ಧಾರವಾಡ, ಅಕ್ಟೋಬರ್ 04: ಶಾಂತಿಯ ತೋಟ ಎನ್ನುವ ಹೆಸರು ಹೊಂದಿರುವ ಜಿಲ್ಲೆಯಲ್ಲಿ ಕೆಲ ವರ್ಷಗಳ ಹಿಂದೆ ಸಿಮಿ ಉಗ್ರ ಸಂಘಟನೆ ಕಾರ್ಯಕರ್ತರು ಬಂಧಿತರಾಗಿದ್ದರು. ಅದಾದ ಬಳಿಕ ಐಸಿಸ್ ಉಗ್ರನೊಬ್ಬ ಧಾರವಾಡ (Dharwad) ದಲ್ಲಿ ಆರು ತಿಂಗಳ ಕಾಲ ನೆಲಸಿದ್ದ ಎನ್ನುವುದು ಕೂಡ ಬಹಿರಂಗವಾಗಿತ್ತು. ಇದೀಗ ಅಂಥದ್ದೇ ಮತ್ತೊಂದು ಪ್ರಕರಣ ಬಯಲಿಗೆ ಬಂದಿದೆ. ದೆಹಲಿಯಲ್ಲಿ ನಿನ್ನೆ ಬಂಧಿತರಾಗಿರುವ ಮೂವರು ಉಗ್ರರ ಪೈಕಿ ಓರ್ವ ಹುಬ್ಬಳ್ಳಿ-ಧಾರವಾಡದಲ್ಲಿ ಓಡಾಡಿರುವ ಬಗ್ಗೆ ಬಾಯಿ ಬಿಟ್ಟಿದ್ದಾನೆ. ಜೊತೆಗೆ ಬಂದೂಕು ಬಳಕೆ, ಬಾಂಬ್ ಸ್ಫೋಟದ ತರಬೇತಿಗೆ ಪ್ರಶಸ್ತ ತಾಣ ಎಂಬುವುದು ಬಂಧಿತ ಶಹನವಾಜ್‌ನಿಂದ ಸದ್ಯ ವಿಷಯ ಬಯಲಾಗಿದೆ.
ಈ ಮುಂಚೆಯೂ ಹಲವು ಉಗ್ರರ ಪ್ರಕರಣಗಳು ಜಿಲ್ಲೆಯಲ್ಲಿ ನಡೆದಿವೆ. 2008ರಲ್ಲಿ ಸಿಮಿ ಸಂಘಟನೆ ಶಂಕಿತರು ಬಂಧಿತರಾಗಿದ್ದರು. ಸಿಮಿ ಉಗ್ರರೊಂದಿಗೆ ನಂಟು ಹೊಂದಿರುವ ಶಂಕೆ ವ್ಯಕ್ತವಾಗಿತ್ತು. ಜೊತೆಗೆ ಜಿಲ್ಲೆಯ ಕಲಘಟಗಿಯಲ್ಲಿ ಉಗ್ರರು ತರಬೇತಿ ಪಡೆಯುತ್ತಿದ್ದರು. ಆ ಮೂಲಕ ಹುಬ್ಬಳ್ಳಿ ಮತ್ತು ದಾವಣಗೆರೆಯಲ್ಲಿ ಭಯೋತ್ಪಾದನಾ ನಿಗ್ರಹ ಪೊಲೀಸರಿಂದ 17 ಜನರ ಬಂಧನ ಮಾಡಲಾಗಿತ್ತು. ಈ ವೇಳೆ ಸ್ಫೋಟಕ ವಸ್ತುಗಳು ಮತ್ತು ಜಿಹಾದಿ ಸಾಹಿತ್ಯ ವಶಕ್ಕೆ ಪಡೆಯಲಾಗಿತ್ತು. ಸೂಕ್ತ ಸಾಕ್ಷಾಧಾರ ಇಲ್ಲದ ಹಿನ್ನೆಲೆ 2015ರಲ್ಲಿ ಆರೋಪಮುಕ್ತರಾಗಿದ್ದರು.
ಇದನ್ನೂ ಓದಿ: ಬಂಧಿತ ಉಗ್ರನಿಗಿದೆ ಧಾರವಾಡದ ನಂಟು, ದೆಹಲಿ ಪೊಲೀಸರ ಮಾಹಿತಿಯಿಂದ ಜನರಲ್ಲಿ ಆತಂಕ
ಇದೀಗ ದೆಹಲಿ ಪೊಲೀಸರಿಗೆ ಮೂವರು ಶಂಕಿತ ಉಗ್ರರು ಸೆರೆ ಸಿಕ್ಕಿದ್ದಾರೆ. ಹುಬ್ಬಳ್ಳಿ-ಧಾರವಾಡ ಸೇರಿ ಪಶ್ಚಿಮಘಟ್ಟದ ಕಾಡನ್ನು ಉಗ್ರರು ತರಬೇತಿಗೆ ಬಳಸಿಕೊಳ್ಳುವ ಉದ್ದೇಶ ಹೊಂದಿದ್ದರು ಎನ್ನಲಾಗಿದೆ. ಎನ್ಐಎ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿದ್ದ ಶಂಕಿತ ಐಸಿಸ್ ಉಗ್ರ ಮೊಹಮ್ಮದ್ ಶಹನವಾಜ್ ಈ ಭಾಗದಲ್ಲಿ ತರಬೇತಿ ಕ್ಯಾಂಪ್ ಮಾಡಲು ಓಡಾಡಿರುವ ಮಾಹಿತಿ ನೀಡಲಾಗಿದೆ. ಆ ಮೂಲಕ ಇದೀಗ ಮತ್ತೆ ಬಂಧಿತ ಉಗ್ರರಿಂದ ಅವಳಿ ನಗರದ ಬಗ್ಗೆ ಪ್ರಸ್ತಾಪ ಮಾಡಲಾಗಿದೆ.
ಇದನ್ನೂ ಓದಿ: ಕರ್ನಾಟಕವನ್ನು ಗೂಂಡಾ ರಾಜ್ಯ ಮಾಡಲು ಕಾಂಗ್ರೆಸ್ ಪಣ -ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಸಮಾಧಾನ
ಈ ಘಟನೆಯ ಬಳಿಕ ಜಿಲ್ಲೆಯಲ್ಲಿ ಸಾಕಷ್ಟು ಆತಂಕ ಸೃಷ್ಟಿಯಾಗಿದೆ. ಏಕೆಂದರೆ ಮೊದಲಿನಿಂದಲೂ ಧಾರವಾಡ ಶಾಂತಿಯ ಜಿಲ್ಲೆ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಉಗ್ರರು ಇಲ್ಲಿಯೇ ನೆಲೆಸಿ, ಉಗ್ರ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಈ ಪ್ರಕರಣದ ಬಳಿಕ ಧಾರವಾಡದಲ್ಲಿರುವ ಸ್ಲೀಪಿಂಗ್ ಸೆಲ್ಗಳ ಬಗ್ಗೆಯೂ ಅನುಮಾನ ಶುರುವಾಗಿದೆ. ಅಂಥ ಸ್ಲೀಪಿಂಗ್ ಸೆಲ್ಗಳನ್ನು ಪತ್ತೆ ಹಚ್ಚಿ, ಬಯಲಿಗೆ ತರಬೇಕಾದ ಜವಾಬ್ದಾರಿ ಇದೀಗ ಪೊಲೀಸರ ಮೇಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.