ಪ್ರಯಾಣಿಕರ ಗಮನಕ್ಕೆ: ಮೈಸೂರು-ಧಾರವಾಡ ಸೇರಿದಂತೆ 314 ರೈಲುಗಳ ವೇಳಾಪಟ್ಟಿ ಬದಲಾವಣೆ
ಮೈಸೂರು-ಧಾರವಾಡ ರೈಲು ನಿತ್ಯ ರಾತ್ರಿ 10.30ಕ್ಕೆ ಮೈಸೂರಿನಿಂದ ಹೊರಡುತ್ತದೆ. ಇದೀಗ ಸಮಯ ಬದಲಾವಣೆ ಮಾಡಲಾಗಿದ್ದು ಪರಿಷ್ಕೃತ ಸಮಯ ಇಲ್ಲಿದೆ.
ಮೈಸೂರು ಅ.01: ಮೈಸೂರು-ಧಾರವಾಡ ಎಕ್ಸ್‌ಪ್ರೆಸ್ ರೈಲು (Mysore-Dharwad Express Train) ಸಮಯದಲ್ಲಿ ಬದಲಾವಣೆ ಮಾಡಲಾದ ಹಿನ್ನೆಲೆಯಲ್ಲಿ ರವಿವಾರ ರಾತ್ರಿ ಮೈಸೂರು (Mysore) ರೈಲು ನಿಲ್ದಾಣದಲ್ಲಿ ಹಲವು ಪ್ರಯಾಣಿಕರು ಪರದಾಡುವಂತಾಯಿತು. ಮೈಸೂರು-ಧಾರವಾಡ ರೈಲು ನಿತ್ಯ ರಾತ್ರಿ 10.30ಕ್ಕೆ ಮೈಸೂರಿನಿಂದ ಹೊರಡುತ್ತದೆ. ಇದೀಗ ಸಮಯ ಬದಲಾವಣೆ ಮಾಡಲಾಗಿದ್ದು ರಾತ್ರಿ 8.30ಕ್ಕೆ ಪ್ರಯಾಣ ಆರಂಭಿಸಿದೆ.
ಇದರಿಂದ ರವಿವಾರ ರಾತ್ರಿ 8.30ರ ನಂತರ ಬಂದ 150ಕ್ಕೂ ಹೆಚ್ಚು ಪ್ರಯಾಣಿಕರಿಗೆ ತೊಂದರೆಯಾಗಿದೆ. ರೈಲು ಹೊರಟು ಹೋದ ಕಾರಣ ಪ್ರಯಾಣಿಕರು ನಿಲ್ದಾಣದಲ್ಲೇ ಉಳಿದಿದ್ದಾರೆ. ರೈಲಿನ ಸಮಯ ಬದಲಾವಣೆಯಾದ ಬಗ್ಗೆ ರೈಲ್ವೆ ಇಲಾಖೆಯ ಅಧಿಕಾರಿ ಮಾತನಾಡಿ “ರೈಲು ಸಮಯ ಬದಲಾದ ಬಗ್ಗೆ ಟಿಕೆಟ್ ಬುಕಿಂಗ್ ಸಮಯದಲ್ಲೇ ಪ್ರಯಾಣಿಕರಿಗೆ ಮಾಹಿತಿ ನೀಡಿದ್ದೇವೆ.
ಅಲ್ಲದೆ ಬುಕ್ ಮಾಡಿದವರ ಮೊಬೈಲ್ ನಂಬರ್‌ಗೆ ಮೆಸೆಜ್ ಕಳಸಿದ್ದೇವೆ” ಎಂದು ಸ್ಪಷ್ಟನೆ ನೀಡಿದರು. ಆದರೆ ಆದರೆ ಇದನ್ನು ನಿರಾಕರಿಸಿದ ಪ್ರಯಾಣಿಕರು ನಮಗೆ ಯಾವುದೇ ಮೆಸೇಜ್ ಬಂದಿಲ್ಲವೆಂದು ಆರೋಪ ಮಾಡಿದ್ದಾರೆ.
ಇದನ್ನೂ ಓದಿ: Pink Line: ಬೆಂಗಳೂರಿನ ಅತಿ ಉದ್ದದ ಭೂಗತ ಮೆಟ್ರೋ ಮಾರ್ಗ ಬಹುತೇಕ ರೆಡಿ, ನಮ್ಮ ಮೆಟ್ರೋ ರೈಲು ಸಂಚಾರಕ್ಕೆ BMRCL ಸಿದ್ಧತೆ
ಮೈಸೂರು-ಧಾರವಾಡ ರೈಲು ಬೆಳಗಾವಿವರೆಗೆ ವಿಸ್ತರಣೆ
ಕಳೆದ ತಿಂಗಳು ಮೈಸೂರು-ಧಾರವಾಡ ರೈಲನ್ನು ಬೆಳಗಾವಿವರೆಗೆ ವಿಸ್ತರಿಸಿ ರೈಲ್ವೆ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಬೆಳಗಾವಿ ಮತ್ತು ಮೈಸೂರು ಜಿಲ್ಲೆಯ ಪ್ರಯಾಣಿಕರ ಬಹುಕಾಲದ ಬೇಡಿಕೆಯನ್ನು ಈಡೇರಿಸುವ ಮೂಲಕ ಮೈಸೂರು ಧಾರವಾಡ ಎಕ್ಸ್‌ಪ್ರೆಸ್ ರೈಲನ್ನು ಬೆಳಗಾವಿಗೆ ವಿಸ್ತರಿಸಲು ರೈಲ್ವೆ ಮಂಡಳಿಯು ಅನುಮೋದನೆ ನೀಡಿತ್ತು. ಈ ವಿಷಯವನ್ನು ಬೆಳಗಾವಿಯ ಸಂಸದ ಈರಣ್ಣ ಕಡಾಡಿ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದರು.
ಬೆಳಗಾವಿ ಜಿಲ್ಲೆಯ ರೈಲು ಪ್ರಯಾಣಿಕರ ಬಹುದಿನಗಳ ಬೇಡಿಕೆಯಾಗಿದ್ದ ಧಾರವಾಡ-ಮೈಸೂರು ಏಕ್ಸಪ್ರೆಸ್ ರೈಲನ್ನು ಬೆಳಗಾವಿಯವರೆಗೆ ವಿಸ್ತರಣೆ ಮಾಡಿ ರೈಲ್ವೆ ಸಚಿವಾಲಯ ಆದೇಶ ನೀಡಿದೆ. (1/3) pic.twitter.com/xresYUMeam
— Iranna Kadadi-MP (@Irannakadadi_MP) September 7, 2023
314 ರೈಲುಗಳ ವೇಳಾಪಟ್ಟಿ ಬದಲಾವಣೆ
ಇನ್ನು ನೈಋತ್ಯ ರೈಲ್ವೆಯು ಅಕ್ಟೋಬರ್ 1 ರಿಂದ 314 ರೈಲುಗಳ ವೇಳಾಪಟ್ಟಿಯನ್ನು ಬದಲಾಯಿಸಿದೆ. ಹೊಸ ರೈಲುಗಳ ಪರಿಚಯ, ರೈಲುಗಳ ಆವರ್ತನ ಹೆಚ್ಚಳ, ರೈಲುಗಳ ವಿಸ್ತರಣೆ, ಹೊಸ ನಿಲುಗಡೆಗಳನ್ನು ಒದಗಿಸುವುದು, ಕೋಚ್‌ಗಳ ಶಾಶ್ವತ ಹೆಚ್ಚಳದ ಮಾಹಿತಿಯು ನೈಋತ್ಯ ರೈಲ್ವೆಯ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಈ ಬದಲಾವಣೆಗಳನ್ನು ಗಮನಿಸುವಂತೆ ರೈಲ್ವೆ ಪ್ರಯಾಣಿಕರಿಗೆ ಮನವಿ ಮಾಡಿದೆ. ಹೆಚ್ಚಿನ ವಿವರಗಳಿಗಾಗಿ ನೈಋತ್ಯ ರೈಲ್ವೆ https://swr.indianrailways.gov.in ವೆಬ್ಸೈಟ್ಗೆ ಭೇಟಿ ನೀಡಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:17 am, Mon, 2 October 23