ಬೆಂಗಳೂರು: ಮಳೆಗಾಲ ಶುರುವಾಗುತ್ತಿದ್ದಂತೆ ವೈರಲ್ ಜ್ವರ, ಡೆಂಗ್ಯೂ, ಚಿಕನ್ ಗುನ್ಯ ಮುಂತಾದ ರೋಗಗಳು ಕಾಣಿಸಿಕೊಳ್ಳತೊಡಗುತ್ತವೆ. ಕರ್ನಾಟಕದಲ್ಲಿ ಮಳೆಗಾಲ ಶುರುವಾಗಿ 3 ತಿಂಗಳು ಕಳೆದಿವೆ. ಇದೀಗ ರಾಜ್ಯದಲ್ಲಿ ಕೊವಿಡ್ ಜೊತೆಗೇ ಡೆಂಗ್ಯೂ ಕೇಸುಗಳು ಹೆಚ್ಚಾಗುತ್ತಿವೆ. ಆಗಸ್ಟ್ ತಿಂಗಳಲ್ಲಿ ಕರ್ನಾಟಕದಲ್ಲಿ 697 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿತ್ತು. ಮಾರ್ಚ್ ತಿಂಗಳಲ್ಲಿ 155 ಇದ್ದ ಡೆಂಗ್ಯೂ ಜ್ವರದ ಕೇಸುಗಳು ಆಗಸ್ಟ್ ತಿಂಗಳಲ್ಲಿ 4 ಪಟ್ಟು ಹೆಚ್ಚಾಗಿವೆ.
ಕರ್ನಾಟಕದಲ್ಲಿ ಕಳೆದ ವರ್ಷ ನಿಯಂತ್ರಣಕ್ಕೆ ಬಂದಿದ್ದ ಡೆಂಗ್ಯೂ ಪ್ರಕರಣಗಳು ಈ ವರ್ಷ ಹೆಚ್ಚುತ್ತಿದ್ದು, ಎರಡು ತಿಂಗಳಲ್ಲಿ 1,777 ಪ್ರಕರಣಗಳು ದೃಢಪಟ್ಟಿವೆ. ಕರ್ನಾಟಕ ಸೇರಿದಂತೆ 11 ರಾಜ್ಯಗಳಲ್ಲಿ ಹೊಸ ಮಾದರಿಯ ಸೆರೋಟೈಪ್-2 ವೈರಾಣುವಿಂದ ಅಪಾಯಕಾರಿ ಡೆಂಗ್ಯೂ ಜ್ವರ ಕಾಣಸಿಕೊಳ್ಳುತ್ತಿದೆ ಎಂದು ಕಳೆದ ವಾರವಷ್ಟೇ ಕಳವಳ ವ್ಯಕ್ತಪಡಿಸಿದ್ದ ಕೇಂದ್ರ ಸರ್ಕಾರ, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿತ್ತು. ಈ ವರ್ಷ ಮೊದಲ ಏಳು ತಿಂಗಳ ಅವಧಿಯಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ 1,500ರ ಗಡಿಯ ಆಸುಪಾಸಿನಲ್ಲಿತ್ತು. ರಾಜ್ಯದಲ್ಲಿ ಇದುವರೆಗೆ ಒಟ್ಟು 3,279 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ.
ಸೆಪ್ಟೆಂಬರ್ ಮೊದಲ 2 ವಾರಗಳಲ್ಲಿ ಬೆಂಗಳೂರಿನಲ್ಲಿ 200ಕ್ಕೂ ಹೆಚ್ಚು ಡೆಂಗ್ಯೂ ಕೇಸುಗಳು ಪತ್ತೆಯಾಗಿತ್ತು. ಸೊಳ್ಳೆಯಿಂದ ಹರಡುವ ಡೆಂಗ್ಯೂದಿಂದ ಇದ್ದಕ್ಕಿದ್ದಂತೆ ಜ್ವರ ಶುರುವಾಗುತ್ತದೆ, ಗಂಟು ನೋವು ಕಾಣಿಸಿಕೊಳ್ಳುತ್ತದೆ. ಇದೀಗ ಡೆಂಗ್ಯೂ ರೂಪಾಂತರಿ ರೋಗ ಕೂಡ ಕಾಣಿಸಿಕೊಳ್ಳುತ್ತಿದ್ದು, ಕಣ್ಣಿನ ಹಿಂಭಾಗದಲ್ಲಿ ನೋವು, ಒಣ ಕಫ, ಕೆಮ್ಮು, ಹಲ್ಲಿನ ಒಸಡಿನಲ್ಲಿ ರಕ್ತ ಒಸರುವುದು, ಅತಿ ಹೆಚ್ಚಿನ ಋತುಸ್ರಾವ, ಮೂಗಿನಿಂದ ರಕ್ತ ಸುರಿಯುವುದು, ಮಲ ವಿಸರ್ಜನೆ ವೇಳೆ ರಕ್ತ ಸುರಿಯುವುದು, ವಿಪರೀತ ಸುಸ್ತು ಮುಂತಾದವು ಇದರ ಲಕ್ಷಣಗಳು.
ಬೆಂಗಳೂರಿನಲ್ಲಿ 575 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿವೆ. ಕಲಬುರ್ಗಿಯಲ್ಲಿ 313, ಉಡುಪಿಯಲ್ಲಿ 312, ಶಿವಮೊಗ್ಗದಲ್ಲಿ 235, ದಕ್ಷಿಣ ಕನ್ನಡದಲ್ಲಿ 190, ಕೊಪ್ಪಳದಲ್ಲಿ 160, ಬಳ್ಳಾರಿಯಲ್ಲಿ 145, ದಾವಣಗೆರೆಯಲ್ಲಿ 138, ಹಾವೇರಿಯಲ್ಲಿ 125, ಗದಗದಲ್ಲಿ 116 ಹಾಗೂ ವಿಜಯಪುರದಲ್ಲಿ 114 ಜನರಿಗೆ ಡೆಂಗ್ಯೂ ಕಾಣಿಸಿಕೊಂಡಿದೆ. ಈ ಬಗ್ಗೆ ಬಿಬಿಎಂಪಿಯ ಮುಖ್ಯ ಆರೋಗ್ಯಾಧಿಕಾರಿ ಡಾ. ಬಿ.ಕೆ. ವಿಜೇಂದ್ರ ಮಾಹಿತಿ ನೀಡಿದ್ದು, ಡೆಂಗ್ಯೂ ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಸೀಸನಲ್ ರೋಗವಾಗಿದೆ. ಆಗಸ್ಟ್ನಿಂದ ಅಕ್ಟೋಬರ್ ತಿಂಗಳಲ್ಲಿ ಡೆಂಗ್ಯೂ ಕೇಸುಗಳು ಹೆಚ್ಚಾಗುತ್ತವೆ. ಆದರೆ, ಈಗ ಪರಿಸ್ಥಿತಿತಿ ನಿಯಂತ್ರಣದಲ್ಲಿದೆ. ಮನೆಗಳ ಸುತ್ತಮುತ್ತ ಮಳೆನೀರು ನಿಲ್ಲದಂತೆ ನೋಡಿಕೊಳ್ಳುವುದು ಬಹಳ ಅಗತ್ಯ. ಈ ಬಗ್ಗೆ ಬಿಬಿಎಂಪಿ ಸಿಬ್ಬಂದಿ ಮನೆ ಮನೆ ಸಮೀಕ್ಷೆ ನಡೆಸುತ್ತಿದ್ದಾರೆ. ಈಗಾಗಲೇ ಬೆಂಗಳೂರಿನ 1,17,036 ಮನೆಗಳಿಗೆ ಭೇಟಿ ನೀಡಲಾಗಿದೆ. ಇನ್ನೂ ಸಮೀಕ್ಷೆ ಮುಂದುವರೆಯುತ್ತಿದೆ ಎಂದಿದ್ದಾರೆ.
ವಿಪರೀತ ಚಳಿ ಹಾಗೂ ಜ್ವರದಿಂದ ಆರಂಭವಾಗುವ ಡೆಂಗ್ಯೂ ಜ್ವರ ಸೋಂಕಿತ ವ್ಯಕ್ತಿಯಿಂದ ಬೇರೊಬ್ಬರಿಗೆ ಗಾಳಿಯ ಮೂಲಕ ಹರಡುತ್ತದೆ. ಮುಂಜಾನೆ ಕಚ್ಚುವ ಈಡಿಸ್ ಎಂಬ ಸೊಳ್ಳೆಯಿಂದ ಹರಡುವ ಡೆಂಗ್ಯೂ ನಮ್ಮ ದೇಹದೊಳಗೆ ಸೇರಿಕೊಳ್ಳುತ್ತಿದ್ದಂತೆ ಬಳಿ ರಕ್ತ ಕಣಗಳು ಕಡಿಮೆಯಾಗುತ್ತವೆ. ತೀವ್ರ ಜ್ವರ, ಸಂದು ನೋವು, ವಿಪರೀತ ತಲೆನೋವು, ತಲೆಸುತ್ತು, ವಾಂತಿ, ಮೈಯಲ್ಲಿ ಗುಳ್ಳೆಗಳು ಡೆಂಗ್ಯೂ ರೋಗದ ಮುಖ್ಯ ಲಕ್ಷಣಗಳು. 105 ಡಿಗ್ರಿ ತಾಪಮಾನಕ್ಕಿಂತಲೂ ಹೆಚ್ಚಿರುವ ನಿರಂತರ ಜ್ವರ ಕೊವಿಡ್ ಹಾಗೂ ಡೆಂಗ್ಯೂ ಎರಡೂ ರೋಗಗಳ ಲಕ್ಷಣವೂ ಹೌದು.
ಜ್ವರ ಬಂದಾಗ ದೇಹದ ಉಷ್ಣಾಂಶವನ್ನು ಹೆಚ್ಚಾಗುತ್ತಿದೆಯಾ ಅಥವಾ ಕಡಿಮೆಯಾಗುತ್ತಿದೆಯಾ? ಎಂಬುದನ್ನು ಪರೀಕ್ಷಿಸಿಕೊಳ್ಳುತ್ತಿರಿ. ಡೆಂಗ್ಯೂ ಬಂದರೆ ಮೈಯಲ್ಲಿ ಗುಳ್ಳೆ, ಚರ್ಮದ ಸುಕ್ಕು ಹಾಗೂ ಕೆಲವು ದಿನಗಳ ನಂತರ ತಲೆ ಸುತ್ತು ಹಾಗೂ ವಾಂತಿ ಕಾಣಿಸಿಕೊಳ್ಳುತ್ತದೆ. ಡೆಂಗ್ಯೂ ರೋಗಲಕ್ಷಣಗಳು ಸಾಮಾನ್ಯವಾಗಿ ಸೋಂಕು ತಗುಲಿದ ಮೂರರಿಂದ 14 ದಿನಗಳಲ್ಲಿ ಕಾಣಿಸಿಕೊಳ್ಳುತ್ತದೆ. ಹೆಚ್ಚಿನ ಜ್ವರ, ತಲೆನೋವು, ವಾಂತಿ, ಸ್ನಾಯು ಮತ್ತು ಸಂಧಿ ನೋವು, ಮತ್ತು ಗುಳ್ಳೆಗಳು ಕಂಡುಬಂದರೆ ವೈದ್ಯರನ್ನು ಭೇಟಿಯಾಗಿ.
ಡೆಂಗ್ಯೂ ಬಂದಾಗ ಹೆಚ್ಚಿನ ವಿಶ್ರಾಂತಿ ಬಹಳ ಮುಖ್ಯ. ಜ್ವರಕ್ಕೆ ಔಷಧವಾಗಿ ಪ್ಯಾರಸಿಟಮಾಲ್ ಬಳಸಿ. ಆದರೂ ಜ್ವರ ಕಡಿಮೆಯಾಗದಿದ್ದರೆ ಒದ್ದೆ ಬಟ್ಟೆಯಲ್ಲಿ ದೇಹವನ್ನು ಒರೆಸಿ. ದ್ರವ ಪದಾರ್ಥಗಳನ್ನೇ ಹೆಚ್ಚು ಸೇವಿಸಿ. ಅತಿಯಾದ ಸುಸ್ತು ಕಂಡುಬಂದಲ್ಲಿ ಅದು ಪ್ಲೇಟ್ಲೆಟ್ ಕಡಿಮೆಯಾಗಿರುವ ಲಕ್ಷಣವೂ ಆಗಿರಬಹುದು. ಹೊಟ್ಟೆ ನೋವು, ಎದೆನೋವು, ವಾಂತಿ, ರಕ್ತಸ್ರಾವ, ಮೂಗು, ವಸಡು ಮತ್ತು ಮಲಮೂತ್ರದ ಬಣ್ಣದಲ್ಲಿ ವ್ಯತ್ಯಾಸ ಕಂಡುಬಂದರೆ ಅದು ಡೆಂಗ್ಯೂ ಲಕ್ಷಣ.
ಇದನ್ನೂ ಓದಿ: Dengue Variant DENV-2 | 11 ರಾಜ್ಯಗಳಲ್ಲಿ ಹೊಸ ರೂಪದ ಡೆಂಗ್ಯೂ ಜ್ವರ ಪತ್ತೆ; ಆತಂಕ ಹೆಚ್ಚಿಸಿರುವ ಈ ರೋಗದ ಲಕ್ಷಣಗಳೇನು?
Dengue Symptoms: ನಿಮ್ಮ ಜ್ವರ ಡೆಂಗ್ಯೂ ಜ್ವರವಾ ಎಂದು ಪತ್ತೆ ಹಚ್ಚುವುದು ಹೇಗೆ?; ಇಲ್ಲಿದೆ ಉಪಯುಕ್ತ ಮಾಹಿತಿ
(Dengue Symptoms Bengaluru sees jump in dengue Fever cases BBMP takes steps to prevent larva breeding)
Published On - 5:09 pm, Tue, 28 September 21