ಸ್ವಾತಂತ್ರೋತ್ಸವದ ಜತೆಗೆ ಧಾರವಾಡದ 75 ವರ್ಷದ ಈ ರಾಷ್ಟ್ರಧ್ವಜಕ್ಕೂ ಅಮೃತ ಮಹೋತ್ಸವದ ಸಂಭ್ರಮ!

| Updated By: preethi shettigar

Updated on: Aug 14, 2021 | 4:58 PM

Independence Day 2021: ಸ್ವಾತಂತ್ರ್ಯೋತ್ಸವದ ಎರಡು ದಿನ ಮುಂಚೆ ಇದನ್ನು ಬ್ಯಾಂಕ್ ಲಾಕರ್‌ನಿಂದ ತೆಗೆದುಕೊಂಡು ಬಂದು, ಆಗಸ್ಟ್ 15ರಂದು ಧ್ವಜಾರೋಹಣ ಮಾಡಿ ಮರುದಿನ ಅದೇ ಲಾಕರ್‌ನಲ್ಲಿ ಇಟ್ಟು ಬರುತ್ತಾರೆ.

ಸ್ವಾತಂತ್ರೋತ್ಸವದ ಜತೆಗೆ ಧಾರವಾಡದ 75 ವರ್ಷದ ಈ ರಾಷ್ಟ್ರಧ್ವಜಕ್ಕೂ ಅಮೃತ ಮಹೋತ್ಸವದ ಸಂಭ್ರಮ!
75 ವರ್ಷದ ರಾಷ್ಟ್ರ ಧ್ವಜ
Follow us on

ಧಾರವಾಡ: ಈ ಬಾರಿಯ ಸ್ವಾತಂತ್ರ್ಯ ದಿನೋತ್ಸವಕ್ಕೆ ವಿಶೇಷತೆ ಇದೆ. ಏಕೆಂದರೆ ದೇಶದಲ್ಲಿ ಈ ಬಾರಿ ಆಚರಿಸಲ್ಪಡುತ್ತಿರುವುದು 75 ನೇ ಸ್ವಾತಂತ್ರ್ಯೊತ್ಸವ. ಹೀಗಾಗಿ ದೇಶಾದ್ಯಂತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ವರ್ಷಾಚರಣೆ ನಡೆಯುತ್ತಿದೆ. ಸ್ವಾತಂತ್ರ್ಯದಂತೆಯೇ ಧಾರವಾಡದಲ್ಲೊಂದು ತ್ರಿವರ್ಣ ಧ್ವಜ ವಜ್ರ ಮಹೋತ್ಸವ ಆಚರಿಸಿಕೊಳ್ಳುತ್ತಿದೆ. ಆ ಧ್ವಜಕ್ಕೂ ಈಗ 75 ವರ್ಷ. 1947ರಲ್ಲಿ ಆರೋಹಣಗೊಂಡಿದ್ದ ಆ ಧ್ವಜ ಕಳೆದ 75 ವರ್ಷಗಳಿಂದ ಆರೋಹಣವಾಗುತ್ತಲೇ ಬಂದಿದೆ. ಅವತ್ತು ಹೇಗಿತ್ತೋ ಇವತ್ತು ಅದು ಹಾಗೆಯೇ ಇದೆ ಎಂಬುವುದು ವಿಶೇಷ.

ಪ್ರತಿವರ್ಷ ಬ್ಯಾಂಕ್ ಲಾಕರ್​ನಿಂದ ಹೊರ ಬರುತ್ತದೆ ತಿರಂಗಾ
ಧಾರವಾಡದ ಗಾಂಧಿ ನಗರದ ನಿವಾಸಿ ಡಾ. ಗಂಗಾಧರ ಕುಲಕರ್ಣಿ ಅವರು ನಿವೃತ್ತ ಪಶು ವೈದ್ಯಾಧಿಕಾರಿ. ಇವರು ಪ್ರತಿವರ್ಷ ಸ್ವಾತಂತ್ರ್ಯೋತ್ಸವಕ್ಕೆ ಎರಡು ದಿನ ಇರುವಾಗ‌ ಧಾರವಾಡ ನಗರದ ವಿದ್ಯಾಗಿರಿಯಲ್ಲಿರುವ ಕೆನರಾ ಬ್ಯಾಂಕ್‌ಗೆ ಹೋಗುತ್ತಾರೆ. ಹೀಗೆ ಹೋದ ಅವರ ಕೈಯಲ್ಲಿ ಮರಳಿ ಬರುವಾಗ ಚೀಲವೊಂದು ಇರುತ್ತದೆ. ಆ ಚೀಲದಲ್ಲಿ ಇರುವುದು 75 ವರ್ಷದ ತ್ರಿವರ್ಣ ಧ್ವಜ. ಹೌದು 75 ವರ್ಷದಿಂದ ಇದೇ ಧ್ವಜವನ್ನು ಆರೋಹಣ ಮಾಡುತ್ತಾ ಬಂದಿರುವ ಇವರು, ಅದನ್ನು ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದಾರೆ. ಸ್ವಾತಂತ್ರ್ಯೋತ್ಸವದ ಎರಡು ದಿನ ಮುಂಚೆ ಇದನ್ನು ಬ್ಯಾಂಕ್ ಲಾಕರ್‌ನಿಂದ ತೆಗೆದುಕೊಂಡು ಬಂದು, ಆಗಸ್ಟ್ 15ರಂದು ಧ್ವಜಾರೋಹಣ ಮಾಡಿ ಮರುದಿನ ಅದೇ ಲಾಕರ್‌ನಲ್ಲಿ ಇಟ್ಟು ಬರುತ್ತಾರೆ.

ಎಲ್ಲಿಯದು ಈ ಧ್ವಜ? ಏನಿದರ ವಿಶೇಷತೆ?
ಗಂಗಾಧರ, ಚಿಕ್ಕವರಾಗಿದ್ದಾಗ ಆಗಸ್ಟ್ 15ರ 1947ರಂದು ಅವರ ಗುರುಗಳು ನಾಲ್ಕಾಣೆ ಪಡೆದು ಇದನ್ನು ಕೊಟ್ಟಿದ್ದರಂತೆ. ಗಂಗಾಧರ ಅವರು ತಮ್ಮ ತಾಯಿಗೆ ಇದನ್ನು ತಂದು ಕೊಟ್ಟಿದ್ದರು. ಮೂಲತಃ ವಿಜಯಪುರ ಜಿಲ್ಲೆ ನಾಲ್ವತವಾಡ ಗ್ರಾಮದವರಾದ ಅವರು, ತಮ್ಮ ನಿವಾಸದ ಮುಂದೆ ಪ್ರತಿ ವರ್ಷ ಧ್ವಜಾರೋಹಣ ಮಾಡಿದ ಬಳಿಕ ಧ್ವಜವನ್ನು ಜೋಪಾನವಾಗಿಟ್ಟುಕೊಂಡು ಬಂದಿದ್ದರಂತೆ. ಆದರೆ ಗಂಗಾಧರ ಅವರು ಧಾರವಾಡಕ್ಕೆ ಬಂದ ಬಳಿಕ ಇಲ್ಲಿಯೇ ಅದನ್ನು ಮುಂದುವರೆಸಿದ್ದು, ದೇಶದ ಪ್ರಮುಖ ಆಸ್ತಿ ಎಂದುಕೊಂಡು ಅದನ್ನು ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದಾರೆ.

ಗಂಗಾಧರ ತಾಯಿ ಕೂಡ ಇದನ್ನು ಕಾಪಾಡಿಕೊಂಡಿದ್ದರು
ಗಂಗಾಧರ ಅವರು ಬಾಲ್ಯದಲ್ಲಿದ್ದಾಗ ಹಾಗೂ ವಿದ್ಯಾಭ್ಯಾಸಕ್ಕೆ ಬೇರೆ ಕಡೆ ಹೋಗಿದ್ದಾಗ, ಇವರ ತಾಯಿಯವರೇ ಅದನ್ನು ಜೋಪಾನ ಮಾಡಿದ್ದಾರೆ. ಆಗಸ್ಟ್ 15 ರಂದು ಮಾತ್ರ ಹೊರಗೆ ತೆಗೆದು ಧ್ವಜಾರೋಹಣ ಮಾಡುತ್ತಿದ್ದರಂತೆ. ಆ ಬಳಿಕ ಸ್ಥಳೀಯ ಶಾಲೆಯಲ್ಲಿಯೂ ಕೆಲ ವರ್ಷ ಆರೋಹಣ ಮಾಡಿದ್ದರು.

2011ರಿಂದ ಧಾರವಾಡದಲ್ಲಿಯೇ ನಿರಂತವಾಗಿ ಈ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿದ್ದು, ಪ್ರತಿ ವರ್ಷ ಶಾರ್ಜಾ ಮತ್ತು ಬೆಂಗಳೂರಿನಲ್ಲಿರುವ ಇವರ ಪುತ್ರಿಯರು ಹಾಗೂ ದೂರದೂರಿನ ಸಂಬಂಧಿಗಳೆಲ್ಲರೂ ಮನೆಯಲ್ಲಿನ ಸಂಭ್ರಮದ ಕಾರ್ಯಕ್ಕೆ ಪಾಲ್ಗೊಳ್ಳುವಂತೆ ಬಂದು ಹೋಗುತ್ತಿದ್ದರು. ಆದರೆ ಕಳೆದ ವರ್ಷದಿಂದ ಕೊರೊನಾ ಕಾರಣಕ್ಕೆ ಯಾವುದೇ ಸಂಬಂಧಿಗಳು ಬಂದಿಲ್ಲ. ಆದರೆ ಸ್ಥಳೀಯ ಕೆಲವರು ಗಂಗಾಧರ ಅವರಿಗೆ ಸಾಥ್ ನೀಡುತ್ತಿದ್ದಾರೆ. ಅಲ್ಲದೇ ಅನೇಕರು ಪ್ರತಿ ವರ್ಷ ಆಗಸ್ಟ್ 15ರಂದು ಈ ವಿಶೇಷ ಧ್ವಜ ನೋಡಲು ಇವರ ಮನೆಗೆ ಬರುತ್ತಾರೆ.

ಈ ಧ್ವಜ ನಮ್ಮ ಹೆಮ್ಮೆಯ ಸಂಕೇತ. ಪ್ರತಿವರ್ಷ ಇದನ್ನು ಲಾಕರ್‌ನಿಂದ ಬಿಡಿಸಿಕೊಂಡು ತಂದು ಧ್ವಜಾರೋಹಣ ಮಾಡುತ್ತೇವೆ. ಬಳಿಕ ಮರುದಿನ ಅದನ್ನು ತೊಳೆದು, ಇಸ್ತ್ರಿ ಮಾಡಿ ಲಾಕರ್‌ನಲ್ಲಿ ಇಡುತ್ತೇವೆ. ಹೀಗೆ ಇಡುವಾಗ ಧ್ವಜ ಕಡೆದಂತೆ ನೆಫ್ತಾಲ್ ಮಾತ್ರೆಗಳನ್ನು ಅದರೊಂದಿಗೆ ಇಡುತ್ತೇವೆ. ಅವಕಾಶ ಸಿಕ್ಕಾಗಲೆಲ್ಲ ಬ್ಯಾಂಕ್‌ಗೆ ಬಂದು ಇದನ್ನು ನೋಡಿಕೊಂಡು ಬರುತ್ತೇನೆ ಎಂದು ಟಿವಿ9 ಡಿಜಿಟಲ್​ಗೆ ಗಂಗಾಧರ ತಿಳಿಸಿದ್ದಾರೆ.

ಇದು ನಿಜಕ್ಕೂ ರಾಷ್ಟ್ರವೇ ಹೆಮ್ಮೆ ಪಡುವಂಥ ವಿಚಾರ. ಇತ್ತೀಚಿನ ದಿನಗಳಲ್ಲಿ ರಾಷ್ಟ್ರ, ರಾಷ್ಟ್ರ ಧ್ವಜಗಳ ಬಗ್ಗೆ ಅಭಿಮಾನವೇ ಕಡಿಮೆಯಾಗುತ್ತಿದೆ. ಇಂಥ ಸಂದರ್ಭದಲ್ಲಿ ಗಂಗಾಧರ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ. ಈ ಇಳಿ ವಯಸ್ಸಿನಲ್ಲಿಯೂ ಅವರು ತಪ್ಪದೇ 75 ವರ್ಷದ ಧ್ವಜವನ್ನು ಬ್ಯಾಂಕಿನಿಂದ ತಂದು ಹಾರಿಸುತ್ತಾರೆ. ಇದು ನಿಜಕ್ಕೂ ಕೂಡ ಅಚ್ಚರಿಯ ಸಂಗತಿ ಜೊತೆಗೆ ಖುಷಿಯ ವಿಚಾರವೂ ಹೌದು ಎಂದು ಸ್ಥಳೀಯರಾದ ರಾಜೇಶ ಕುಲಕರ್ಣಿ ಅಭಿಪ್ರಾಯಪಟ್ಟಿದ್ದಾರೆ.

ವರದಿ: ನರಸಿಂಹಮೂರ್ತಿ ಪ್ಯಾಟಿ

ಇದನ್ನೂ ಓದಿ:
75ನೇ ಸ್ವಾತಂತ್ರ್ಯೋತ್ಸವ: ಇಂದು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ರಾಷ್ಟ್ರಪತಿ ರಾಮನಾಥ ಕೋವಿಂದ್​

ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ದೆಹಲಿ ಕೆಂಪುಕೋಟೆಯ ಸುತ್ತ ಪೊಲೀಸ್ ಭದ್ರತೆಯ ಕೋಟೆ

Published On - 3:24 pm, Sat, 14 August 21