋಡ್ಗಟ್ಟಲೇ ಈರುಳ್ಳಿ ಸ್ಟಾಕ್ ಇದೆ. ಕಡಿಮೆ ರೇಟ್ಗೆ ಕೊಡ್ತೀವಿ ಅಡ್ವಾನ್ಸ್ ಹಣ ಖಾತೆಗೆ ಜಮೆ ಮಾಡಿ ಅಂತ ಪುಂಗಿದ್ದಾರೆ. ಇದನ್ನೇ ನಂಬಿದ ಸೈಯದ್ ಮದಾಸೀರ್ ಕರೆ ಮಾಡಿದ್ದ ಅನಾಮಧೇಯ ವ್ಯಕ್ತಿ ಖಾತೆಗೆ 3 ಲಕ್ಷದ 80 ಸಾವಿರ ರೂಪಾಯಿ ಜಮೆ ಮಾಡಿ ಮೋಸ ಹೋಗಿದ್ದಾರೆ. ಇದೀಗ ಹಾಸನ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಹಣವೂ ಇಲ್ಲ, ಈರುಳ್ಳಿಯೂ ಇಲ್ಲದೇ ತಲೆ ಮೇಲೆ ಕೈ ಹೊದ್ದು ಕೂತಿದ್ದಾರೆ.
ಇನ್ನು, ಈರುಳ್ಳಿ ರೇಟ್ ಗಗನಕ್ಕೇರ್ತಿರೋದನ್ನೇ ಟಾರ್ಗೆಟ್ ಮಾಡ್ತಿರೋ ಖದೀಮರು ಆನ್ಲೈನ್ ವಂಚನೆಗಿಳಿದಿರೋದು ವರ್ತಕರ ನಿದ್ದೆಗೆಡಿಸಿದೆ. ಯಾರನ್ನ ನಂಬೋದು, ಯಾರನ್ನ ಬಿಡೋದು ಅನ್ನೋ ಭೀತಿ ಕೂಡ ವರ್ತಕರಿಗೆ ಎದುರಾಗಿದೆ.
ಒಟ್ನಲ್ಲಿ ಈರುಳ್ಳಿ ಬೆಲೆ ಏರಿದ್ದೇ ಏರಿದ್ದು, ಜನರು ಅಡುಗೆ ಮಾಡೋ ಹಾಗಿಲ್ಲ, ವರ್ತಕರು ವ್ಯಾಪಾರ ಮಾಡೋದು ಕಷ್ಟವಾಗ್ತಿದೆ. ಎಲ್ರೂ ಈರುಳ್ಳಿ ರೇಟ್ ಯಾವಾಗ ಇಳೀಯುತ್ತಪ್ಪಾ ಅನ್ನೋ ಹೊತ್ತಲ್ಲೇ ವಂಚನೆ ಜಾಲ ಹೆಜ್ಜೆ ಇಟ್ಟಿದೆ.
Published On - 11:39 am, Mon, 16 December 19