ಬೆಂಗಳೂರಿನಲ್ಲಿ ಸೈನ್ಸ್ ಸಿಟಿ, ಎಲ್ಲಾ ಜಿಲ್ಲೆಗಳಲ್ಲಿ ಸೈನ್ಸ್ ಸೆಂಟರ್, 11 ಜಿಲ್ಲೆಗಳಲ್ಲಿ ಪ್ಲಾನಿಟೇರಿಯಂ ಸ್ಥಾಪನೆ: ಸಿದ್ದರಾಮಯ್ಯ
Karnataka budget 2026, steps to boost science and technology sector: ಬೆಂಗಳೂರಿನಲ್ಲಿ ಸೈನ್ಸ್ ಸಿಟಿ ಸ್ಥಾಪನೆ, ಹಲವು ರಾಜ್ಯಗಳಲ್ಲಿ ಹೊಸ ತಾರಾಲಯಗಳ ಸ್ಥಾಪನೆ ಸೇರಿದಂತೆ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಪುಷ್ಟಿ ಕೊಡಲು ಬಜೆಟ್ನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. 500 ಹೊಸ ಗ್ಲೋಬಲ್ ಕೇಪಬಿಲಿಟಿ ಸೆಂಟರ್ಗಳ ಸ್ಥಾಪನೆ, ನವೋದ್ಯಮಗಳಿಗೆ ಉತ್ತೇಜನ, ಡ್ರೋನ್ ಪರೀಕ್ಷಾ ಕೇಂದ್ರ ಇತ್ಯಾದಿ ಮಹತ್ವದ ಯೋಜನೆಗಳನ್ನು ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.

ಬೆಂಗಳೂರು, ಮಾರ್ಚ್ 6: ಕರ್ನಾಟಕದಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ (Bio Technology), ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಉತ್ತೇಜಿಸಲು ಬಜೆಟ್ನಲ್ಲಿ ಸಿದ್ದರಾಮಯ್ಯ (Siddaramaiah) ಹಲವು ಕ್ರಮಗಳನ್ನು ಘೋಷಿಸಿದ್ದಾರೆ. ಬೆಂಗಳೂರಿನಲ್ಲಿ ಹೊಸ ಸೈನ್ಸ್ ಸಿಟಿ ಸ್ಥಾಪಿಸುವ ಯೋಜನೆಯನ್ನು ಪ್ರಕಟಿಸಿದ್ದಾರೆ. ಇಂದು ನಾಲ್ಕೂವರೆ ಲಕ್ಷ ಕೋಟಿ ರೂ ಮೊತ್ತದ ದಾಖಲೆಯ ಬಜೆಟ್ (Karnataka Budget 2026) ಮಂಡಿಸಿದ ಮುಖ್ಯಮಂತ್ರಿಗಳು, ಬೆಂಗಳೂರಿನ ಆದಿನಾರಾಯಣ ಹೊಸಹಳ್ಳಿಯಲ್ಲಿ ‘ವಿಜ್ಞಾನ ನಗರ’ (Science City) ಸ್ಥಾಪಿಸಲಾಗುವುದು ಎಂದಿದ್ದಾರೆ. ಈ ಸೈನ್ಸ್ ಸಿಟಿಯನ್ನು 233 ಕೋಟಿ ರೂ ವೆಚ್ಚದಲ್ಲಿ ಸ್ಥಾಪಿಸಲು ವಿಸ್ತೃತವಾದ ಯೋಜನಾ ವರದಿಯನ್ನು ತಯಾರಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಲಿದೆ. ಇದಕ್ಕೆ ಅನುಮೋದನೆ ದೊರೆತ ನಂತರ ವಾಸ್ತುವಿನ್ಯಾಸ ತಯಾರಿಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ತಿಳೀಸಿದ್ದಾರೆ.
ಇದಲ್ಲದೇ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿಜ್ಞಾನ ಕೇಂದ್ರಗಳನ್ನು ಹಾಗೂ 11 ಜಿಲ್ಲೆಗಳಲ್ಲಿ ತಾರಾಲಯಗಳನ್ನು (ಪ್ಲಾನಿಟೋರಿಯಂ) ಸ್ಥಾಪಿಸಲಾಗುತ್ತಿದೆ. ಪ್ರಸ್ತುತ ಸಾಲಿನಲ್ಲಿ ವಿಜಯನಗರ, ಬಳ್ಳಾರಿ, ಚಿತ್ರದುರ್ಗ, ಯಾದಗಿರಿ, ಕೊಪ್ಪಳ ಮತ್ತು ಬೀದರ್ ಜಿಲ್ಲೆಗಳಲ್ಲಿ ತಲಾ 4 ಕೋಟಿ ರೂಗಳಂತೆ ಒಟ್ಟು 24 ಕೋಟಿ ರೂ ವೆಚ್ಚದಲ್ಲಿ ಆರು ತಾರಾಲಯಗಳನ್ನು ನಿರ್ಮಿಸಲಾಗುವುದು ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ವಿವಿ, ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ನಡೆಸಲು ರಾಜ್ಯ ಸರ್ಕಾರ ನಿರ್ಧಾರ
ಮಾಹಿತಿ ತಂತ್ರಜ್ಞಾನದಲ್ಲಿ ಕರ್ನಾಟಕ ದೇಶದಲ್ಲೇ ಮುಂಚೂಣಿಯಲ್ಲಿ: ಸಿದ್ದರಾಮಯ್ಯ
ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಕರ್ನಾಟಕವು ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದು ಹೇಳಿದ ಸಿದ್ದರಾಮಯ್ಯ, ರಾಜ್ಯದ ಟೆಕ್ ಕ್ಷೇತ್ರದ ಬೆಳವಣಿಗೆಗೆ ಮತ್ತಷ್ಟು ಪುಷ್ಟಿ ಕೊಡಲು ಈ ಕೆಳಗಿನ ಕೆಲ ಕ್ರಮಗಳನ್ನು ಪ್ರಕಟಿಸಿದ್ದಾರೆ.
- KDEM ಸಂಸ್ಥೆಯ ಸಹಯೋಗದೊಂದಿಗೆ “Super 100 Industry-Academia Adoption Program” ಅನ್ನು ಜಾರಿಗೊಳಿಸಲಾಗುವುದು.
- ಕೆ–ಕಾಂಬಿನೇಟರ್ (K-Combinator) ಮೂಲಕ ನವೋದ್ಯಮಿಗಳಿಗೆ ವೇಗವರ್ಧಕ ಕಾರ್ಯಕ್ರಮವನ್ನು ಆಯೋಜಿಸಲಾಗುವುದು.
- ಹುಬ್ಬಳ್ಳಿ, ಕಲಬುರಗಿ, ಹೊಸಕೋಟೆ ಮತ್ತು ಮೈಸೂರಿನಲ್ಲಿ ಉದ್ಯಮಿಗಳಿಗೆ Incubation ಸೌಲಭ್ಯಗಳನ್ನು ಒದಗಿಸಲು ಕಿಯೋನಿಕ್ಸ್ ಸಂಸ್ಥೆಯ ಮೂಲಕ ಪ್ಲಗ್-ಅಂಡ್-ಪ್ಲೇ ಸೌಲಭ್ಯದ ʻಲೀಪ್ ಲ್ಯಾಬ್ಸ್ʼ ಗಳನ್ನು ಸ್ಥಾಪಿಸಲಾಗುವುದು.
- ಜಾಗತಿಕ ಟೆಕ್ನಾಲಜಿ ಕಂಪನಿಗಳಿಂದ ರಾಜ್ಯದಲ್ಲಿ 45,000 ಕೋಟಿ ರೂಗಳ ಹೂಡಿಕೆ ಆಗಲಿದೆ.
- GCC ನೀತಿಯಡಿಯಲ್ಲಿ 2029ರ ವೇಳೆಗೆ ರಾಜ್ಯದಲ್ಲಿ 500 ಹೊಸ GCCಗಳನ್ನು ಸ್ಥಾಪಿಸುವ ಗುರಿ ಇದೆ. ಈಗಾಗಲೇ ರಾಜ್ಯದಲ್ಲಿ 550ಕ್ಕೂ ಅಧಿಕ ಗ್ಲೋಬಲ್ ಕೇಪಬಿಲಿಟಿ ಸೆಂಟರ್ಗಳಿವೆ.
- ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಡ್ರೋನ್ ಪರೀಕ್ಷಾ ಸೌಲಭ್ಯ ಕೇಂದ್ರ ಸ್ಥಾಪಿಸಲು ಕ್ರಮ.
- ಐಐಐಟಿ ಬೆಂಗಳೂರು ಮತ್ತು ನಿಮ್ಹಾನ್ಸ್ ಸಹಭಾಗಿತ್ವದಲ್ಲಿ ನರಶಸ್ತ್ರಚಿಕಿತ್ಸೆಗೆ ಪೂರಕವಾಗಲು ಸುಧಾರಿತ ಸರ್ಜಿಕಲ್ ಸಹಾಯಕ ರೋಬೋಗಳನ್ನು ತಯಾರಿಸಲಾಗುವುದು.
- ಕ್ವಾಂಟಂ ಕ್ಷೇತ್ರಕ್ಕೆ ಮಾನವ ಸಂಪನ್ಮೂಲ ಪೂರೈಸಲು ಕರ್ನಾಟಕ ಕ್ವಾಂಟಂ ರೋಡ್ಮ್ಯಾಪ್ನ ಪ್ರಥಮ ಹಂತದ ಅನುಷ್ಠಾನಕ್ಕೆ ಕ್ರಮ
- ಬೆಂಗಳೂರಿನಲ್ಲಿ ಸೈನ್ಸ್ ಸಿಟಿ ನಿರ್ಮಾಣ ಮಾಡಲಾಗುತ್ತದೆ. 11 ಜಿಲ್ಲೆಗಳಲ್ಲಿ ತಾರಾಲಯಗಳನ್ನೂ ನಿರ್ಮಿಸಲಾಗುತ್ತದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
