ಧರ್ಮಸ್ಥಳ ಪ್ರಕರಣ: ಅನನ್ಯಾ ಭಟ್ ನಾಪತ್ತೆ ಅಸಲಿಯತ್ತೇನು? ರಿಪ್ಪನ್ ಪೇಟೆಗೆ ತೆರಳಿ ಮಾಹಿತಿ ಕಲೆ ಹಾಕಿದ ಎಸ್​ಐಟಿ

Dharmasthala mass burial case; ಧರ್ಮಸ್ಥಳ ಪ್ರಕರಣ ಸಂಬಂಧ ಅನನ್ಯಾ ಭಟ್ ನಾಪತ್ತೆ ಆರೋಪ ಕುರಿತ ತನಿಖೆಯನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಚುರುಕುಗೊಳಿಸಿದೆ. ಮತ್ತೊಂದೆಡೆ, ಅನಾಮಿಕನ ದೂರಿನ ಆಧಾರದಲ್ಲಿ ನಡೆಯುತ್ತಿದ್ದ ಉತ್ಖನನವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದು, ಆತನನ್ನೇ ವಿಚಾರಣೆಗೆ ಒಳಪಡಿಸುತ್ತಿದೆ. ಶಿವಮೊಗ್ಗದ ರಿಪ್ಪನ್​ ಪೇಟೆಗೆ ತೆರಳಿದ ಎಸ್​ಐಟಿ ತಂಡ ಅನನ್ಯಾ ಭಟ್ ಬಗ್ಗೆ ಮಾಹಿತಿ ಕಲೆ ಹಾಕಿದೆ.

ಧರ್ಮಸ್ಥಳ ಪ್ರಕರಣ: ಅನನ್ಯಾ ಭಟ್ ನಾಪತ್ತೆ ಅಸಲಿಯತ್ತೇನು? ರಿಪ್ಪನ್ ಪೇಟೆಗೆ ತೆರಳಿ ಮಾಹಿತಿ ಕಲೆ ಹಾಕಿದ ಎಸ್​ಐಟಿ
ಸುಜಾತಾ ಭಟ್, ಒಳಚಿತ್ರದಲ್ಲಿ ನಾಪತ್ತೆಯಾಗಿದ್ದರ ಎನ್ನಲಾಗಿರುವ ಅನನ್ಯಾ ಭಟ್

Updated on: Aug 18, 2025 | 11:23 AM

ಬೆಂಗಳೂರು, ಆಗಸ್ಟ್ 18: ಧರ್ಮಸ್ಥಳ (Dharmasthala) ಆಸುಪಾಸಿನಲ್ಲಿ ನೂರಾರು ಶವ ಹೂತಿರುವುದಾಗಿ ಅನಾಮಿಕ ವ್ಯಕ್ತಿ ನೀಡಿದ ದೂರಿನ ಆಧಾರದಲ್ಲಿ ಕಳೆದ ಹದಿನೈದು ದಿನಗಳಿಗೂ ಹೆಚ್ಚು ಕಾಲ ತನಿಖೆ, ಉತ್ಖನನ ನಡೆಸಿರುವ ವಿಶೇಷ ತತನಿಖಾ ತಂಡ ಇದೀಗ ಕಾರ್ಯವನ್ನು ಚುರುಕುಗೊಳಿಸಿದೆ. ಆದರೆ, ಸದ್ಯದ ಮಟ್ಟಿಗೆ ಉತ್ಖನನ ನಿಲ್ಲಿಸಲಾಗಿದೆ. ಅಲ್ಲದೆ, ಅನಾಮಿಕನನ್ನು ತೀವ್ರ ವಿಚಾರಣೆಗೆ ಒಳಪಡಿಸುತ್ತಿದೆ. ಮತ್ತೊಂದೆಡೆ, ಧರ್ಮಸ್ಥಳದಲ್ಲಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್​ಪೇಟೆ ನಿವಾಸಿ ಸುಜಾತಾ ಭಟ್ (Sujata Bhat) ಎಂಬವರ ಪುತ್ರಿ ಅನನ್ಯಾ ಭಟ್ (Ananya Bhat) ಎಂಬವರ ಕೊಲೆಯಾಗಿದೆ ಎಂಬ ಆರೋಪ ಸಂಬಂಧ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿದೆ. ಈ ವಿಚಾರವಾಗಿ ಇದೀಗ ಎಸ್​​ಐಟಿ ಮಾಹಿತಿ ಕಲೆ ಹಾಕಿದೆ.

ಸುಜಾತಾ ಭಟ್ ಎಂಬವರ ಮಗಳು ಅನನ್ಯಾ ಭಟ್ ಮಣಿಪಾಲದಲ್ಲಿ ವೈದ್ಯಕೀಯ ಶಿಕ್ಷಣ ಓದುತ್ತಿದ್ದವರು ಧರ್ಮಸ್ಥಳಕ್ಕೆ ತೆರಳಿದ ನಂತರ ನಾಪತ್ತೆಯಾಗಿದ್ದರು. ಆಕೆಯನ್ನು ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು ಎಂಬ ಆರೋಪಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಳೆದ ಕೆಲವು ದಿನಗಳಿಂದ ಮುನ್ನೆಲೆಗೆ ಬಂದಿತ್ತು. ಈ ವಿಚಾರವಾಗಿ, ಅನನ್ಯಾ ಭಟ್ ತಾಯಿ ಎನ್ನಲಾದ ಸುಜಾತಾ ಭಟ್ ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ನೀಡಿದ್ದಾರೆ. ಆದರೆ, ಅನನ್ಯಾ ಭಟ್ ಎಂಬಾಕೆ ಇರಲೇ ಇಲ್ಲ. ಮಣಿಪಾಲದಲ್ಲಿ ಆಕೆ ಶಿಕ್ಷಣ ಪಡೆದಿದ್ದಕ್ಕೆ ದಾಖಲೆಗಳಿಲ್ಲ ಎಂದು ಮತ್ತೊಂದು ಗುಂಪು ಸಾಮಾಜಿಕ ಮಾಧ್ಯಮಗಳಲ್ಲಿ ವಾದಿಸಿದೆ.

ಅನನ್ಯಾ ಭಟ್ ಅಸಲಿಯತ್ತೇನು? ಮಾಹಿತಿ ಕಲೆ ಹಾಕಿದ ಎಸ್​​ಐಟಿ

ಧರ್ಮಸ್ಥಳದಲ್ಲಿ ಅನನ್ಯಾ ಭಟ್ ನಾಪತ್ತೆ ಆರೋಪ​ ಪ್ರಕರಣ ಸಂಬಂಧ ಎಸ್​​ಐಟಿ ಸಿಪಿಐ ಮಂಜುನಾಥ್ ಗೌಡ ನೇತೃತ್ವದ ತಂಡ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್​ಪೇಟೆಗೆ ತೆರಳಿ ಮಾಹಿತಿ ಕಲೆ ಹಾಕಿದೆ. ಸುಜಾತಾ ಭಟ್ 1999ರಿಂದ 2007ರವರೆಗೆ ರಿಪ್ಪನ್​ಪೇಟೆಯಲ್ಲಿ ವಾಸವಾಗಿದ್ದಾರೆ ಎನ್ನಲಾಗಿದೆ. ಧರ್ಮಸ್ಥಳ ಪ್ರಕರಣದಲ್ಲಿ ಸುಜಾತಾ ಭಟ್ ಪಾತ್ರವೇನು? ನಿಜವಾಗಿಯೂ ಅವರಿಗೆ ಮಗಳಿದ್ದರೇ? ಅನನ್ಯಾ ಭಟ್ ಹಿನ್ನೆಲೆ ಏನು ಎಂಬ ಬಗ್ಗೆ ಎಸ್​ಐಟಿ ಮಾಹಿತಿ ಕಲೆ ಹಾಕಿದೆ.

ಅನಾಮಿಕ ದೂರುದಾರನ ತೀವ್ರ ವಿಚಾರಣೆ

ಅನಾಮಿಕ ದೂರುದಾರ ತಿಳಿಸಿರುವ ಸ್ಥಳಗಳಲ್ಲೆಲ್ಲ ಎಸ್​ಐಟಿ ಅಧಿಕಾರಿಗಳ ನೇತೃತ್ವದಲ್ಲಿ ಉತ್ಖನನ ನಡೆಸಲಾಗಿತ್ತು. ಒಂದೆರಡು ಕಡೆ ಮೂಳೆ, ಅಸ್ಥಿಪಂಜರ ಸಿಕ್ಕಿದ್ದು ಬಿಟ್ಟರೆ ಉಳಿದಂತೆ ಯಾವುದೇ ಪ್ರಗತಿಯಾಗಿರಲಿಲ್ಲ. ಈ ಮಧ್ಯೆ, ಪ್ರಕರಣ ಸಂಬಂಧ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಘಿ ಊಹಾಪೋಹಗಳು ಹರಡುತ್ತಿವೆ. ಇದೀಗ ಎಸ್​ಐಟಿ ಅನಾಮಿಕ ದೂರುದಾರನನ್ನೇ ತೀವ್ರ ವಿಚಾರಣೆಗೆ ಒಳಪಡಿಸಲು ನಿರ್ಧರಿಸಿದ್ದು, ಸೋಮವಾರ ಬೆಳಗ್ಗೆಯಿಂದಲೇ ವಿಚಾರಣೆ ಆರಂಭಿಸಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿ ಹಬ್ಬಿದವರಿಗೆ ನೋಟಿಸ್

ಧರ್ಮಸ್ಥಳ ಪ್ರಕರಣ ಸಂಬಂಧ ಸಾಮಾಜಿಕ ಮಾಧ್ಯಮಗಳಲ್ಲಿ ಊಹಾಪೋಹದ ವಿಡಿಯೋಗಳನ್ನು ಹರಿಯಬಿಟ್ಟವರಿಗೆ ಎಸ್​ಐಟಿ ನೋಟಿಸ್ ನೀಡಲು ಆರಂಭಿಸಿದೆ. ಈ ಸಂಬಂಧ ವಿಶೇಷ ತಂಡ ರಚಿಸಿರುವ ಎಸ್​​ಐಟಿ, ತನಿಖೆ ಕುರಿತು ಬಾಯಿಗೆ ಬಂದಂತೆ ಮಾತನಾಡಿದವರ ಪಟ್ಟಿ ರೆಡಿ ಮಾಡಿಕೊಂಡಿದೆ.

ಇದನ್ನೂ ಓದಿ: ಇದು ಖಾಲಿ ಟ್ರಂಕ್, ಧರ್ಮಸ್ಥಳದ ವಿರುದ್ಧ ದೊಡ್ಡ ಷಡ್ಯಂತ್ರ ನಡೆದಿದೆ ಎಂದ ಡಿಕೆ ಶಿವಕುಮಾರ್

ಧರ್ಮಸ್ಥಳ ಪ್ರಕರಣ ಸಂಬಂಧ ಕಳೆದ ಒಂದೂವರೆ ತಿಂಗಳಿನಿಂದ ಎಲ್ಲಾ ವೀಡಿಯೋಗಳನ್ನು ಎಸ್​ಐಟಿ ವಿಶೇಷ ತಂಡ ಸಂಗ್ರಹಿಸಿದೆ. ಸೋಶಿಯಲ್ ಮೀಡಿಯಾವನ್ನು ಸಂಪೂರ್ಣವಾಗಿ ಮಾನಿಟರ್ ಮಾಡಲಾಗುತ್ತಿದೆ.

ಮಾಹಿತಿ: ಶಿವಮೊಗ್ಗದಿಂದ ಬಸವರಾಜ್ ಯರಗಣವಿ, ಮಂಗಳೂರಿನಿಂದ ಅಶೋಕ್, ಟಿವಿ9

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:05 am, Mon, 18 August 25