ಧಾರವಾಡ, ಮೇ 12: ಧಾರವಾಡ ಅಂದಕೂಡಲೇ ಫೇಡಾ ಅನ್ನೋ ಹೆಸರಿನ ಜೊತೆಗೆ ಧಾರವಾಡ ಆಪೋಸಾ ಅನ್ನೋ ಹೆಸರು ಕೂಡ ಕೇಳಿ ಬರುತ್ತೆ. ಎಲ್ಲೆಡೆ ಮಾವು ಸಿಗುತ್ತದಾದರೂ ಧಾರವಾಡದಲ್ಲಿ ಬೆಳೆಯೋ ಆಪೋಸಾ ಹಣ್ಣಿನ (Alphonso mango) ಪರಿಯೇ ಬೇರೆ. ಇಲ್ಲಿ ಬೆಳೆಯೋ ಆಪೋಸಾ ಹಣ್ಣಿಗೆ ಇದುವರೆಗೂ ಸೌದಿ ರಾಷ್ಟ್ರಗಳಲ್ಲಿ ಬೇಡಿಕೆ ಇತ್ತು. ಆದರೆ ಈ ಬಾರಿ ಈ ಹಣ್ಣಿಗೆ ಅಮೇರಿಕಾದಿಂದಲೂ (America)
ಬೇಡಿಕೆ ಬಂದಿದ್ದು, ಇದೀಗ ಆಪೋಸಾ ಅಲ್ಲಿಗೆ ಹಾರಲು ಸಿದ್ಧವಾಗಿದೆ.
ಧಾರವಾಡದ ಆಲ್ಫ್ಯಾನ್ಸೋ ಸಾಕಷ್ಟು ಪ್ರಸಿದ್ಧಿ. ಇದುವರೆಗೂ ಇಲ್ಲಿನ ಮಾವು ದೇಶದ ವಿವಿಧ ರಾಜ್ಯಗಳಿಗೆ ರವಾನೆಯಾಗುತ್ತಿದ್ದವು. ಕಳೆದ ಎರಡು ವರ್ಷಗಳಿಂದ ಸೌದಿ ರಾಷ್ಟ್ರಗಳಿಗೆ ಈ ಹಣ್ಣು ರಫ್ತಾಗುತ್ತಿದ್ದವು. ಆದರೆ ಈ ಬಾರಿ ಈ ಹಣ್ಣುಗಳಿಗೆ ಅಮೇರಿಕಾದಿಂದ ಡಿಮ್ಯಾಂಡ್ ಬಂದಿದೆ. ಅಮೇರಿಕಾದ ಕೆಲ ನಗರಗಳಿಂದ ಈ ಹಣ್ಣುಗಳಿಗೆ ಬೇಡಿಕೆ ಬಂದಿದ್ದು, ಈ ಬಾರಿ ಇವು ಅಮೇರಿಕಾಕ್ಕೆ ಹಾರಲಿವೆ. ಇನ್ನು ಕಳೆದ ತಿಂಗಳು ಅಮೇರಿಕಾದ ಐವರು ಧಾರವಾಡ ತಾಲೂಕಿನ ಕಲಿಕೇರಿ ಗ್ರಾಮದ ಬಳಿ ಇರೋ ಪ್ರಮೋದ ಗಾಂವ್ಕರ್ ಅನ್ನೋ ರೈತನ ಮಾವಿನ ತೋಟಕ್ಕೆ ಬಂದು, ಇಲ್ಲಿನ ಕಾಯಿಗಳನ್ನು ಪರೀಕ್ಷಿಸಿ ಹೋಗಿದ್ದಾರೆ. ಬಳಿಕ ಇಲ್ಲಿ ಉತ್ತಮ ಗುಣಮಟ್ಟದ ಮಾವು ಸಿಗೋದು ಖಚಿತವಾಗಿದ್ದಕ್ಕೆ ಒಟ್ಟು 5 ಟನ್ ಮಾವು ಆರ್ಡರ್ ಮಾಡಿದ್ದಾರೆ. ಆದರೆ ಈ ಬಾರಿ ಇಳುವರಿ ಕಡಿಮೆ ಇರೋದ್ರಿಂದ 3 ಟನ್ ಮಾವು ಕಳಿಸೋದಾಗಿ ಪ್ರಮೋದ ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: ಮಾವು ಪ್ರಿಯರೇ ಎಚ್ಚರ! ಮಾರುಕಟ್ಟೆಗೆ ಬಂದಿವೆ ರಾಸಾಯನಿಕ ಮಿಶ್ರಿತ ಹಣ್ಣುಗಳು
ಇನ್ನು ಅಮೇರಿಕಾದ ಸ್ಯಾನ್ಫ್ರಾನ್ಸಿಸ್ಕೋ ಮತ್ತು ಚಿಕಾಗೋದಿಂದ ಈ ಬಾರಿ ಆರ್ಡರ್ ಬಂದಿದೆ. ಈ ಕಾಯಿಗಳನ್ನು ಮೊದಲಿಗೆ ಮುಂಬೈಗೆ ಕಳಿಸಲಾಗುತ್ತೆ. ಮುಂಬೈವರೆಗೆ ಸಾಗಿಸಲು ವಿಶೇಷವಾದ ವಾಹನವೊಂದು ಬಂದಿದೆ. ಮುಂಬೈ ತಲುಪಿದ ಬಳಿಕ ಅಲ್ಲಿ ಮತ್ತೊಮ್ಮೆ ಗುಣಮಟ್ಟವನ್ನು ಪರೀಕ್ಷಿಸಿ, ಅಲ್ಲಿಂದ ನೇರವಾಗಿ ಅಮೇರಿಕಾಕ್ಕೆ ರಫ್ತು ಮಾಡಲಾಗುತ್ತೆ. ಇನ್ನು ರೈತ ಪ್ರಮೋದ ಒಟ್ಟು 50 ಎಕರೆ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಹೊಸ ಹೊಸ ಪ್ರಯೋಗಗಳ ಮೂಲಕ ನಾಡಿನಾದ್ಯಂತ ಹೆಸರು ಪಡೆದಿರೋ ಪ್ರಮೋದ ಅವರ ತೋಟದಿಂದಲೇ ಇದೀಗ ಮಾವು ಅಮೇರಿಕಾಕ್ಕೆ ಹಾರುತ್ತಿವೆ. ಇದು ಸಹಜವಾಗಿ ಖುಷಿ ತಂದಿದೆ.
ಇದನ್ನೂ ಓದಿ: ಧಾರವಾಡದಲ್ಲಿ ನೈಸರ್ಗಿಕವಾಗಿ ಬೆಳೆದ ಆಲ್ಫೊನ್ಸೋ ಮಾವಿನ ಮೇಳ; ಕೆ.ಜಿ ಗೆ ಎಷ್ಟು ಗೊತ್ತಾ?
ಕೆಜಿಯೊಂದಕ್ಕೆ 175 ರೂಪಾಯಿ ದರ ನಿಗದಿ ಮಾಡಲಾಗಿದೆ. ಇನ್ನು ಇದೇ ವೇಳೆ ಸ್ಥಳೀಯವಾಗಿಯೂ ಈ ತೋಟದ ಹಣ್ಣಿಗೆ ಭಾರೀ ಡಿಮ್ಯಾಂಡ್ ಬಂದಿದೆ. ನಿತ್ಯವೂ ಹತ್ತಾರು ಕ್ವಿಂಟಾಲ್ ಹಣ್ಣು ಮಾರುಕಟ್ಟೆಗೆ ಹೋಗುತ್ತಲೇ ಇವೆ. ಕಳೆದ ನಾಲ್ಕಾರು ವರ್ಷಗಳಿಂದ ವಿವಿಧ ಕಾರಣಗಳಿಂದಾಗಿ ಮಾವು ಬಂದಿರಲೇ ಇಲ್ಲ. ಈ ಬಾರಿ ಇದ್ದುದರಲ್ಲಿಯೇ ಉತ್ತಮ ಅನ್ನುವ ರೀತಿ ಬೆಳೆ ಬಂದಿದೆ. ಇಂಥ ವೇಳೆಯೇ ವಿದೇಶಗಳಿಂದಲೂ ಬೇಡಿಕೆ ಬಂದಿರೋದು ಧಾರವಾಡದ ರೈತರ ಪಾಲಿಗೆ ಸಂತಸದ ವಿಚಾರವೇ ಸರಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:09 pm, Sun, 12 May 24